ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಜುಕೋರರ ಸುತ್ತ ಅನುಮಾನದ ಹುತ್ತ

ಕುಡಿಯುವ ನೀರು ಪೂರೈಕೆ ಮಾಡುವ ವಾಲ್ವ್‌ಗೆ ಕ್ರಿಮಿನಾಶಕ ಬೆರೆಸಿದ ಪ್ರಕರಣ
Last Updated 11 ಜನವರಿ 2019, 19:18 IST
ಅಕ್ಷರ ಗಾತ್ರ

ಯಾದಗಿರಿ: ಹುಣಸಗಿ ತಾಲ್ಲೂಕು ಮುದನೂರಿನಿಂದ ಕುಡಿಯುವ ನೀರು ಪೂರೈಕೆ ಮಾಡುವ ವಾಲ್ವ್‌ಗೆ ಕ್ರಿಮಿನಾಶಕ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಶಂಕಿತ ಜೂಜುಕೋರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇದಲ್ಲದೆ ಅರಕೇರಾ (ಬೆ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ರಾಮಪ್ಪ, ಪಂಪ್‌ ಆಪರೇಟರ್ ಮೌನೇಶ್ ಹಾಗೂ ತೆಗ್ಗಳ್ಳಿ, ಶಾಖಾಪುರದ ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದುಮೂಲಗಳು ತಿಳಿಸಿವೆ.

‘ಮುದನೂರಿನ ತೆರೆದಬಾವಿಯಿಂದ ತೆಗ್ಗಳ್ಳಿ ಹಾಗೂ ಶಾಖಾಪುರಕ್ಕೆ ಕುಡಿಯುವ ನೀರು ಪೂರೈಸಲಾಗುತ್ತದೆ. ಈ ಬಾವಿ ಪಕ್ಕ ನೀರು ಶುದ್ಧೀಕರಣ ಘಟಕವಿದ್ದು, ಅದು ಕೆಟ್ಟಿದೆ. ಮುದನೂರಿನ ಕೆಲವರು ನಿತ್ಯ ಇಲ್ಲಿಗೆ ಬಂದು ಇಸ್ಪೀಟ್‌ ಆಡುವುದು, ಗಲೀಜು ಮಾಡುವುದು ನಡೆದೇ ಇತ್ತು. ಪಂಪ್‌ ಆಪರೇಟರ್‌ ಮೌನೇಶ ಜೂಜುಕೋರರಿಗೆ ಅಲ್ಲಿ ಗಲೀಜು ಮಾಡದಂತೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದೇ ಕಾರಣಕ್ಕಾಗಿ ಮೌನೇಶ ಜೂಜುಕೋರರೊಂದಿಗೆ ಜಗಳವಾಡಿದ್ದ. ಇದೇ ದ್ವೇಷದಿಂದ ಈ ಕೃತ್ಯವನ್ನು ಎಸಗಿರಬಹುದು’ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಈಗ ಇದೇ ಜಾಡಿನಲ್ಲಿ ತನಿಖೆ ಸಾಗಿದೆ.

ಅಗ್ರೊ ಪಾಸ್ಫರಸ್‌ ನುವಾನ್ ಬಳಕೆ:

ಭತ್ತದ ಹಾಲುತೆನೆಯ ಮೇಲೆ ಕುಳಿತು ರಸ ಹೀರುವ ಕೀಟಗಳನ್ನು ಕೊಲ್ಲಲು ರೈತರು ‘ಅಗ್ರೊ ಪಾಸ್ಫರಸ್ ನುವಾನ್‌’ ಕೀಟನಾಶಕವನ್ನು ಬಳಸುತ್ತಾರೆ. ಅದು ಮನುಷ್ಯರ ದೇಹ ಪ್ರವೇಶಿಸಿದರೆ ಬದುಕುಳಿಯುವುದು ಕಷ್ಟ. ಅದೇ ಕ್ರಿಮಿನಾಶಕವನ್ನು ದುಷ್ಕರ್ಮಿಗಳು ಕುಡಿಯುವ ನೀರಿಗೆ ಬೆರೆಸಿದ್ದರು.

‘ಕೆಂಪು ಅಗ್ರೊ ಪಾಸ್ಫರಸ್ ಅತ್ಯಂತ ವಿಷಕಾರಿ. ಮುದನೂರು ಬಾವಿಯ ಮೇಲೆ ಪೊಲೀಸರಿಗೆ ಸಿಕ್ಕಿರುವ ಕೀಟನಾಶಕಗಳ ಅವಶೇಷಗಳು ಸಹ ಕೆಂಪು ಮಾದರಿಗೆ ಸೇರಿದ್ದು ಎನ್ನಲಾಗಿದೆ. ಇದು ಹೆಚ್ಚು ಅಪಾಯಕಾರಿ ಇರುತ್ತದೆ’ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪೀಡೆನಾಶಕ ಅವಶೇಷಗಳ ಮತ್ತು ಆಹಾರ ಗುಣ ವಿಶ್ಲೇಷಣಾ ಪ್ರಯೋಗಾಲಯದ ಮುಖ್ಯಸ್ಥ ಡಾ. ಭೀಮಣ್ಣ ಹೇಳುತ್ತಾರೆ.

‘ಡಿಟಿಟಿ, ಎಂಡೋಸಲ್ಫಾನ್‌ನಂತಹ ನಿಷೇಧಿತ ರಾಸಾಯನಿಕಗಳ ಪಟ್ಟಿಗೆ ಅಗ್ರೊಪಾಸ್ಫರಸ್ ನುವಾನ್ ಸೇರುತ್ತದೆ. ನೀರಿಗೆ ಹಾಕಿದರೆ ಹರಡಿಕೊಳ್ಳುತ್ತದೆ. ಇದನ್ನು ನಿಷೇಧಿಸಿ ನೈಸರ್ಗಿಕ ಸ್ನೇಹಿ ಅಗ್ರೊಪಾಸ್ಫರಸ್ ಕೀಟನಾಶಕಗಳನ್ನು ಮಾರುಕಟ್ಟೆಗೆ ತರಲಾಗುತ್ತಿದೆ’ ಎಂದು ಕವಡಿಮಟ್ಟಿಯಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಕೆಂಗನಾಳ ವಿವರಣೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT