ಹಾಸನ ಎರಡನೇ ರಾಜಧಾನಿ!

7
ಐದು ಕಚೇರಿಗಳನ್ನು ‘ಸ್ವಂತ’ ಜಿಲ್ಲೆಗೆ ಸ್ಥಳಾಂತರ ಮಾಡಿದ ರೇವಣ್ಣ

ಹಾಸನ ಎರಡನೇ ರಾಜಧಾನಿ!

Published:
Updated:

ಬೆಂಗಳೂರು: ‘ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಅಭಿವೃದ್ಧಿ ಪಡಿಸಲಾಗುವುದು’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಪಾದಿಸುತ್ತಿದ್ದರೆ, ಅವರ ಅಣ್ಣ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹಾಸನಕ್ಕೆ ಈ ಅಗ್ರಪಟ್ಟ ಕೊಡಿಸಲು ಯತ್ನಿಸುತ್ತಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯದ ವಿವಿಧೆಡೆ ಇರುವ ಆರು ಕಚೇರಿಗಳನ್ನು ಸ್ಥಳಾಂತರಿಸಲು ಬುಧವಾರ (ಆ.9) ಆದೇಶ ಹೊರಡಿಸಿರುವುದು ಈ ಚರ್ಚೆಗೆ ಕಾರಣವಾಗಿದೆ. ‘ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುವ ನಿರ್ಧಾರ ಇದು’ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎದ್ದಾಗ ಅಲ್ಲಿನ ನಾಯಕರ ಜತೆ ಮಾತನಾಡಿದ್ದ ಕುಮಾರಸ್ವಾಮಿ, ಕೃಷ್ಣಾ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮದ ಕಚೇರಿಗಳನ್ನು, ಲೋಕಾಯುಕ್ತ, ಮಾಹಿತಿ ಆಯುಕ್ತರ ಕೆಲವು ಹಂತದ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡುವುದಾಗಿ ಭರವಸೆ ನೀಡಿದ್ದರು. ಇದಾಗಿ 15 ದಿನ ಕಳೆಯುವುದರೊಳಗೆ 5 ಕಚೇರಿಗಳನ್ನು ಹಾಸನಕ್ಕೆ ಕೊಂಡೊಯ್ಯಲು ರೇವಣ್ಣ ತೀರ್ಮಾನಿಸಿರುವುದು ಈಗ ಆಕ್ಷೇಪಕ್ಕೆ ಕಾರಣವಾಗಿದೆ.

ಕಾರ್ಯಪಾಲಕ ಎಂಜಿನಿಯರ್ ಹುದ್ದೆಗಳೂ ಸೇರಿ ಎಲ್ಲ ಸುಮಾರು 120ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹಾಸನಕ್ಕೆ ಸ್ಥಳಾಂತರವಾಗಬೇಕಾಗುತ್ತದೆ.

ಇಡೀ ರಾಜ್ಯದ ಕಾರ್ಮಿಕ ವಿಮಾ ಇಲಾಖೆ (ಇಎಸ್‌ಐ) ಕಟ್ಟಡಗಳ ಉಸ್ತುವಾರಿಯನ್ನು ನೋಡಿಕೊಳ್ಳುವ ಹೊಣೆ ಇರುವ ಕಟ್ಟಡಗಳ ವಿಭಾಗ 1980ರಿಂದ ಬೆಂಗಳೂರಿನಲ್ಲೇ ಇದೆ. ಈ ಕಚೇರಿಯನ್ನು ಹಾಸನದ ಹೆದ್ದಾರಿ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ.

ಬೆಳಗಾವಿಯಲ್ಲಿರುವ ಕೆ–ಶಿಪ್ ವಿಭಾಗವನ್ನು ಹಾಸನಕ್ಕೆ, ಉಪವಿಭಾಗವನ್ನು ಮಡಿಕೇರಿಗೆ, ಬಸವನ ಬಾಗೇವಾಡಿಯಲ್ಲಿರುವ ಕೆ–ಶಿಪ್ ಉಪವಿಭಾಗವನ್ನು ಹಾಸನ ಜಿಲ್ಲೆ ಬೇಲೂರಿಗೆ, ಶಿವಮೊಗ್ಗದಲ್ಲಿರುವ ಲೋಕೋಪಯೋಗಿ ವಿಶೇಷ ಉಪವಿಭಾಗವನ್ನು ಅರಸೀಕೆರೆಗೆ ವರ್ಗಾಯಿಸಲಾಗಿದೆ. ಹಾಸನ ಜಿಲ್ಲೆ ಸಕಲೇಶಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಉಪವಿಭಾಗವನ್ನು ರೇವಣ್ಣ ಅವರ ಸ್ವಂತ ಕ್ಷೇತ್ರ ಹೊಳೆನರಸೀಪುರಕ್ಕೆ ಸ್ಥಳಾಂತರಿಸುವುದಾಗಿ ಆದೇಶ ಉಲ್ಲೇಖಿಸಿದೆ.

ರೇವಣ್ಣ ಸಮರ್ಥನೆ

ಹೊಳೆನರಸೀಪುರಕ್ಕಾಗಿ ಯಾವುದೇ ಕಚೇರಿಗಳನ್ನು ತಂದಿಲ್ಲ. ಮೈಸೂರು, ಮಡಿಕೇರಿ, ಹಾಸನ ವಿಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾರ್ಯವನ್ನು ಕೈಗೆತ್ತಿಕೊಳ್ಳಲು ಕೆಲವು ಕಚೇರಿ ಸ್ಥಳಾಂತರ ಮಾಡಲಾಗಿದೆ ಎಂದು ಸಚಿವ ಎಚ್‌.ಡಿ.ರೇವಣ್ಣ  ಹೇಳಿದರು.

ಉದ್ದೇಶಿತ ಕಾಮಗಾರಿಗಳು ಪೂರ್ಣಗೊಂಡಿದ್ದರಿಂದ ಕಚೇರಿ ಸ್ಥಳಾಂತರಿಸಲಾಗಿದೆಯೇ ಹೊರತು ಇದರಲ್ಲಿ ಬೇರೆ ಉದ್ದೇಶವಿಲ್ಲ ಎಂದು ಹೇಳಿದರು.

* ಅಪ್ಪ–ಮಕ್ಕಳು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ. ಕೆ–ಶಿಪ್ ಕಚೇರಿ ಸ್ಥಳಾಂತರ ಮಾಡುವ ಮೂಲಕ ಅದು ಮುಂದುವರಿದಿದೆ. ಇದರ ವಿರುದ್ಧ ಹೋರಾಟ ಕಟ್ಟುತ್ತೇವೆ
–ಜಗದೀಶ ಶೆಟ್ಟರ್, ಬಿಜೆಪಿ ಶಾಸಕ

Tags: 

ಬರಹ ಇಷ್ಟವಾಯಿತೆ?

 • 24

  Happy
 • 1

  Amused
 • 2

  Sad
 • 1

  Frustrated
 • 13

  Angry

Comments:

0 comments

Write the first review for this !