ದಾವಣಗೆರೆ ಕಾಂಗ್ರೆಸ್‌ಗೆ ಅಚ್ಚರಿ ಅಭ್ಯರ್ಥಿ?

ಶುಕ್ರವಾರ, ಮಾರ್ಚ್ 22, 2019
24 °C
ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ಮಲ್ಲಿಕಾರ್ಜುನ ಪತ್ನಿ ಪ್ರಭಾ ಹೆಸರು ಚಾಲ್ತಿಗೆ

ದಾವಣಗೆರೆ ಕಾಂಗ್ರೆಸ್‌ಗೆ ಅಚ್ಚರಿ ಅಭ್ಯರ್ಥಿ?

Published:
Updated:
Prajavani

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ನಿಲ್ಲಿಸಲು ಶಾಮನೂರು ಕುಟುಂಬ ಮುಂದಾಗಿದೆ. ಅಪ್ಪ (ಶಾಮನೂರು ಶಿವಶಂಕರಪ್ಪ) –ಮಗ (ಎಸ್‌.ಎಸ್‌. ಮಲ್ಲಿಕಾರ್ಜುನ) ಹೆಸರುಗಳ ಜತೆ ಈಗ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌. ಬಿ. ಮಂಜಪ್ಪ, ಮಲ್ಲಿಕಾರ್ಜುನ ಪತ್ನಿ ‍ಪ್ರಭಾ ಅವರ ಹೆಸರೂ ಚಾಲ್ತಿಗೆ ಬಂದಿವೆ.

2004, 2009 ಹಾಗೂ 2014ರ ಲೋಕಸಭಾ ಚುನಾವಣೆಗಳಲ್ಲಿ ಸೋಲು ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಅನಿರೀಕ್ಷಿತ ಫಲಿತಾಂಶದಿಂದ ಕಂಗೆಟ್ಟಿರುವ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಈ ಚುನಾವಣೆಗೆ ಸ್ಪರ್ಧಿಸುವ ಉತ್ಸಾಹ ತೋರುತ್ತಿಲ್ಲ. ಪಕ್ಷದ ಕಾರ್ಯಕರ್ತರ ಸಭೆ, ಕ್ಷೇತ್ರದ ಭೇಟಿ ಇವುಗಳಿಂದ ದೂರ ಕಾಯ್ದುಕೊಂಡು ಬಂದಿದ್ದಾರೆ. ಇಷ್ಟಾದರೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಪಕ್ಷದ ಜಿಲ್ಲಾ ಘಟಕ ಮಲ್ಲಿಕಾರ್ಜುನ ಹೆಸರನ್ನಷ್ಟೇ ರಾಜ್ಯ ಘಟಕಕ್ಕೆ ಶಿಫಾರಸು ಮಾಡಿದೆ.

ಈ ಮಧ್ಯೆ ಮಲ್ಲಿಕಾರ್ಜುನ ಅವರೇ ಸ್ಪರ್ಧೆಗೆ ಹಿಂಜರಿಯುತ್ತಿರುವುದಿಂದ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ಮಲ್ಲಿಕಾರ್ಜುನ ಪತ್ನಿ ಪ್ರಭಾ, ವಿಧಾನ ಪರಿಷತ್ ಸದಸ್ಯ
ಎಚ್‌.ಎಂ. ರೇವಣ್ಣ ಹೆಸರುಗಳು ಮುನ್ನೆಲೆಗೆ ಬಂದಿವೆ.

ಕುಟುಂಬದಲ್ಲಿ ಯಾರಾದರೂ ಒಬ್ಬರು ಟಿಕೆಟ್‌ ಪಡೆದುಕೊಳ್ಳಲೇಬೇಕು. ಇಲ್ಲದಿದ್ದರೆ ಮುಂದೆ ವಿಧಾನಸಭೆ ಟಿಕೆಟ್‌ಗೂ ಇನ್ನೊಬ್ಬರ ಮರ್ಜಿ ಕಾಯಬೇಕಾಗುತ್ತದೆ ಎಂಬ ಕಾರಣಕ್ಕೆ ‘ಅಪ್ಪ–ಮಗ ಇಬ್ಬರಲ್ಲಿ ಒಬ್ಬರು ನಿಲ್ಲುತ್ತೇವೆ’ ಎಂದು ಶಾಮನೂರು ಪದೇ ಪದೇ ಹೇಳುತ್ತಿದ್ದಾರೆ. ಆದರೆ, ಪಕ್ಷ ಟಿಕೆಟ್‌ ಯಾರಿಗೆಂಬುದನ್ನು ಖಚಿತ‍ಪಡಿಸಿಲ್ಲ.

‘ಅಪ್ಪ–ಮಗ ಸ್ಪರ್ಧಿಸದಿದ್ದರೆ ಸೊಸೆಯನ್ನಾದರೂ ನಿಲ್ಲಿಸಿ; ಟಿಕೆಟ್‌ ಕುಟುಂಬದ ಕೈತಪ್ಪದಂತೆ ನೋಡಿಕೊಳ್ಳಿ. ರಾಜಕೀಯದಲ್ಲಿ ಪ್ರಭಾ ಹೊಸ ಮುಖವಾಗುವುದರಿಂದ ಗೆಲ್ಲುವ ಸಾಧ್ಯತೆ ಹೆಚ್ಚು’ ಎಂದು ಶಾಮನೂರು ಕುಟುಂಬಕ್ಕೆ ಹತ್ತಿರದ ರಾಜಕೀಯ ನಾಯಕರು ಸಲಹೆ ನೀಡಿದ್ದಾರೆ. ಪ್ರಭಾ ಅವರು ವಿಧಾನಸಭಾ ಚುನಾವಣೆಯಲ್ಲಿ ಗಂಡನ ಪರವಾಗಿ ಮತಪ್ರಚಾರ ನಡೆಸಿದ್ದರು. ತಮ್ಮ ಮಾತುಗಾರಿಕೆ, ನಡವಳಿಕೆಯಿಂದ ಜನರ ಗಮನ ಸೆಳೆದಿದ್ದರು.

ಹಲವು ಮಠಗಳ ಸ್ವಾಮೀಜಿಗಳು ಅವರು ರಾಜಕೀಯಕ್ಕೆ ಬರಬೇಕು ಎಂದು ಆಹ್ವಾನಿಸಿದ್ದರು. ಪ್ರಭಾ ಅವರನ್ನು ರಾಜಕೀಯಕ್ಕೆ ತರಲು ಅಪ್ಪ–ಮಗನಿಗೆ ಇಷ್ಟ ಇಲ್ಲದಿದ್ದರೂ ಭವಿಷ್ಯದ ದೃಷ್ಟಿಯಿಂದ ಅವರ ಸ್ಪರ್ಧೆಗೆ ಅವರಿಬ್ಬರೂ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ.

ತಮ್ಮ ಕುಟುಂಬಕ್ಕೆ ಟಿಕೆಟ್‌ ಸಿಗದಿದ್ದರೆ ಕೊನೆಗೆ ತಮ್ಮ ಕುಟುಂಬಕ್ಕೆ ನಿಷ್ಠರಾದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರಿಗಾದರೂ ಟಿಕೆಟ್‌ ಕೊಡಿಸುವ ಪ್ರಯತ್ನವನ್ನು ಅಪ್ಪ–ಮಗ ಮಾಡುತ್ತಿದ್ದಾರೆ.

ಈ ಮಧ್ಯೆ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಹೆಸರು ಕೂಡ ಕೇಳಿಬಂದಿದೆ. ಹಿಂದೆ ಈ ಕ್ಷೇತ್ರದಿಂದ ಕುರುಬ ಜನಾಂಗದ ಚನ್ನಯ್ಯ ಒಡೆಯರ್‌ ಸತತ ಮೂರು ಬಾರಿ ಗೆಲುವು ಕಂಡ ಹಿನ್ನೆಲೆಯಲ್ಲಿ ಕೆಲ ಮುಖಂಡರು ರೇವಣ್ಣ ಅವರನ್ನು ಇಲ್ಲಿಗೆ ಕರೆತರುವ ಪ್ರಯತ್ನ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !