ಶನಿವಾರ, ಮೇ 28, 2022
31 °C
ನಕಲಿ ಅಂಕಪಟ್ಟಿ ಕೊಟ್ಟು ಅಂಚೆ ಇಲಾಖೆಯಲ್ಲಿ ಕೆಲಸ

‘ಅಂಚೆ ವುಮನ್‌’ ಜೈಲಿಗೆ ತಳ್ಳಿದ ಮೂಗರ್ಜಿ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಕಲಿ ಅಂಕಪಟ್ಟಿ ಸಲ್ಲಿಸಿ ಅಂಚೆ ಇಲಾಖೆಯಲ್ಲಿ 13 ವರ್ಷ ಕೆಲಸ ಮಾಡಿದ್ದ ಮಹಿಳೆಗೆ ಮೂಗರ್ಜಿ ಯೊಂದು ಪರಪ್ಪನ ಅಗ್ರಹಾರ ಜೈಲಿನ ಕಂಬಿ ಎಣಿಸುವಂತೆ ಮಾಡಿದೆ.

‘ವಿವೇಕನಗರದ ಅಂಚೆ ಕಚೇರಿಯಲ್ಲಿ ‘ಪೋಸ್ಟ್ ವುಮನ್’ ಕೆಲಸ ಮಾಡುತ್ತಿದ್ದ ಡಿ. ಛಾಯಾದೇವಿ, ಕೆಲಸಕ್ಕೆ ಸೇರುವ ವೇಳೆ ಎಸ್ಸೆಸ್ಸೆಲ್ಸಿಯ ನಕಲಿ ಅಂಕಪಟ್ಟಿ ನೀಡಿದ್ದಾರೆ’ ಎಂದು ಇಲಾಖೆಯ ಹಿರಿಯ ಮೇಲ್ವಿಚಾರಕ ಆಲ್ಬರ್ಟ್‌ ಎಂ. ಡಿಸೋಜ ನೀಡಿದ್ದ ದೂರಿನಡಿ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾ ಧೀಶ ಎಂ. ಮಹೇಶ್ ಬಾಬು, ಛಾಯಾದೇವಿಗೆ 4 ವರ್ಷಗಳ ಜೈಲು ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ (ಪಿಪಿ) ಜಿ.ಎನ್.ಅರುಣ್‌ ವಾದಿಸಿದ್ದರು. 

‘ಸ್ಟಾಂಪ್‌ ವೆಂಡರ್‌‘ ಆಗಿ ನೇಮಕ: ಜೀವನ್‌ಬಿಮಾ ನಗರದ ನಿವಾಸಿ ಛಾಯಾದೇವಿ, 1997ರ ಫೆಬ್ರವರಿ 13ರಂದು ‘ಸ್ಟಾಂಪ್‌ ವೆಂಡರ್‌’ ಆಗಿ ಅಂಚೆ ಇಲಾಖೆಗೆ ಸೇರಿದ್ದರು. ಕೆಲಸ ಮಾಡುತ್ತಲೇ ಇಲಾಖಾ ಪರೀಕ್ಷೆ ಬರೆದು ಮಹಿಳಾ ಕೋಟಾದಲ್ಲಿ ‘ಪೋಸ್ಟ್ ವುಮನ್’ ಆಗಿ ಬಡ್ತಿ ಪಡೆದಿದ್ದರು. 2006ರ ಜ. 16ರಿಂದ ವಿವೇಕನಗರ ಅಂಚೆ ಕಚೇರಿ ಯಲ್ಲಿ ‘ಪೋಸ್ಟ್ ವುಮನ್’ ಆಗಿ ಕೆಲಸ ಆರಂಭಿಸಿದ್ದರು.

ಮೂಗರ್ಜಿ ಆಧರಿಸಿ ತನಿಖೆ: ‘ಛಾಯಾದೇವಿ ನಕಲಿ ಅಂಕಪಟ್ಟಿ ಕೊಟ್ಟು ಕೆಲಸಕ್ಕೆ ಸೇರಿದ್ದಾರೆ. ತನಿಖೆ ನಡೆಸಿ’ ಎಂಬ ಮೂಗರ್ಜಿ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗೆ ಬಂದಿತ್ತು.

ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸೋಜ, ಛಾಯಾದೇವಿಯವರ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಕಳುಹಿಸಿದ್ದರು. ಪರಿಶೀಲನೆ ನಡೆಸಿದ್ದ ಮಂಡಳಿ, ‘ಇದೊಂದು ನಕಲಿ ಅಂಕಪಟ್ಟಿ’ ಎಂದು ವರದಿ ನೀಡಿತ್ತು.

ಇದನ್ನು ಆಧರಿಸಿ ಛಾಯಾದೇವಿ ವಿರುದ್ಧ ಕಬ್ಬನ್‌ ಪಾರ್ಕ್ ಠಾಣೆಗೆ 2010ರ ಮೇ 12ರಂದು ದೂರು ದಾಖಲಾಗಿತ್ತು. ವಂಚನೆ (ಐಪಿಸಿ 420), ನಕಲಿ ದಾಖಲೆ ಸೃಷ್ಟಿ (ಐಪಿಸಿ 465), ಅಧಿಕಾರಿಗಳ ಸಹಿಯನ್ನು ನಕಲು ಮಾಡಿದ (ಐಪಿಸಿ 468) ಹಾಗೂ ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸಿದ (ಐಪಿಸಿ 471) ಆರೋಪದಡಿ ಛಾಯಾದೇವಿ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಆರೋಪಗಳೆಲ್ಲವೂ ನ್ಯಾಯಾಲಯದಲ್ಲಿ ಸಾಬೀತಾಗಿವೆ.

ಡಿಸೋಜ, ಮ್ಯೂಸಿಯಂ ರಸ್ತೆಯ ಅಂಚೆ ಕಚೇರಿಯ ಪಿಆರ್‌ಐ ಡಿ.ಜಿ.ನೀತಿಬರನ್, ಮಂಡಳಿಯ ನಿರ್ದೇಶಕ ಎಂ.ಎನ್.ಬೇಗ್, ಕಬ್ಬನ್‌ ಪಾರ್ಕ್ ಠಾಣೆ ಪಿಎಸ್‌ಐ ರೂಪ ಹಡಗಲಿ ಅವರೇ ಸಾಕ್ಷಿ ಹೇಳಿದ್ದರು.

ತಮ್ಮ ಅಕ್ರಮದ ಬಗ್ಗೆ ಹಿರಿಯ ಅಧಿಕಾರಿ ತನಿಖೆ ನಡೆಸುತ್ತಿರುವ ಮಾಹಿತಿ ತಿಳಿದುಕೊಂಡಿದ್ದ ಛಾಯಾ ದೇವಿ, 2010ರ ಜನವರಿ 4ರಂದೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ, ಅವರ ಮನವಿಯನ್ನು  ಮೇಲ್ವಿಚಾರಕರು ತಿರಸ್ಕರಿಸಿದ್ದರು. ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದ ಬಳಿಕವೂ ಜನವರಿ 22ರಂದು ಎರಡನೇ ಬಾರಿ ರಾಜೀನಾಮೆ ಪತ್ರ ಸಲ್ಲಿಸಿದ್ದರು.

ನಕಲಿ ಅಂಕಪಟ್ಟಿಯಲ್ಲೂ ತಪ್ಪು!

ಛಾಯಾದೇವಿ ಕೆಲಸಕ್ಕೆ ಸೇರುವಾಗ ಇಲಾಖೆಗೆ ನೀಡಿದ್ದ ಅಂಕಪಟ್ಟಿಯಲ್ಲಿ ಹಲವು ತಪ್ಪುಗಳಿದ್ದವು. ಅಪರಾಧಿಯ ಹೆಸರು ‘Chya Devi D’ ಎಂದು ಅಂಕಪಟ್ಟಿಯಲ್ಲಿ ನಮೂದಿಸಲಾಗಿತ್ತು. ಅವರ ಮೂಲ ದಾಖಲೆಯಲ್ಲಿದ್ದ ಹೆಸರಿಗೂ ಅಂಕಪಟ್ಟಿಯಲ್ಲಿದ್ದ ಹೆಸರಿಗೂ ವ್ಯತ್ಯಾಸ ಇತ್ತು. ಆ ಅಂಕಪಟ್ಟಿಯನ್ನು ಅಪರಾಧಿ ಎಲ್ಲಿಂದ ತಂದಿದ್ದರು ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು