ಅನುಮೋದನೆ ನೀಡಲು ಆದೇಶ

7
ಭಾಷಾ ಅಲ್ಪಸಂಖ್ಯಾತ ಶಾಲೆಗಳ ವಿವಾದ

ಅನುಮೋದನೆ ನೀಡಲು ಆದೇಶ

Published:
Updated:
Prajavani

ಬೆಂಗಳೂರು: ‘ಭಾಷಾ ಅಲ್ಪಸಂಖ್ಯಾತರನ್ನು ಗುರುತಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಪಟ್ಟಿಯನ್ನು ಅನುಮೋದಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮೂರು ತಿಂಗಳ ಒಳಗೆ ಅಧಿಸೂಚನೆ ಹೊರಡಿಸಬೇಕು’ ಎಂದು ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಈ ಕುರಿತಂತೆ ಜ್ಞಾನಮಂದಿರ ಟ್ರಸ್ಟ್‌ ಸೇರಿದಂತೆ 10ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಲೇವಾರಿ ಮಾಡಿದೆ.

‘ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಅಧಿಸೂಚನೆ ಹೊರಡಿಸುವಂತೆ ಕೋರಬೇಕು. ಕೇಂದ್ರದ ಈ ಅಧಿಸೂಚನೆಯ ಅನುಸಾರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗವು, ಭಾಷಾ ಅಲ್ಪಸಂಖ್ಯಾತ ಮಾನ್ಯತೆ ಕೋರುವ ಅರ್ಜಿಗಳನ್ನು ಪರಿಗಣಿಸಬೇಕು’ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು? : ‘ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿಯಲ್ಲಿ ಪ್ರವೇಶಾತಿ ನೀಡಲು ಸಾಧ್ಯವಿಲ್ಲ’ ಎಂದು ಅರ್ಜಿದಾರರೂ ಆದ ರಾಜ್ಯದಲ್ಲಿನ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಪ್ರತಿಪಾದಿಸುತ್ತಿದ್ದವು.

ಈ ಕುರಿತಂತೆ ಉಂಟಾದ ವ್ಯಾಜ್ಯದಲ್ಲಿ ಹೈಕೋರ್ಟ್‌ ಆದೇಶದ ಅನುಸಾರ ರಾಜ್ಯ ಸರ್ಕಾರ, 2018ರ ನವೆಂಬರ್‌ 5ರಂದು ಅಲ್ಪಸಂಖ್ಯಾತ ಭಾಷಿಕರನ್ನು ಗುರುತಿಸಿ ಅಧಿಸೂಚನೆ ಹೊರಡಿಸಿತ್ತು.

ಮತೀಯ ಮತ್ತು ಭಾಷಾ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಅವರು 2007ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಅನುಸಾರ ರಾಜ್ಯದಲ್ಲಿ ‘ಉರ್ದು, ತೆಲುಗು, ತಮಿಳು, ಮಲಯಾಳಂ, ಮರಾಠಿ, ತುಳು, ಲಂಬಾಣಿ, ಹಿಂದಿ, ಕೊಂಕಣಿ ಮತ್ತು ಗುಜರಾತಿ ಭಾಷೆಗಳು ಅಲ್ಪಸಂಖ್ಯಾತ ಭಾಷೆಗಳಾಗಿವೆ ಎಂದು ಅಧಿಸೂಚನೆಯಲ್ಲಿ ಗುರುತಿಸಲಾಗಿತ್ತು.

ಆದರೆ, ‘ರಾಜ್ಯದ ಈ ಅಧಿಸೂಚನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ’ ಎಂಬ ಕಾರಣ ಮುಂದು ಮಾಡಿದ್ದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಯೋಗ ಮಾನ್ಯತೆ ನೀಡಲು ತಕರಾರು ತೆಗೆದಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !