ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀತಕ್ಕೆ ಹೋಗದೇ ಓದಿ ಸಚಿವರಾಗಿದ್ದರು ಮಾಜಿ ಸಚಿವ ಡಿ. ಮಂಜುನಾಥ್‌

ಶೋಷಿತರ ಸೇವೆಗೆ ಜೀವನ ಮುಡಿಪಾಗಿಟ್ಟಿದ್ದ ರಾಜಕಾರಣಿ
Last Updated 3 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಹಿರಿಯೂರು: ‘ರಾಜಕಾರಣವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೆ, ಶೋಷಿತರ ಸೇವೆಗೆ ಜೀವನ ಮುಡಿಪಾಗಿಟ್ಟವರು ಅಪರೂಪ. ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ ಡಿ.ಮಂಜುನಾಥ್‌ ಅವರದ್ದು ಅತ್ಯುತ್ತಮ ಆಲೋಚನೆಗಳಿರುವ ಅಪರೂಪದ ವ್ಯಕ್ತಿತ್ವ’.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಡಿ. ಮಂಜುನಾಥ್‌ ಬಗೆಗೆ ಕಾರ್ಯಕ್ರಮವೊಂದರಲ್ಲಿ ಆಡಿದ್ದ
ಈ ಮಾತುಗಳು ಖಂಡಿತಾ ಹೊಗಳಿಕೆಯಲ್ಲ. ಅವರು ಬದುಕಿದ್ದ ರೀತಿಗೆ ದೇವೇಗೌಡರ ಅಂತರಾಳದ ಅಭಿವ್ಯಕ್ತಿ ಎನ್ನಬಹುದು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಜಾಜೂರು ಇವರ ಸ್ವಗ್ರಾಮ. ದುರುಗಪ್ಪ ಮತ್ತು ಯಲ್ಲಮ್ಮ ದಂಪತಿಗೆ ಜನಿಸಿದ್ದ ಮೂವರು ಹೆಣ್ಣು, ಏಳು ಗಂಡು ಮಕ್ಕಳಲ್ಲಿ ಮಂಜುನಾಥ್‌ ಮೂರನೇ ಪುತ್ರ. 1930 ಸೆ. 8ರಂದು ಜನಿಸಿದ್ದ ಇವರು, ಅಧಿಕಾರ ನಡೆಸಬಲ್ಲ ವ್ಯಕ್ತಿತ್ವ ರೂಪಿಸಿಕೊಂಡಿದ್ದು ಸುಲಭವಲ್ಲ. ಪರಿಶಿಷ್ಟರಿಗೆ ಶಿಕ್ಷಣ ಗಗನಕುಸುಮವಾಗಿದ್ದ ಕಾಲದಲ್ಲಿ ಮಕ್ಕಳನ್ನು ಜೀತಕ್ಕಿಡದೇ ಓದಿಸಿದ ದುರುಗಪ್ಪ ಅವರ ಶ್ರಮ ಪುತ್ರನ ಯಶಸ್ಸಿನ ಹಿಂದಿರುವುದು ಬಹುತೇಕರಿಗೆ ಗೊತ್ತಿಲ್ಲ.

ಇಂಟರ್‌ ಮೀಡಿಯಟ್‌ ಶಿಕ್ಷಣ ಪಡೆದ ಮಂಜುನಾಥ್‌, ಚಳ್ಳಕೆರೆ ನಗರ ಸ್ಥಳೀಯ ಸಂಸ್ಥೆಯಲ್ಲಿ ಗುಮಾಸ್ತರಾಗಿ ವೃತ್ತಿ ಆರಂಭಿಸಿದರು. ಕೆಲಸತೊರೆದು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪೂರೈಸಿದರು. ಹೆತ್ತವರ ಅಭಿಲಾಷೆಯಂತೆ ಸೋದರತ್ತೆಯ ಮಗಳು ಲಿಂಗಮ್ಮ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದರು. ಶಾಲಾ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಲೇ 1957ರಲ್ಲಿ ಕಾನೂನು ಪದವಿ ಪಡೆದರು. ವೃತ್ತಿ ತೊರೆದು ಕುಟುಂಬ ಸಮೇತ ಚಿತ್ರದುರ್ಗಕ್ಕೆ ಮರಳಿ ರಾಜಕೀಯಕ್ಕೆ ಧುಮುಕಿದರು.

ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಸೂಚನೆಯಂತೆ ಕಾಂಗ್ರೆಸ್‌ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಬಡವರಿಗೆ ನ್ಯಾಯ ದೊರಕಿಸಿಕೊಡಲು ವಕೀಲ ವೃತ್ತಿಯನ್ನು ಸಮರ್ಥವಾಗಿ ಬಳಸಿಕೊಂಡರು. 1967ರಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು. ನಿಜಲಿಂಗಪ್ಪ ಅವರ ನಿರೀಕ್ಷೆ ಹುಸಿಗೊಳಿಸದೇ ವಿಧಾನಸೌಧ ಪ್ರವೇಶಿಸಿದರು.

ಮೊದಲ ಬಾರಿಗೆ ಶಾಸಕರಾಗಿದ್ದ ಅವಧಿಯಲ್ಲೇ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದರು. ಹಂಗಾಮಿ ಅಧ್ಯಕ್ಷರಾಗುವ ಅವಕಾಶವೂ ಒದಗಿ ಬಂದಿತ್ತು. ವೈಕುಂಠ ಬಾಳಿಗ ಅವರಿಂದ ತೆರವಾದ ವಿಧಾನಸಭಾ ಅಧ್ಯಕ್ಷ ಸ್ಥಾನದಲ್ಲಿ ವರ್ಷ ಕಾಲ ಕುಳಿತು ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಂಡರು. ಕಾಂಗ್ರೆಸ್‌ ವಿಭಜನೆಯ ಬಳಿಕ ಎದುರಾದ ಚುನಾವಣೆಯಿಂದ ದೂರ ಉಳಿದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡರು.

ಜಯಪ್ರಕಾಶ್‌ ನಾರಾಯಣ್‌ ನೇತೃತ್ವದಲ್ಲಿ ತುರ್ತುಪರಿಸ್ಥಿತಿ ವಿರುದ್ಧ ನಡೆಯುತ್ತಿದ್ದ ಚಳವಳಿಯಲ್ಲಿ ಗುರುತಿಸಿ
ಕೊಂಡರು. ತುರ್ತು ಪರಿಸ್ಥಿತಿ ಕೊನೆಗೊಂಡ ಬಳಿಕ ಕಾಂಗ್ರೆಸ್‌ ತೊರೆದು ಜನತಾ ಪಕ್ಷ ಸೇರಿದರು. 1978ರಲ್ಲಿ ನಡೆದ ಚುನಾವಣೆಯಲ್ಲಿ ಹಿರಿಯೂರುಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡರು. 1983ರಲ್ಲಿ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಇವರನ್ನು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ವಿಧಾನ ಪರಿಷತ್ತಿಗೆ ನೇಮಕ ಮಾಡಿತು. ಹೆಗಡೆ ಸರ್ಕಾರದಲ್ಲಿ ಯೋಜನಾ ಮತ್ತು ಸಾಂಖ್ಯಿಕ ಹಣಕಾಸು, ಶಿಕ್ಷಣ ಹಾಗೂ ಕಾರ್ಮಿಕ ಸಚಿವರಾಗಿ ಕೆಲಸ ಮಾಡಿದರು.

1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ರಾಜಕಾರಣಿ ಕೆ.ಎಚ್.ರಂಗನಾಥ್ ಅವರನ್ನು ಸೋಲಿಸಿದ್ದು ಮಂಜುನಾಥರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಮತ್ತೊಮ್ಮೆ ಉನ್ನತ ಶಿಕ್ಷಣ ಸಚಿವರಾಗುವ ಯೋಗ ಅವರಿಗೆ ಒದಗಿ ಬಂದಿತು. 1998ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಅರಣ್ಯ ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದರು.

2004ರ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ ಮಂಜುನಾಥ ಅವರು ಧರ್ಮಸಿಂಗ್ ಸಂಪುಟದಲ್ಲಿ ಮೂರನೇ ಬಾರಿಗೆಉನ್ನತ ಶಿಕ್ಷಣ ಸಚಿವರಾಗಿ ನೇಮಕಗೊಂಡಿದ್ದು, ಶಿಕ್ಷಣ ಕ್ಷೇತ್ರದ ಬಗೆಗಿನ ಅವರ ಕಾಳಜಿಗೆ ಸಾಕ್ಷಿ.

ಮಂಜುನಾಥ್‌ ಅವರ ಸಾಧನೆ

*1985ರಲ್ಲಿ ತಲೆದೋರಿದ ಬರ ಪರಿಸ್ಥಿತಿಯ ಸಂದರ್ಭದಲ್ಲಿ ಗೋಶಾಲೆ ನಿರ್ಮಾಣಕ್ಕೆ ಒತ್ತು

*ಅಂಗವಿಕಲರಿಗೆ ಮೈಸೂರಿನಲ್ಲಿ, ಮಹಿಳೆಯರಿಗೆ ಶಿವಮೊಗ್ಗದಲ್ಲಿ ಪ್ರತ್ಯೇಕ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ

*ತುಮಕೂರು, ಕೋಲಾರ, ಬೀದರ್‌ ಜಿಲ್ಲೆಗಳಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭ

*ರಾಜ್ಯದ ಆರು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇದ್ದ ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿ

*ದಲಿತರ ಏಳಿಗೆಗೆ ‘ಕೂಡು ವ್ಯವಸಾಯ ಸಹಕಾರ ಸಂಘ’ ಸ್ಥಾ‍ಪನೆ

*ಗ್ರಾಮೀಣ ಪ್ರದೇಶದಲ್ಲಿ 31 ಪ್ರಥಮ ದರ್ಜೆ ಕಾಲೇಜು ಆರಂಭ

*ಆರು ಖಾಸಗಿ ಪ್ರಥಮ ದರ್ಜೆ ಕಾಲೇಜು ಸರ್ಕಾರದ ಸ್ವಾಧೀನ

ರಾಜಕೀಯದಲ್ಲಿ ಹೆಜ್ಜೆಗುರುತು

*1959ರಲ್ಲಿ ಚಳ್ಳಕೆರೆ ತಾಲ್ಲೂಕು ಅಭಿವೃದ್ಧಿ ಮಂಡಳಿಗೆ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ

*1967, 1994 ಹಾಗೂ 2004ರಲ್ಲಿ ಹಿರಿಯೂರು ಮೀಸಲು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ

*1978 ಮತ್ತು 1999ರಲ್ಲಿ ನಡೆದ ಚುನಾವಣೆಯಲ್ಲಿ ಸೋಲು

*1977ರಲ್ಲಿ ಕಾಂಗ್ರೆಸ್‌ ತೊರೆದು ಜನತಾ ಪಕ್ಷಕ್ಕೆ ಸೇರ್ಪಡೆ

*1983ರಲ್ಲಿ ವಿಧಾನ ಪರಿಷತ್‌ಗೆ ನೇಮಕ, 1987–1992ರವರೆಗೆ ಸಭಾಪತಿ

*1985ರಲ್ಲಿ ಕಾರ್ಮಿಕ ಸಚಿವರಾಗಿ ಸೇವೆ

*1986, 1998 ಹಾಗೂ 2004ರಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕರ್ತವ್ಯ ನಿರ್ವಹಣೆ

***

ರಾಜಕಾರಣದ ಪಾವಿತ್ರ್ಯತೆ ಕಾಪಾಡಲು ಶ್ರಮಿಸಿದ್ದರು. ಸಿಂಡಿಕೇಟ್‌ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರಿಂದ ಶಿಕ್ಷಣ ಸಚಿವರ ಹುದ್ದೆ ಒದಗಿ ಬರುತ್ತಿತ್ತು

– ಡಿ.ಯಶೋಧರ, ಒಡನಾಡಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT