ಶುಕ್ರವಾರ, ಜೂನ್ 5, 2020
27 °C

ನಕಲಿ ದಾಖಲೆ ಕೊಟ್ಟು ₹2 ಕೋಟಿ ಸಾಲ; ಸಿಐಡಿ ಪೊಲೀಸರಿಂದ ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗಳಿಂದ ಸಾಲ ಪಡೆದು ವಂಚಿಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಸಿಐಡಿ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಅರಕೆರೆ ಲೇಔಟ್‌ನ ಉದಯ್‌ ಪ್ರತಾಪ್ (48), ಅಯೂಬ್ ಅಲಿ (42), ಶಿವಮೊಗ್ಗದ ಮಹೇಶ್ ಅಲಿಯಾಸ್ ಮಾದೇಶ್ (36) ಹಾಗೂ ಬೆಂಗಳೂರು ರಾಜಾಜಿನಗರದ ರಾಮೇಗೌಡ (30) ಬಂಧಿತರು.

ಅವರಿಂದ ₹ 80 ಲಕ್ಷ ನಗದು, ಐಷಾರಾಮಿ ಕಾರು, ನಕಲಿ ಆಧಾರ್ ಹಾಗೂ ಪಾನ್‌ ಕಾರ್ಡ್‌ ಜಪ್ತಿ ಮಾಡಿದ್ದಾರೆ.

‘ನಕಲಿ ದಾಖಲೆ ಬಳಸಿಕೊಂಡೇ ಆರೋಪಿಗಳು ಬೆಂಗಳೂರು ಹಾಗೂ ಮೈಸೂರಿನ ಸುಮಾರು 40 ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದರು. ಸಾಲಕ್ಕಾಗಿ ಪ್ರತಿಯೊಂದು ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಆರು ಬ್ಯಾಂಕ್‌ಗಳು ₹ 2 ಕೋಟಿಯಷ್ಟು ಸಾಲ ಮಂಜೂರು ಮಾಡಿದ್ದವು’ ಎಂದು ಸಿಐಡಿ ಎಡಿಜಿಪಿ ಬಿ. ದಯಾನಂದ ಹೇಳಿದರು.

ಉದ್ಯೋಗಿಗಳ ವೇತನ ಖಾತೆ ನೆಪ: ‘ಅಸ್ತಿತ್ವವೇ ಇಲ್ಲದ ಕಂಪನಿಯ ಹೆಸರಿನಲ್ಲಿ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿದ್ದರು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರೆಂದು ಹೇಳಿಕೊಂಡು ಬ್ಯಾಂಕ್ ಅಧಿಕಾರಿಗಳನ್ನು ಪರಿಚಯಿಸಿಕೊಳ್ಳುತ್ತಿದ್ದರು. ಉದ್ಯೋಗಿಗಳಿಗೆ ವೇತನ ನೀಡುವ ನೆಪದಲ್ಲಿ ಖಾತೆ ತೆರೆಯುತ್ತಿದ್ದರು’ ಎಂದು ಸಿಐಡಿ ಸೈಬರ್ ವಿಭಾಗದ ಎಸ್ಪಿ ಎಂ.ಡಿ. ಶರತ್‌ ತಿಳಿಸಿದರು.

‘ಕಚೇರಿ ತೆರೆದಿದ್ದ ಆರೋಪಿಗಳು, ಅದರ ವಿಳಾಸವನ್ನೇ ಬ್ಯಾಂಕ್‌ಗಳಿಗೆ ನೀಡುತ್ತಿದ್ದರು. ಬ್ಯಾಂಕ್ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಬೇರೆ ಬೇರೆ ನಕಲಿ ಕಂಪನಿಗಳ ಫಲಕಗಳನ್ನು ಅಳವಡಿಸಿ ದಿಕ್ಕು ತಪ್ಪಿಸುತ್ತಿದ್ದರು’ ಎಂದರು.   

ಮಾನವ ಕಳ್ಳ ಸಾಗಣೆ, ವಂಚನೆಯಲ್ಲೂ ಭಾಗಿ 

‘ಮಾನವ ಕಳ್ಳ ಸಾಗಣೆ ಆರೋಪದಡಿ ಉದಯ್ ಪ್ರತಾಪ್ ವಿರುದ್ಧ ಹಲವು ಠಾಣೆಗಳಲ್ಲಿ 16 ಪ್ರಕರಣಗಳು ದಾಖಲಾಗಿದೆ. ವೈದ್ಯಕೀಯ ಸೀಟು ಕೊಡಿಸುವ ಆಮಿಷವೊಡ್ಡಿ ವಂಚಿಸಿದ್ದ ಆರೋಪದಡಿ ಅಯೂಬ್ ಅಲಿ ವಿರುದ್ಧವೂ ಐದು ಪ್ರಕರಣಗಳು ದಾಖಲಾಗಿವೆ’ ಎಂದು ಎಡಿಜಿಪಿ ಬಿ. ದಯಾನಂದ ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು