ಸೋಮವಾರ, ಡಿಸೆಂಬರ್ 9, 2019
17 °C
ಆಡಳಿತ ಪಕ್ಷಕ್ಕೆ ಉಪ ಚುನಾವಣೆ ಉಮೇದು; ಸಂತ್ರಸ್ತರಿಗೆ ಬದುಕಿನ ಚಿಂತೆ

ಚುನಾವಣೆ ಭರಾಟೆಯಲ್ಲಿ ನಗಣ್ಯವಾಯ್ತು ಸಂತ್ರಸ್ತರ ಬವಣೆ

ಆದಿತ್ಯ ಕೆ.ಎ. / ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ/ಬೆಳಗಾವಿ: ಸಚಿವರೆಲ್ಲ ಉಪ ಚುನಾವಣೆಯ ಪ್ರಚಾರ ಭರಾಟೆಯಲ್ಲಿ ನಿರತರಾಗಿದ್ದರೆ, ನೆರೆ ಸಂತ್ರಸ್ತರು ಭವಿಷ್ಯವನ್ನು ನೆನೆದು ಕಂಗಾಲಾಗಿ, ಕಣ್ಣೀರು ಸುರಿಸುತ್ತಿದ್ದಾರೆ. ಚುನಾವಣೆ ಎದುರು, ಸಂತ್ರಸ್ತರ ರೋದನ ಗೌಣವಾಗಿದೆ.

ಸಂತ್ರಸ್ತರ ಬದುಕು ಬೀದಿಗೆ ಬಂದು ನೂರು ದಿನಗಳೇ ಆಯಿತು. ಇನ್ನೂ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ. 58 ಕುಟುಂಬಗಳ 170 ಮಂದಿ ಸಂತ್ರಸ್ತರು, ಇನ್ನೂ ಕೊಡಗು ಜಿಲ್ಲೆ ಸಿದ್ದಾಪುರ ಬಳಿಯ ನೆಲ್ಯಹುದಿಕೇರಿಯ ಪಬ್ಲಿಕ್‌ ಶಾಲೆಯ ಪರಿಹಾರ ಕೇಂದ್ರದಲ್ಲೇ ಇದ್ದಾರೆ.

ಪರಿಹಾರ ಕೇಂದ್ರದಲ್ಲಿ ಇದೀಗ ಹಾಸಿಗೆ, ಹೊದಿಕೆ, ಊಟ ತಿಂಡಿಗೂ ಪರದಾಟ ಶುರುವಾಗಿದೆ. ಆರಂಭದಲ್ಲಿ, ಅಡುಗೆ ಸಿದ್ಧಪಡಿಸಲು ಒಬ್ಬರನ್ನು ನೇಮಿಸಲಾಗಿತ್ತು. ಈಗ ಅವರ್‍ಯಾರೂ ಇಲ್ಲ; ಸಂತ್ರಸ್ತರೇ ಪಾಳಿಯ ಆಧಾರದಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದಾರೆ.

ನೆಲ್ಯಹುದಿಕೇರಿಯ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದ್ದು, ಶಾಲೆಯಿಂದ ಹೊರ ಹೋಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದರಿಂದ ಸಂತ್ರಸ್ತರಿಗೆ ದಿಕ್ಕೇ ತೋಚದಂತಾಗಿದೆ.

ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರ ನೋವು ಒಂದು ಬಗೆಯಾದರೆ, ಸಾಲ ಮಾಡಿಕೊಂಡು ಬಾಡಿಗೆ ಮನೆ ಸೇರಿರುವ ನಿರಾಶ್ರಿತರ ಗೋಳು ಮತ್ತೊಂದು ಬಗೆಯದು.


ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರು

ತಡೆಯಾಜ್ಞೆ: ಸಂತ್ರಸ್ತರ ಪುನರ್ವಸತಿಗಾಗಿ, ಬೆಟ್ಟದಕಾಡು ಗ್ರಾಮದಲ್ಲಿ 10 ಎಕರೆ ಒತ್ತುವರಿ ಜಾಗವನ್ನು ತೆರವು ಮಾಡಲಾಗಿತ್ತು. ಆದರೆ, ಒತ್ತುವರಿದಾರರು ಜಾಗ ತಮ್ಮದೆಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದು ಸದ್ಯಕ್ಕೆ ಶಾಶ್ವತ ಪುನರ್ವಸತಿ ಅಸಾಧ್ಯ ಎನ್ನುವ ಸ್ಥಿತಿಯಿದೆ. ಇನ್ನೂ ಎಷ್ಟು ದಿನ ಈ ಪರಿಹಾರ ಕೇಂದ್ರದಲ್ಲಿ ಇರಬೇಕು ಎಂದು ಸಂತ್ರಸ್ತರು ಪ್ರಶ್ನಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಕಾಗವಾಡದಲ್ಲಿ ಕೃಷ್ಣಾ ನದಿ ಪ್ರವಾಹ ಬಂದಿತ್ತು. ಗೋಕಾಕ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳ ಮಹಾಪೂರದಿಂದಾಗಿ ಸಾವಿರಾರು ಜನರು ಸಂತ್ರಸ್ತರಾಗಿದ್ದಾರೆ. ಆಡಳಿತ ಪಕ್ಷದ ಶಾಸಕರು ಸೇರಿದಂತೆ ಇತರ ಜನಪ್ರತಿನಿಧಿಗಳು ತಮ್ಮ ಅಭ್ಯರ್ಥಿ ಗೆಲ್ಲಿಸುವ ‘ಗುರಿ’ಯತ್ತಲೇ ಚಿತ್ತ ನೆಟ್ಟಿದ್ದಾರೆ. ಆದರೆ ನೆರೆ ಸಂತ್ರಸ್ತರ ಸಂಕಷ್ಟಗಳ ವಿಷಯ ಗೌಣವಾಗಿದೆ.

ಬಹಿಷ್ಕಾರದ ಎಚ್ಚರಿಕೆ: ಆಡಳಿತ ಯಂತ್ರವೂ ಚುನಾವಣೆ ಕೆಲಸಗಳಲ್ಲಿ ತೊಡಗಿಕೊಂಡಿರುವುದರಿಂದ ನೆರೆ ಪರಿಹಾರ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಪರಿಹಾರ ಸಿಗದಿದ್ದರಿಂದ ಆಕ್ರೋಶಗೊಂಡ ಅಥಣಿ ತಾಲ್ಲೂಕಿನ ಜನವಾಡ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.

ಉಪ ಮುಖ್ಯಮಂತ್ರಿಯೂ ಆದ ಲಕ್ಷ್ಮಣ ಸವದಿ ಅವರಿಗೆ ‘ಬೆಳಗಾವಿ ಜಿಲ್ಲೆಯ ನೆರೆ ಪರಿಹಾರ ಕಾರ್ಯದ ಉಸ್ತುವಾರಿ’ ವಹಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಚಿಕ್ಕೋಡಿ ವಿಭಾಗದ ಉಸ್ತುವಾರಿ ಕೊಡಲಾಗಿದೆ. ಅವರು ಚುನಾವಣೆಗೂ ಮುನ್ನ ತಲಾ ಒಂದು ಸಭೆ ನಡೆಸಿದ್ದು ಬಿಟ್ಟರೆ, ಮತ್ತೆ ಯಾವ ಬೆಳವಣಿಗೆಯೂ ಆಗಿಲ್ಲ.

ನೆರೆ ಪರಿಹಾರ ಕಾರ್ಯಗಳಿಗೆ ಚುನಾವಣಾ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಸ್ಥಳೀಯ ಅಧಿಕಾರಿಗಳಿಗೆ ಪರಿಹಾರ ಕಾರ್ಯ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಪ್ರತಿಕ್ರಿಯಿಸಿದರು.


ಸಲ್ಮಾ

ಸಂತ್ರಸ್ತರ ಅಳಲು: ಪ್ರತಿ ಕುಟುಂಬಕ್ಕೆ ₹50 ಸಾವಿರ ನೀಡಿ ಪರಿಹಾರ ಕೇಂದ್ರದಿಂದ ಹೊರ ಹಾಕುವ ಪ್ರಯತ್ನ ನಡೆಯುತ್ತಿದೆ. ಮಳೆ ಕಿತ್ತುಕೊಂಡಿರುವ ಬದುಕನ್ನು ಮತ್ತೆ ಕಟ್ಟಿಕೊಳ್ಳುವುದು ಹೇಗೆ? ಎಂದು ಕೊಡಗು ಜಿಲ್ಲೆ ಬೆಟ್ಟದಕಾಡು ಪ್ರದೇಶದ ಸಂತ್ರಸ್ತೆ ಸಲ್ಮಾ ಪ್ರಶ್ನಿಸಿದರು.

ಸಂತ್ರಸ್ತರತ್ತ ಈಗ ಯಾರೂ ತಿರುಗಿ ನೋಡುತ್ತಿಲ್ಲ. ಪ್ರತಿ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಿ. ಅವರೇ ಬದುಕು ಕಟ್ಟಿಕೊಳ್ಳುತ್ತಾರೆ ಎಂದು ಸಂತ್ರಸ್ತರ ಪರ ಹೋರಾಟಗಾರ ಭರತ್‌ ಹೇಳಿದರು.

ಪ್ರತಿಕ್ರಿಯಿಸಿ (+)