ರಾಜ್ಯದ ಹಲವೆಡೆ ಬಿರುಸು ಮಳೆ, ಇನ್ನೈದು ದಿನ ವರ್ಷಧಾರೆ

7
5 ದಿನಗಳಿಂದ ಭಾಗಮಂಡಲ ಜಲಾವೃತ: ಜಲಾಶಯಗಳ ನೀರಿನ ಮಟ್ಟ ಗಣನೀಯ ಏರಿಕೆ

ರಾಜ್ಯದ ಹಲವೆಡೆ ಬಿರುಸು ಮಳೆ, ಇನ್ನೈದು ದಿನ ವರ್ಷಧಾರೆ

Published:
Updated:

ಬೆಂಗಳೂರು: ಮಲೆನಾಡು, ಘಟ್ಟ ಪ್ರದೇಶ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆ ಇನ್ನಷ್ಟು ಬಿರುಸಾಗಿದೆ. ಕರಾವಳಿಯಲ್ಲಿ ತಗ್ಗಿದೆ. ಪ್ರಮುಖ ಜಲಾಶಯಗಳ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.

ಸಕಲೇಶಪುರ ತಾಲ್ಲೂಕಿನಾದ್ಯಂತ ಮಳೆಯ ಅಬ್ಬರ ಮಂಗಳವಾರವೂ ಮುಂದುವರಿದಿದ್ದು, ಬ್ಯಾಕರವಳ್ಳಿ ಸಮೀಪ ಲಕ್ಷ್ಮಿಪುರ ಗ್ರಾಮದ ವಣಗೂರು– ಜನ್ನಾಪುರ ರಾಜ್ಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ಮರ ಬಿದ್ದು, ಸುಮಾರು 12 ಗಂಟೆಗಳ ಕಾಲ ವಾಹನ ಸಂಚಾರ ಬಂದ್‍ ಆಗಿತ್ತು.

ಕೊಡಗು ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೆ ಮಳೆಯಾಗುತ್ತಿದ್ದು ಅಲ್ಲಲ್ಲಿ ಗುಡ್ಡಗಳು ಕುಸಿದಿವೆ.

ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಜೋಡುಪಾಲದ ಬಳಿ ಭಾರಿ ಗಾತ್ರದ ಮರವೊಂದು ಉರುಳಿ ಬಿದ್ದು ಮೂರು ಗಂಟೆ ವಾಹನ ಸಂಚಾರ ಬಂದ್‌ ಆಗಿತ್ತು. ರಾಜಹಂಸ ಬಸ್‌ ಮೇಲೆ ವಿದ್ಯುತ್‌ ಕಂಬವೊಂದು ಬಿದ್ದು ಆತಂಕಕ್ಕೆ ಕಾರಣವಾಗಿತ್ತು.

ಮಾರ್ಗದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. ಹಾಗಾಗಿ ಪ್ರಯಾಣಿಕರಿಗೆ ಯಾವುದೇ ಅಪಾಯ ಉಂಟಾಗಿಲ್ಲ.

ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಭಾಗಮಂಡಲ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಕಳೆದ ಐದು ದಿನಗಳಿಂದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ತಗ್ಗಿಲ್ಲ. ನಾಪೋಕ್ಲು, ಅಯ್ಯಂಗೇರಿ ಹಾಗೂ ಮಡಿಕೇರಿ, ತಲಕಾವೇರಿಯಲ್ಲಿ ವಾಹನ ಸಂಚಾರ ಮತ್ತೆ ಬಂದ್‌ ಆಗಿದೆ. ತಲಕಾವೇರಿ ಪ್ರವೇಶ ನಿರ್ಬಂಧಿಸಲಾಗಿದೆ.

ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ. ಹಾರಂಗಿ ಜಲಾಶಯದ ಒಳಹರಿವು 12,168 ಕ್ಯುಸೆಕ್‌ ಆಗಿದ್ದು 13,856 ಕ್ಯುಸೆಕ್‌ ಹೊರಹರಿವು ಇದೆ.

 ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಹೆತ್ತೂರು, ಯಸಳೂರು ಹಾಗೂ ಹಾನುಬಾಳು ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಈ ಭಾಗದಲ್ಲಿ 120 ಮಿ.ಮೀ. ಮಳೆಯಾಗಿದೆ.

ಬೆಳಗಾವಿಯಲ್ಲಿ ಮಂಗಳವಾರ ದಿನವಿಡೀ ಜಿಟಿಜಿಟಿ ಮಳೆಯಾಗಿದೆ. ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದ್ದು, ದೂಧ್‌ಗಂಗಾ, ವೇದಗಂಗಾ, ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ರಾಜಾಪುರ ಬ್ಯಾರೇಜ್‌ ಮೂಲಕ 52,127 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ದೂಧ್‌ಗಂಗಾ ನದಿಗೆ 15,840 ಕ್ಯುಸೆಕ್‌ ನೀರು ಬಂದು ಸೇರಿಕೊಳ್ಳುತ್ತಿದೆ. ಮೂರು ದಿನಗಳ ಹಿಂದೆ ಜಲಾವೃತವಾಗಿರುವ ಕಲ್ಲೋಳ– ಯಡೂರ ಸೇತುವೆ ಹಾಗೂ ಮಲಿಕವಾಡ– ದತ್ತವಾಡ ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿಯೇ ಇವೆ.

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ, ಕಾರವಾರ, ಅಂಕೋಲಾ, ಹೊನ್ನಾವರ ಮತ್ತು ಸಿದ್ದಾಪುರ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆ ಪ್ರಮಾಣ 991 ಮಿ.ಮೀ ಇದ್ದು, ಇದುವರೆಗೆ ಸರಾಸರಿ 302.4 ಮಿ.ಮೀ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನೈದು ದಿನ ವರ್ಷಧಾರೆ
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಇನ್ನೂ ಐದು ದಿನಗಳವರೆಗೆ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

114 ಅಡಿಗೇರಿದ ಕೆಆರ್‌ಎಸ್‌ ನೀರು
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನಪ್ರಮಾಣ 34 ಸಾವಿರ ಕ್ಯುಸೆಕ್‌ಗೆ ಏರಿಕೆಯಾಗಿದೆ.

ಮಂಗಳವಾರ ಸಂಜೆ ಜಲಾಶಯದ ನೀರಿನ ಮಟ್ಟ 114 ಅಡಿಗೆ ತಲುಪಿದೆ. 34,757 ಕ್ಯುಸೆಕ್‌ ಒಳಹರಿವು, 3,615 ಹೊರಹರಿವು ಇದೆ. ಕಳೆದ ವರ್ಷ ಇದೇ ದಿನ 78.45 ಅಡಿ ನೀರು ಸಂಗ್ರಹವಾಗಿತ್ತು.

2,000 ಜನರ ರಕ್ಷಣೆ
ಮುಂಬೈನಲ್ಲಿ ಭಾರಿ ಮಳೆಯಿಂದ ಸಂಚಾರ ಮುಂದುವರಿಸಲಾಗದೆ ನೀರಿನ ಮಧ್ಯೆ ಸಿಲುಕಿದ್ದ ಎರಡು ರೈಲುಗಳಲ್ಲಿದ್ದ ಸುಮಾರು 2,000 ಪ್ರಯಾಣಿಕರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌), ಪೊಲೀಸ್‌ ಹಾಗೂ ಅಗ್ನಿಶಾಮಕ ದಳ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿವೆ.

ನಲಸೋಪಾರ ಮತ್ತು ವಸೈ ನಿಲ್ದಾಣದ ನಡುವೆ ಶತಾಬ್ದಿ ಎಕ್ಸ್‌ಪ್ರೆಸ್‌ ಮತ್ತು ವಡೋದರಾ ಎಕ್ಸ್‌ಪ್ರೆಸ್‌ಗಳಲ್ಲಿ ಪ್ರಯಾಣಿಕರು ಸಿಲುಕಿದ್ದರು. ಈ ನಿಲ್ದಾಣಗಳ ನಡುವೆ ಹಳಿಗಳ ಮೇಲೆ ಎರಡು ಮೀಟರ್‌ಗೂ ಹೆಚ್ಚು ಎತ್ತರ ನೀರು ನಿಂತಿತ್ತು.

ಮುಖ್ಯಾಂಶಗಳು
*ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಶಾಲೆಗಳಿಗೆ ಬುಧವಾರ ರಜೆ

* ಕರಾವಳಿಯಲ್ಲಿ ಮಂಗಳವಾರ ಸ್ವಲ್ಪ ತಗ್ಗಿದ ಮಳೆ

* ಉತ್ತರ ಕನ್ನಡದಲ್ಲಿ ಜುಲೈಯಲ್ಲಿ 302.4 ಮಿ.ಮೀ ಮಳೆ

* ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನ 3 ಟಿಎಂಸಿ ಅಡಿ ನೀರು


ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಯಿನಾಡು ಸಮೀಪ ರಾಜಹಂಸ ಬಸ್‌ ಮೇಲೆ ಬಿದ್ದಿದ್ದ ವಿದ್ಯುತ್‌ ಕಂಬ


ಮಡಿಕೇರಿ ಸಮೀಪದ ಜೋಡಪಾಲದ ಬಳಿ ಬೃಹತ್‌ ಮರವೊಂದು ರಸ್ತೆ ಮೇಲೆ ಬಿದ್ದು ವಾಹನ ಸಂಚಾರ ವ್ಯತ್ಯಯ ಉಂಟಾಗಿತ್ತು

 

ಬರಹ ಇಷ್ಟವಾಯಿತೆ?

 • 21

  Happy
 • 5

  Amused
 • 4

  Sad
 • 4

  Frustrated
 • 2

  Angry

Comments:

0 comments

Write the first review for this !