ಬೆಳೆಸಾಲ ಮನ್ನಾ: ಋಣ ಮುಕ್ತ ಪ್ರಮಾಣ ಪತ್ರ ವಿತರಣೆ

7
ಬೆಳಗಾವಿ ರ್‍ಯಾಲಿ ಕಾವು ಕಟ್ಟದಂತೆ ತಡೆಯಲು ಸರ್ಕಾರದ ಯತ್ನ

ಬೆಳೆಸಾಲ ಮನ್ನಾ: ಋಣ ಮುಕ್ತ ಪ್ರಮಾಣ ಪತ್ರ ವಿತರಣೆ

Published:
Updated:
Deccan Herald

ಬೆಂಗಳೂರು/ಸೇಡಂ: ಬೆಳಗಾವಿ ಸುವರ್ಣ ಸೌಧದಲ್ಲಿ ಸೋಮವಾರದಿಂದ ಆರಂಭವಾಗುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಮೊದಲೇ 44 ಲಕ್ಷ ರೈತರ ₹ 45ಸಾವಿರ ಕೋಟಿ ಮೊತ್ತದ ಬೆಳೆಸಾಲ ಮನ್ನಾ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ದೊಡ್ಡಬಳ್ಳಾಪುರ ಮತ್ತು ಕಲಬುರ್ಗಿ ಜಿಲ್ಲೆ ಸೇಡಂನಲ್ಲಿ ಶನಿವಾರ ಅಧಿಕೃತವಾಗಿ ಚಾಲನೆ ನೀಡಿತು. 

ಅಧಿವೇಶನದ ಆರಂಭದ ದಿನವೇ ಬಿಜೆಪಿ ನಾಯಕರು ಕೃಷಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರೈತರ ರ್‍ಯಾಲಿ ನಡೆಸಲು ಸಿದ್ಧತೆ ನಡೆಸಿರುವ ಬೆನ್ನಲ್ಲೇ ಮುಖ್ಯಮಂತ್ರಿ, ಋಣ ಮುಕ್ತ ಪ್ರಮಾಣ ಪತ್ರಗಳನ್ನು ವಿತರಿಸುವ ಮೂಲಕ ಪ್ರತಿ ಭಟನೆ ಕಾವು ಕಟ್ಟದಂತೆ ತಡೆಯುವ ಪ್ರಯತ್ನ ಮಾಡಿದರು.

ಹಣಕಾಸು ಖಾತೆಯನ್ನೂ ಹೊಂದಿ ರುವ ಕುಮಾರಸ್ವಾಮಿ ಬಜೆಟ್‌ನಲ್ಲಿ ಸಾಲಮನ್ನಾ ಯೋಜನೆ ಪ್ರಕಟಿಸಿದ್ದರು. ಅದರಂತೆ, ಋಣಮುಕ್ತ ಪ್ರಮಾಣ ಪತ್ರ ವಿತರಿಸುತ್ತಿದ್ದಂತೆ ದೊಡ್ಡಬಳ್ಳಾಪುರ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ರೈತರು ಹರ್ಷೋದ್ಗಾರ ಮಾಡಿದರು. ಜೈಕಾರಗಳಿಂದ ಪ್ರೇರಣೆ ಪಡೆದು ಮಾತನಾಡಿದ ಮುಖ್ಯಮಂತ್ರಿ, ಕೇಂದ್ರ ಸರ್ಕಾರದ ಕಾರ್ಯವೈಖರಿ ಹಾಗೂ ಬಿಜೆಪಿ ರಾಜ್ಯ ನಾಯಕರ ವರ್ತನೆಯನ್ನು ಹಿಗ್ಗಾಮುಗ್ಗ ಜಾಲಾಡಿದರು.

‘ಬಿಜೆಪಿಯವರು ಏನು ಕಿತ್ತು ಗುಡ್ಡೆ ಹಾಕಿರುವುದಕ್ಕೆ ಬೆಳಗಾವಿಯಲ್ಲಿ ರೈತರ ರ್‍ಯಾಲಿ ಮಾಡುತ್ತಿದ್ದಾರೆ. ಮೋದಿ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ತಮಿಳುನಾಡು ರೈತರು ದೆಹಲಿಯ ಜಂತರ್‌ಮಂತರ್‌ನಲ್ಲಿ ಬೆತ್ತಲೆಯಾಗಿ ಪ್ರತಿಭಟನೆ ಮಾಡಿದ್ದಾರೆ. ಮೂತ್ರ ಕುಡಿದು ತಮ್ಮ ಸಂಕಷ್ಟಗಳನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಆದರೂ  ಏನೂಪ್ರಯೋಜನವಾಗಿಲ್ಲ’ ಎಂದರು. 

‘ಮೋದಿ ರೈತರಿಗೆ ಏನು ಮಾಡಿದ್ದಾರೆ ಎಂಬುದನ್ನು ಮೊದಲು ಬಿಜೆಪಿ ನಾಯಕರು ಸ್ಪಷ್ಟಪಡಿಸಲಿ ಆಮೇಲೆ ರೈತರ ರ್‍ಯಾಲಿ ನಡೆಸಲಿ’ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

‘ನಮ್ಮ ಸರ್ಕಾರ ರೈತರ ₹ 45 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದೆ. ರೈತರ ಮನೆ ಬಾಗಿಲಿಗೇ ಋಣ ಮುಕ್ತ ಪ್ರಮಾಣ ಪತ್ರ ತಲುಪಲಿದೆ. ಅಲ್ಲಿವರೆಗೂ ತಾಳ್ಮೆಯಿಂದ ವರ್ತಿಸಬೇಕು’ ಎಂದರು.

‘ಸಹಕಾರಿ ಹಾಗೂ ರಾಷ್ಟ್ರಿಕೃತ ಬ್ಯಾಂಕುಗಳಲ್ಲಿನ ₹ 45 ಸಾವಿರ ಕೋಟಿ ಸಾಲ ಮನ್ನಾ ಮಾಡುವುದು ಹುಡುಗಾಟದ ವಿಷಯವಿಲ್ಲ. ಈ ನಿಟ್ಟಿನಲ್ಲಿ ದಿಟ್ಟ ತೀರ್ಮಾನ ಮಾಡಿದ್ದೇವೆ. ಸಂಪೂರ್ಣ ಮಾಹಿತಿ ಪಡೆದು ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದೇವೆ. ಇದರಿಂದಾಗಿ ಋಣ ಮುಕ್ತ ಪ್ರಮಾಣ ಪತ್ರ ವಿತರಣೆ ವಿಳಂಬವಾಯಿತು’ ಎಂದರು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ, ಸಂಸದ ಎಂ. ವೀರಪ್ಪ ಮೊಯ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಐವರು ರೈತರಿಗೆ ಸಾಂಕೇತಿಕವಾಗಿ ಋಣಮುಕ್ತ ಪತ್ರವನ್ನು ವಿತರಿಸಲಾಯಿತು.

377 ರೈತರು ಋಣಮುಕ್ತ

ಸೇಡಂ (ಕಲಬುರ್ಗಿ ಜಿಲ್ಲೆ): ಸಾಲಮನ್ನಾದ ಪ್ರಾಯೋಗಿಕ ಹಂತವಾಗಿ ತಾಲ್ಲೂಕಿನ 377 ರೈತರನ್ನು ಶನಿವಾರ ಋಣಮುಕ್ತಗೊಳಿಸಲಾಯಿತು. ಇವರಲ್ಲಿ 24 ಮಂದಿ ಸಹಕಾರ ಬ್ಯಾಂಕ್‌ಗಳಿಂದ ಹಾಗೂ 353 ಮಂದಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲದಿಂದ ಮುಕ್ತರಾದರು. ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರು ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಿಸಿದರು. ತಾಲ್ಲೂಕಿನಲ್ಲಿ 19 ಸಾವಿರ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹಾಗೂ 2,530 ರೈತರು ಸಹಕಾರ ಸಂಘಗಗಳಲ್ಲಿ ಸಾಲ ಪಡೆದಿದ್ದಾರೆ.‌

* ನಾವು ನಡೆಸುವ ರೈತರ ಸಾಲಮನ್ನಾಕ್ಕೆ ಸಂಬಂಧಿಸಿದ ಸಭೆಗಳಿಗೆ ರಾಷ್ಟೀಕೃತ ಬ್ಯಾಂಕುಗಳ ಅಧಿಕಾರಿಗಳು ಬಾರದಂತೆ ಕೇಂದ್ರ ಸರ್ಕಾರ ತಡೆಯುತ್ತಿದೆ
-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !