ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬರ ಅಧ್ಯಯನ ತಂಡದಿಂದ ಬೆಳೆಹಾನಿ ಪರಿಶೀಲನೆ: ವಾರದೊಳಗೆ ವರದಿ ಸಲ್ಲಿಕೆ

Last Updated 17 ನವೆಂಬರ್ 2018, 10:22 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಅನಾವೃಷ್ಟಿಯಿಂದ ಮುಂಗಾರು ಬೆಳೆಹಾನಿ ಆಗಿರುವ ಕುರಿತು ಒಂದು ವಾರದೊಳಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಪಶು ಸಂಗೋಪನೆ ಇಲಾಖೆಯ ನಿರ್ದೇಶಕ ಮಹೇಶ್ ಹೇಳಿದರು.

ಸವದತ್ತಿ ತಾಲ್ಲೂಕಿನ ಹೂಲಿಕಟ್ಟಿ ಕ್ರಾಸ್ ಬಳಿಯ ಹೊಲದಲ್ಲಿ ಹಾನಿಗೊಳಗಾಗಿರುವ ಹತ್ತಿ ಮತ್ತು ಸೂರ್ಯಕಾಂತಿ ಬೆಳೆಯನ್ನು ಶನಿವಾರ ಪರಿಶೀಲಿಸಿದ ಬಳಿಕ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೆಳೆಹಾನಿ ಪರಿಶೀಲನೆ ನಡೆಸಲಾಗಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಯ ಪ್ರಕಾರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಬೆಳೆಹಾನಿ ಕುರಿತು ಜಿಲ್ಲಾಧಿಕಾರಿಗಳು ನೀಡಿರುವ ಸಮಗ್ರ ವರದಿ ಹಾಗೂ ಕ್ಷೇತ್ರ ಭೇಟಿ ವೇಳೆ ಅಧ್ಯಯನ ತಂಡ ಕಂಡುಕೊಂಡ ಪರಿಸ್ಥಿತಿಯನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಲಾಗುತ್ತದೆ.

ಬೆಂಗಳೂರಿನಲ್ಲಿ ಸೋಮವಾರ (ನ.19) ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ಅಮಿತಾಭ ಗೌತಮ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಒಟ್ಟಾರೆ ರಾಜ್ಯದ ಪರಿಸ್ಥಿತಿ ಕ್ರೋಢೀಕರಿಸಿ ಸಿದ್ಧಪಡಿಸುವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಅವರು ಜಿಲ್ಲೆಯಲ್ಲಿ ಅನಾವೃಷ್ಟಿಯಿಂದ ಉಂಟಾಗಿರುವ ಬೆಳೆಹಾನಿಯನ್ನು ವಿವರಿಸಿದರು.

ಜಿಲ್ಲೆಯ ಸವದತ್ತಿ ಹಾಗೂ ರಾಮದುರ್ಗ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಇಂದು ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೆಳೆ ಹಾನಿಯನ್ನು ಪರಿಶೀಲಿಸಿದರು.

ಗೊರಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಶಿಡೋಣಿ ಗ್ರಾಮದ ಈರಬಸವ್ವ ಕೆಂಚನಗೌಡ್ರ ಅವರ 2.29 ಎಕರೆ ಜಮೀನಿನಲ್ಲಿ ನಾಶಗೊಂಡಿರುವ ಸೂರ್ಯಕಾಂತಿ ಬೆಳೆಯನ್ನು ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರು ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಈರಬಸವ್ವ ಕೆಂಚನಗೌಡ್ರ, ಬೀಜ, ಗೊಬ್ಬರ, ಬಿತ್ತನೆ ಆಳಿನ ಕೂಲಿ, ಕಳೆಕಸ ತೆಗೆಯಲು ಒಟ್ಟಾರೆ ಈ ಬಾರಿ ₹ 15,000 ಖರ್ಚಾಗಿದೆ. ಬೆಳೆ ನಷ್ಟದಿಂದ ಒಂದು ವರ್ಷದ ಶ್ರಮ ಮತ್ತು ಹಣ ಎರಡೂ ವ್ಯರ್ಥವಾಗಿದೆ. ಇದೇ ರೀತಿ ಕಳೆದ ಐದು ವರ್ಷದಿಂದ ಬರ ಪರಿಸ್ಥಿತಿಯಿಂದ ಬೆಳೆ ಹಾನಿಯಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಕೃಷಿ ಹೊಂಡದ ಭರವಸೆ: ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ತಂಡದ ಮುಖ್ಯಸ್ಥ ಮಹೇಶ್, ‘ಕೃಷಿ ಹೊಂಡ ನಿರ್ಮಿಸಿಕೊಂಡರೆ ಇಂತಹ ಪರಿಸ್ಥಿತಿ ಬರುವುದಿಲ್ಲ. ನೀವೇಕೆ ಹೊಂಡ ನಿರ್ಮಿಸಿಕೊಂಡಿಲ್ಲ’ ಎಂದು ಪ್ರಶ್ನಿಸಿದರು.

ಕುಟುಂಬದಲ್ಲಿ ಏಳು ಜನ ಅಕ್ಕ ತಂಗಿಯರು ಇರುವುದರಿಂದ ಈ ಬಗ್ಗೆ ಯೋಚಿಸಿಲ್ಲ ಎಂದು ಈರಬಸವ್ವ ಉತ್ತರಿಸಿದರು.

ಸ್ಥಳದಲ್ಲಿಯೇ ಉಪಸ್ಥಿತರಿದ್ದ ಶಾಸಕ ಆನಂದ ಮಾಮನಿ ಮತ್ತು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು, ಕೂಡಲೇ ಕೃಷಿಹೊಂಡ ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಶಿವಪ್ಪ ಕೊಳ್ಳಿ ಅವರ ಜಮೀನಿನಲ್ಲಿ ಇರುವ ಹತ್ತಿ ಬೆಳೆಯನ್ನು ಪರಿಶೀಲಿಸಲಾಯಿತು. ಹತ್ತಿ ಬೆಳೆಗೆ ಮಾಡಿದ ಖರ್ಚುವೆಚ್ಚದ ಬಗ್ಗೆ ತಂಡವು ರೈತರಿಂದ ಮಾಹಿತಿ ಪಡೆದುಕೊಂಡಿತು.

ಮಹೇಶ್ ನೇತೃತ್ವದ ತಂಡದಲ್ಲಿ ಕೇಂದ್ರ ಜಲ ಆಯೋಗದ ನಿರ್ದೇಶಕ ಓ.ಆರ್.ಕೆ. ರೆಡ್ಡಿ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ನೀತಾ ತಹಿಲ್ಲಾನಿ ಇದ್ದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT