ಚಾರಿತ್ರಿಕ ದೇಗುಲಗಳ ಪಳೆಯುಳಿಕೆ !

7

ಚಾರಿತ್ರಿಕ ದೇಗುಲಗಳ ಪಳೆಯುಳಿಕೆ !

Published:
Updated:
Prajavani

ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಅಗರ ಗ್ರಾಮದಲ್ಲಿ ಕ್ರಿ.ಶ 1200ರಲ್ಲಿ ಚೋಳ ರಾಜರಿಂದ ಸ್ಥಾಪನೆಯಾದ ಸೋಮೇಶ್ವರ ದೇಗುಲವೊಂದಿದೆ. ಇದು ಬೆಂಗಳೂರಿನ ಅತ್ಯಂತ ಹಳೇ ದೇವಾಸ್ಥಾನಗಳಲ್ಲೊಂದು. 12ನೇ ಶತಮಾನದಲ್ಲಿ ಬೇಗೂರು, ದೊಡ್ಡಕನ್ನಳ್ಳಿ, ಯಮಲೂರು, ಮಡಿವಾಳ, ಹಲಸೂರಿನಲ್ಲಿ ಸೋಮೇಶ್ವರ ದೇಗುಲಗಳು ನಿರ್ಮಾಣವಾದ ಬಗ್ಗೆ ಪುರಾವೆಗಳಿವೆ.

ಹಳೇ ಮಡಿವಾಳ ಸೋಮೇಶ್ವರ ದೇವಾಲಯ ಕೂಡ ಪುರಾತನವಾಗಿದ್ದು, ಚೋಳರ ಕಾಲಕ್ಕೆ ಸೇರಿದ್ದಾಗಿದೆ. ಕ್ರಿ.ಶ 1247ರಲ್ಲಿ ನಿರ್ಮಾಣಗೊಂಡಿದೆ. ಗರ್ಭಗುಡಿಯಲ್ಲಿ ನೈಸರ್ಗಿಕವಾದ ಕಲ್ಲಿನ 'ಸ್ವಯಂಭೂ ಶಿವಲಿಂಗ’ ಕಾಣಬಹುದು. ಪುರಾತನ ಹಲಸೂರು ಸೋಮೇಶ್ವರ ದೇಗುಲ ಕೂಡ ಪ್ರಸಿದ್ಧ. ‌ಈ ದೇವಾಲಯದಲ್ಲಿ ಚೌಕಾಕಾರದ ಕಲ್ಯಾಣಿ ನಿರ್ಮಾಣಗೊಂಡಿದೆ. 

ಅಗರ ಗ್ರಾಮ ರಾಗಿ ಹಾಗೂ ಭತ್ತ ಬೆಳೆಯುವ ಪ್ರದೇಶಕ್ಕೆ ಪ್ರಸಿದ್ಧಿ ಹೊಂದಿತ್ತು. ನಗರೀಕರಣದಿಂದ ಅಪಾರ್ಟ್‌ಮೆಂಟ್‌ಗಳು,ಖಾಸಗಿ ಕಂಪನಿಗಳು ಈ ಪ್ರದೇಶದಲ್ಲಿ ತಲೆಯೆತ್ತಿ ಗ್ರಾಮ ಸ್ವರೂಪವೇ ಕಳೆದು ಹೋಗಿದೆ. ಇದರ ಸೆರೆಗಿನಲ್ಲೇ ಇರುವ ಎಚ್‌ಎಸ್‌ಆರ್ ಬಡಾವಣೆ ಮತ್ತಿತರ ಪ್ರದೇಶಗಳು ಕಾಸ್ಮೋಪಾಲಿಟನ್ ಸಂಸ್ಕೃತಿ ಪ್ರಭಾವಕ್ಕೆ ಒಳಗಾಗಿವೆ.

ಹೊಸೂರು ರಸ್ತೆ ಬೇಗೂರಿನಲ್ಲಿ ಮತ್ತೊಂದು ಸೋಮೇಶ್ವರ ದೇಗುಲ ಇದೆ. ಇದು ಸುಮಾರು 1300 ವರ್ಷಗಳಷ್ಟು ಹಳೆಯದು. ಈ ದೇವಾಲಯ ಚೋಳ ವಂಶದ ಮೊದಲನೇಯ ಕುಲೋತುಂಗ ಚೋಳ ಹಾಗೂ ತಲಕಾಡು ಗಂಗರ ರಾಜಸಿಂಹನಂದಿ ಅವರುಗಳಿಂದ ನಿರ್ಮಾಣಗೊಂಡಿವೆ. ಈ ದೇವಾಲಯದಲ್ಲಿ ಐದು ಲಿಂಗಗಳಿರುವುದರಿಂದ ಇದನ್ನು ಪಂಚಲಿಂಗೇಶ್ವರ ದೇಗುಲ ಎಂತಲೂ ಕರೆಯಲಾಗುತ್ತದೆ. ಇನ್ನೂ ಯಮಲೂರು ಹಾಗೂ ದೊಡ್ಡಕನ್ನಳ್ಳಿ ಇರುವ ದೇವಾಲಗಳು ಕೂಡ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿವೆ.

ಆದರೆ, ಅಗರ ಗ್ರಾಮದ ಸೋಮೇಶ್ವರ ದೇಗುಲ ಮಾತ್ರ ಚಾರಿತ್ರಿಕವಾಗಿದ್ದು, ಚೋಳರ ಕಾಲದ ಕೆಲ ಪ್ರಮುಖ ಶಾಸನಗಳು ಇಲ್ಲಿ ಪತ್ತೆಯಾಗಿವೆ. 500 ವರ್ಷಗಳ ಹಿಂದೆಯೇ ನಂದಿ ಹಾಗೂ ಪಾರ್ವತಿ ವಿಗ್ರಹಗಳು ನಾಶವಾಗಿವೆ. ಚೋಳ ರಾಜರ ವಿಗ್ರಹಗಳೂ ಇಲ್ಲಿ ಕಾಣಸಿಗುತ್ತವೆ. ನಗರೀಕರಣದ ಪ್ರಭಾವ, ನಿರ್ಲಕ್ಷ್ಯ ಮತ್ತು ಶಿಲಾಶಾಸನಗಳ ಬಗ್ಗೆ ತಿಳಿವಳಿಕೆ ಕೊರತೆಯಿಂದ ಕೆಲ ಶಾಸನಗಳು ನಾಪತ್ತೆ ಇಲ್ಲವೇ ಭೂಮಿಯಲ್ಲಿ ಹುದುಗಿ ಹೋಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಇತಿಹಾಸ ತಜ್ಞರು.

ಶೈವ ಧರ್ಮದ ಅನುಯಾಯಿಗಳಾದ ಚೋಳರು ಇಲ್ಲಿ ನಿರ್ಮಿಸಿರುವ ಶಿವನ ದೇಗುಲದಲ್ಲಿ ಭೂಸ್ಪರ್ಶದ ಶಿವಲಿಂಗ ಪ್ರಮುಖ ಆಕರ್ಷಣೆ. ಕಲ್ಲುಗುಂಡುಗಳಿಂದ ನಿರ್ಮಾಣಗೊಂಡಿರುವ ಕಟ್ಟಡ ವಿನ್ಯಾಸ ಚರಿತ್ರೆ ಕುರುಹು ಆಗಿದೆ. ಈಗ ಹೊಸದಾಗಿ ನಿರ್ಮಾಣಗೊಂಡಿರುವ ರಾಜಗೋಪುರ, ಗರುಡಗಂಬ ದೇಗುಲದ ಅಂದ ಹೆಚ್ಚಿಸಿದೆ. ಇದೇ ಪ್ರಾಂಗಣದಲ್ಲಿ ಚಂಡಿಕೇಶ್ವರ, ಕಾಲಭೈರವ ದೇಗುಲಗಳು ಇವೆ. ಸಂಕ್ರಾಂತಿ, ಶಿವರಾತ್ರಿ, ಶ್ರಾವಣಮಾಸ, ನವರಾತ್ರಿ ಸಮಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಕಲ್ಯಾಣೋತ್ಸವ ಇಲ್ಲಿ ನಡೆಯುತ್ತದೆ.

‘60 ವರ್ಷಗಳ ಹಿಂದೆ ಈ ದೇಗುಲ ಪಾಳು ಬಿದ್ದಿತ್ತು. ಮಳೆಗಾಲದಲ್ಲಿ ಅಳೆತ್ತರ ನೀರು ತುಂಬಿಕೊಂಡು ದೇಗುಲ ಪ್ರವೇಶ ಸಾಧ್ಯವೇ ಆಗುತ್ತಿರಲಿಲ್ಲ. ಮೇಲ್ಛಾವಣಿ ಮೇಲೆ ಜೋಂಡು ಹುಲ್ಲು ಬೆಳೆದು ಪಾಳುಬಿದ್ದ ಜಾಗದಂತೆ ಇತ್ತು. ಹಂತ ಹಂತವಾಗಿ ದಾನಿಗಳ ನೆರವಿನಿಂದಾಗಿ ಸುಂದರ ತಾಣವಾಗಿ ರೂಪಿಸಲಾಗಿದೆ’ ಎಂದು ಪ್ರಧಾನ ಅರ್ಚಕ ಪ್ರಭಾಕರ ದೀಕ್ಷಿತ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !