ಒಂದು ಕೋಟಿ ಮೊತ್ತಕ್ಕೆ 15 ವರ್ಷಗಳ ಬಡ್ಡಿ ನೀಡಲು ಹೈಕೋರ್ಟ್‌ ತಾಕೀತು

7
ಗೋಕಾಕ ಟೆಕ್ಸ್‌ಟೈಲ್ಸ್ ಲಿಮಿಟೆಡ್ ಕಂಪನಿ ಸಲ್ಲಿಸಿದ್ದ ಅರ್ಜಿ ವಿಲೇವಾರಿ

ಒಂದು ಕೋಟಿ ಮೊತ್ತಕ್ಕೆ 15 ವರ್ಷಗಳ ಬಡ್ಡಿ ನೀಡಲು ಹೈಕೋರ್ಟ್‌ ತಾಕೀತು

Published:
Updated:

ಬೆಂಗಳೂರು: ಅರಿಯದೇ ಪಾವತಿಸಿದ ₹ 1.05 ಕೋಟಿಯಷ್ಟು ಮೊತ್ತದ ವಿದ್ಯುತ್‌ ತೆರಿಗೆ ಹಿಂದಿರುಗಿಸಲು ಬರೋಬ್ಬರಿ 15 ವರ್ಷ ಸತಾಯಿಸಿದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಪರಾಕಿ ಬಾರಿಸಿದೆ. ‘ಈ ಮೊತ್ತಕ್ಕೆ ವಾರ್ಷಿಕ ಶೇ ಆರರಷ್ಟು ಬಡ್ಡಿ ಸೇರಿಸಿ ಅರ್ಜಿದಾರರಿಗೆ ಹಿಂದಿರುಗಿಸಬೇಕು’ ಎಂದು ಮಹತ್ವದ ತೀರ್ಪು ನೀಡಿದೆ.

ಈ ಸಂಬಂಧ ಬೆಳಗಾವಿ ಜಿಲ್ಲೆಯ ಗೋಕಾಕ ಟೆಕ್ಸ್‌ಟೈಲ್ಸ್ ಲಿಮಿಟೆಡ್ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

ಪ್ರಕರಣವೇನು?: ವಾಹನಗಳ ಟೈರ್‌ಗಳಿಗೆ ಬಳಸಲಾಗುವ ಹತ್ತಿ ನೂಲುಗಳನ್ನು ತಯಾರಿಸುವ ಈ ಕಂಪನಿಯು ಗೋಕಾಕ್ ಫಾಲ್ಸ್‌ ಬಳಿಯಲ್ಲೇ ಇದೆ. ಜಲಪಾತದ ನೀರನ್ನು ಬಳಸಿಕೊಂಡು ವಿದ್ಯುತ್‌ ಉತ್ಪಾದನೆ ಮಾಡುತ್ತದೆ ಮತ್ತು ಈ ವಿದ್ಯುತ್‌ ‌ಅನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತದೆ. ವಿದ್ಯುತ್ ಬಳಕೆಗೆ ಪಾವತಿಸಬೇಕಾದ ಪ್ರತಿ ತಿಂಗಳ ಕಾನೂನುಬದ್ಧ ತೆರಿಗೆಯನ್ನೂ ಪಾವತಿ ಮಾಡುತ್ತಿದೆ.

ರಾಜ್ಯ ಸರ್ಕಾರ 1996ರ ಜೂನ್‌ 18ರಂದು ಕರ್ನಾಟಕ ವಿದ್ಯುತ್ (ತೆರಿಗೆ ಮತ್ತು ಬಳಕೆ) ಕಾಯ್ದೆ–1959ರ ಕಲಂ 8ರ ಅನುಸಾರ ಒಂದು ಅಧಿಸೂಚನೆ ಹೊರಡಿಸಿ; ಜಲ ವಿದ್ಯುತ್‌ ಸ್ವಯಂ ಉತ್ಪಾದನೆ ಮಾಡುವ ಮತ್ತು ಅದನ್ನು ತಾವೇ ಬಳಸಿಕೊಳ್ಳುವ ಬಳಕೆದಾರರಿಗೆ ತೆರಿಗೆ ವಿನಾಯ್ತಿ ನೀಡಿತ್ತು. ಏತನ್ಮಧ್ಯೆ ಅರ್ಜಿದಾರ ಕಂಪನಿ ಈ ಅಧಿಸೂಚನೆಯ ಅರಿವಿಲ್ಲದೆ ಪ್ರತಿ ತಿಂಗಳೂ ವಿದ್ಯುತ್ ತೆರಿಗೆ ಪಾವತಿ ಮಾಡುತ್ತಲೇ ಹೋಯಿತು.

ಅಧಿಸೂಚನೆ ಅರಿವಿಗೆ ಬಂದ ಕೂಡಲೇ ಕಂಪನಿ, ಚೀಫ್‌ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರ್‌ಗೆ ಪತ್ರವೊಂದನ್ನು ಬರೆದು, ‘ತೆರಿಗೆ ವ್ಯಾಪ್ತಿಯಿಂದ ಜಲವಿದ್ಯುತ್‌ ಬಳಕೆದಾರರನ್ನು ಹೊರಗಿಟ್ಟ ವಿಚಾರ 2003ರ ಡಿಸೆಂಬರ್ ತಿಂಗಳಲ್ಲಿ ನಮ್ಮ ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲ, ಇದು ಎಲ್ಲರ ಗಮನಕ್ಕೆ ಬರುವಷ್ಟು ವ್ಯಾಪಕ ಪ್ರಚಾರ ಪಡೆದಿರಲಿಲ್ಲ. ಹೀಗಾಗಿ 1996ರ ಜುಲೈ 1ರಿಂದ 2003ರ ಅಕ್ಟೋಬರ್ 31ರವರೆಗೆ ನಾವು ಪಾವತಿ ಮಾಡಿರುವ ₹ 1.05 ಕೋಟಿ ರೂಪಾಯಿ ಹಿಂದಿರುಗಿಸಬೇಕು’ ಎಂದು ಕೋರಿತು.

ಈ ಕೋರಿಕೆಗೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಕಂಪನಿ, ‘ನಮ್ಮ ಹಣವನ್ನು ಹಿಂದಿರುಗಿಸಿ ಅಥವಾ ಅದನ್ನು ಪಾವತಿಸಬೇಕಿರುವ ಮುಂದಿನ ಅವಧಿಯ ಮೊತ್ತಕ್ಕೆ ಅಡ್ಜಸ್ಟ್‌ ಮಾಡಿಕೊಳ್ಳಿ’ ಎಂದು ಕೋರಿತು. ಆದರೆ, ಇದಕ್ಕೂ ಯಾವುದೇ ಸ್ಪಂದನೆ ದೊರೆಯಲಿಲ್ಲ. ಹಾಗಾಗಿ ಕಂಪನಿ 2015ರ ಮೇ ತಿಂಗಳಲ್ಲಿ ಹೈಕೋರ್ಟ್‌ ಮೆಟ್ಟಿಲೇರಿತು.

ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಸರ್ಕಾರದ ಧೋರಣೆಗೆ ಅತೃಪ್ತಿ ಹೊರಹಾಕಿದೆ. ‘ಕೋಟಿಗಟ್ಟಲೆ ಮೊತ್ತವನ್ನು ಸರ್ಕಾರ ಒಂದೂವರೆ ದಶಕದಷ್ಟು ಕಾಲ ತನ್ನ ಬಳಿ ಇರಿಸಿಕೊಂಡಿದೆ. ಅರ್ಜಿದಾರರು ಹಿಂದಿರುಗಿಸಿ ಎಂದು ಕೇಳಿದಾಗಲೂ ತುಟಿಪಿಟಕ್‌ ಎನ್ನದೆ ಸುಮ್ಮನಿದೆ. ಇದು ತರವಲ್ಲ’ ಎಂದು ಇಲಾಖೆಯ ಕಿವಿಹಿಂಡಿದೆ.

‘ಅರ್ಜಿದಾರರು ತಮ್ಮ ಹಣವನ್ನು ಬಡ್ಡಿ ಸಮೇತ ಪಡೆಯಲು ಎಲ್ಲ ರೀತಿಯ ಕಾನೂನಾತ್ಮಕ ಹಕ್ಕು ಹೊಂದಿದ್ದಾರೆ’ ಎಂದೂ ನ್ಯಾಯಪೀಠ ತಿಳಿಸಿದೆ.

**

ವಾದ–ಪ್ರತಿವಾದ ಏನಿತ್ತು?

ಅರ್ಜಿದಾರ ಕಂಪನಿಯ ಪರ ವಾದ ಮಂಡಿಸಿದ ವಕೀಲ ಎಂ.ಎಸ್. ರಾಘವೇಂದ್ರ ಪ್ರಸಾದ್, ‘ಸರ್ಕಾರವು ಅರ್ಜಿದಾರರ ತೆರಿಗೆ ಹಣವನ್ನು 15 ವರ್ಷ ಅನ್ಯಾಯವಾಗಿ ತನ್ನ ಬಳಿ ಇರಿಸಿಕೊಂಡಿದೆ. ಅಷ್ಟೇ ಅಲ್ಲ, ಇದನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ. ಆದ್ದರಿಂದ ಈ ಹಣವನ್ನು ವಾರ್ಷಿಕ ಶೇ 18ರಷ್ಟು ಬಡ್ಡಿಯೊಂದಿಗೆ ಹಿಂದಿರುಗಿಸಲು ನಿರ್ದೇಶಿಸಬೇಕು’ ಎಂದು ಕೋರಿದ್ದರು.

ಇದಕ್ಕೆ ಸರ್ಕಾರಿ ವಕೀಲೆ ಜ್ಯೋತಿ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ, ‘ಅರ್ಜಿದಾರರು ತೆರಿಗೆಯನ್ನು ಖುದ್ದಾಗಿ ಪಾವತಿ ಮಾಡಿದ್ದಾರೆ. ಆದಾಗ್ಯೂ, ಅವರ ಕೋರಿಕೆಯನ್ನು ಮನ್ನಿಸಿ ಮೂಲಧನ ಹಿಂದಿರುಗಿಸಲು 2018ರ ಮಾರ್ಚ್‌ 19ರಂದು ಸರ್ಕಾರ ಒಪ್ಪಿದೆ. ಆದರೆ, ಬಡ್ಡಿ ಕೊಡುವ ಅವಶ್ಯಕತೆ ಇಲ್ಲ. ಯಾಕೆಂದರೆ, ಈ ಹಣವನ್ನು ಸಂಚಿತ ನಿಧಿಯಲ್ಲಿ ಇರಿಸಲಾಗಿತ್ತು’ ಎಂದು ಪ್ರತಿಪಾದಿಸಿದ್ದರು.

**

ತೀರ್ಪಿನಲ್ಲಿ ಹೇಳಿರುವುದೇನು?

* ಅರ್ಜಿದಾರರ ₹ 1,05,54,243 ತೆರಿಗೆ ಮೊತ್ತವನ್ನು ಸರ್ಕಾರ ವಾರ್ಷಿಕ ಶೇ 6ರಷ್ಟು ಬಡ್ಡಿಯೊಂದಿಗೆ ಹಿಂದಿರುಗಿಸಬೇಕು.

* ಒಂದು ತಿಂಗಳಿನಲ್ಲಿ ಪಾವತಿ ಮಾಡದೇ ಹೋದರೆ ಅರ್ಜಿದಾರರು, ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಬಹುದು.

* ಈ ಪ್ರಕರಣದಲ್ಲಿ ಅಧಿಕಾರಿಗಳು ತಪ್ಪೆಸಗಿದ್ದಾರೆ ಎಂಬ ಕಾರಣಕ್ಕೆ ಸರ್ಕಾರವನ್ನು ಶಿಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ, ಸರ್ಕಾರ ಬಡ್ಡಿಯ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ವಸೂಲಿ ಮಾಡಿಕೊಳ್ಳಬಹುದು.

**

ಸರ್ಕಾರವೇ ನೆಟ್ಟಗಿಲ್ಲ ಅಂದಾಗ ಜನರಿಂದ ಎಂತಹ ನ್ಯಾಯಸಮ್ಮತ ನಡವಳಿಕೆ ನಿರೀಕ್ಷಿಸಲು ಸಾಧ್ಯ ?

-ಬಿ.ವೀರಪ್ಪ, ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

 • 33

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !