ಬುಧವಾರ, ಜೂನ್ 23, 2021
30 °C
’ನನಗೆ ಎಷ್ಟು ಚುಚ್ಚುತ್ತಾರೋ, ಧೈರ್ಯ ಅಷ್ಟೇ ಇಮ್ಮಡಿಯಾಗುತ್ತದೆ’

ಇಂದಿಗೂ ಚನ್ನಮ್ಮನ ಕಾಲದಲ್ಲಿದ್ದಂತೆ ಮಲ್ಲಪ್ಪ ಶೆಟ್ಟರಿದ್ದಾರೆ: ಹೆಬ್ಬಾಳಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಲಕ್ಷ್ಮಣ ರೇಖೆ ದಾಟುವ ಮಹಿಳೆ ನಾನಲ್ಲ. ಹಾಗೆಂದು ಯಾವುದಕ್ಕೂ ಹೆದರುವವಳಲ್ಲ. ನನಗೆ ಎಷ್ಟು ಚುಚ್ಚುತ್ತಾರೋ, ಧೈರ್ಯ ಅಷ್ಟೇ ಇಮ್ಮಡಿಯಾಗುತ್ತದೆ. ಬೇರೆಯವರ ಚೌಕಟ್ಟಿನಲ್ಲಿ ಹೋಗುವುದಿಲ್ಲ. ಬೇರೆಯವರು ನನ್ನ ಚೌಕಟ್ಟಿನೊಳಗೆ ಬಂದರೆ ಬಿಡುವುದಿಲ್ಲ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಎಚ್ಚರಿಸಿದರು.

ಇಲ್ಲಿ ಗಜಾನನ ಮಹಾಮಂಡಳ ವತಿಯಿಂದ ವೀರ ರಾಣಿ ಕಿತ್ತೂರು ಚನ್ನಮ್ಮ ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಚನ್ನಮ್ಮನ ಕಾಲದಲ್ಲಿ ಮಲ್ಲಪ್ಪ ಶೆಟ್ಟರಂತವರಿದ್ದರು. ಆ ಕಾಲದಿಂದ ಇಂದಿನವರೆಗೂ ಅಂತವರಿರದ್ದಾರೆ. ಕೊನೆಗೆ ಗೆಲುವು ಸತ್ಯಕ್ಕೆ ಎನ್ನುವುದು ಮರೆಯಬೇಡಿ’ ಎಂದು ಜಾರಕಿಹೋಳಿ ಸಹೋದರರ ಹೆಸರೇಳದೇ ವಾಗ್ದಾಳಿ ನಡೆಸಿದರು.

‘ಮಹಿಳೆಗೆ ಹುಟ್ಟಿನಿಂದ ಸಾಯುವವರೆಗೆ ಸಂಘರ್ಷ ಎದುರಾಗುತ್ತದೆ. ಪ್ರತಿಭೆ ಹೊಂದಿದ್ದು, ಸಾಧನೆ ಮಾಡಿದರೂ ಮಹಿಳೆ ಸಾಧನೆಯನ್ನು ಸೆಕೆಂಡ್‌ ಕ್ಲಾಸ್ ಎಂದೇ ಪರಿಗಣಿಸಲಾಗುತ್ತದೆ. ರಾಜಕೀಯದಲ್ಲಿಯೂ ಪಂಚಾಯ್ತಿಯಿಂದ ಪಾರ್ಲಿಮೆಂಟ್‌ವರೆಗೂ ಸಂಘರ್ಷವಿದೆ. ಏಶಿಯನ್‌ ಗೇಮ್ಸ್‌ನಲ್ಲಿ ಮಹಿಳೆಯರು ಹಲವು ಪದಕ ಗೆದ್ದಿದ್ದಾರೆ. ಆದರೂ, ಪುರುಷರಷ್ಟು ಮಾನ್ಯತೆ ಸಿಗುವುದಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪಕ್ಷದಲ್ಲಿ ಸ್ಥಾನಮಾನ, ಗೌರವ ಸಿಕ್ಕಿದೆ. ಎರಡು ಬಾರಿ ಚುನಾವಣೆಯಲ್ಲಿ ಸೋತಾಗಲೂ ಹೆದರಿಲ್ಲ. ಸತ್ಯವನ್ನೇ ನಂಬಿ, ಅದನ್ನೇ ಹೇಳಿಕೊಂಡು ಬಂದಿದ್ದೇನೆ. ಸತ್ಯಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ. ಸಾಮಾನ್ಯ ಕಾರ್ಯಕರ್ತೆಯಾಗಿದ್ದಾಗಿನಿಂದ ಯಾವತ್ತೂ ಹೆಜ್ಜೆಯನ್ನು ಹಿಂದಿಟ್ಟಿಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ಗೆ ಗೆಲುವು ದೊರಕಿಸಿಕೊಡುವ ಮೂಲಕ ಶಾಸಕಿಯಾಗಿ ತೋರಿಸಿದ್ದೇನೆ’ ಎಂದರು.

‘ನಾನು, ಯಾರಿಗಾದರೂ ನೋವು ಕೊಡಬೇಕು, ಕೆಳ ಎಂದು ತೋರಿಸುವುದಕ್ಕಾಗಿ ಏನನ್ನು ಮಾಡಿಲ್ಲ. ಕ್ಷೇತ್ರದ ಹಿತ, ಸಮಾಜದ ಹಿತಕ್ಕಾಗಿ ಮಾಡಿದ್ದೇನೆ. ನ್ಯಾಯದ ಪರವಾಗಿದ್ದರೆ ಯಾವುದೇ ಕಾರಣಕ್ಕೂ ಸೋಲೊಪ್ಪಿಕೊಳ್ಳಬೇಡಿ. ತಪ್ಪಾಗಿದ್ದರೆ, ಒಪ್ಪಿಕೊಳ್ಳಿ’ ಎಂದು ಮಹಿಳೆಯರಿಗೆ ಸಲಹೆ ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು