ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತರ ಕ್ಷಮೆ ಕೇಳುವೆ: ರೇವಣ್ಣ

Last Updated 17 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜೀನಾಮೆ ನೀಡಿರುವ ಶಾಸಕರಿಗೆ ನನ್ನಿಂದ ನೋವಾಗಿದ್ದರೆ, ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬುಧವಾರ ಇಲ್ಲಿ ತಿಳಿಸಿದರು.

ಅತೃಪ್ತ ಶಾಸಕರ ರಾಜೀನಾಮೆಗೆ ರೇವಣ್ಣ ಕಾರಣ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕ್ಷಮೆ ಕೇಳಿದರು.

‘ಬೆಂಗಳೂರಿನಲ್ಲಿ ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ನಗರದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಅವರ ಸಮ್ಮುಖದಲ್ಲೇ ಸಭೆ ನಡೆಸಲಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಕಾಮಗಾರಿ ವಹಿಸುವಂತೆ ಕೇಳಿಲ್ಲ. ಬೆಂಗಳೂರು ನಗರದಲ್ಲಿ ಒಂದು ಸಣ್ಣ ಕಾಮಗಾರಿ ಕೊಡುವಂತೆ ಯಾರನ್ನಾದರೂ ಕೇಳಿರುವುದನ್ನು ಖಚಿತಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸವಾಲು ಹಾಕಿದರು.

‘ನಾನು ಹಿಂದೆ ಸಚಿವನಾಗಿದ್ದ ಸಮಯದಲ್ಲಿ ಬೆಂಗಳೂರು ನಗರ ವರ್ತುಲ ರಸ್ತೆ ನಿರ್ಮಾಣಕ್ಕೆ ₹4 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿತ್ತು. ದಾಬಸ್‌ಪೇಟೆ– ಸೋಲೂರು– ಮಾಗಡಿ– ರಾಮನಗರ– ಕನಕಪುರ– ಆನೇಕಲ್– ಹೊಸಕೋಟೆ– ದೊಡ್ಡಬಳ್ಳಾಪುರ– ದೇವನಹಳ್ಳಿ ಮೂಲಕ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿತ್ತು. ಆದರೆ ಈವರೆಗೂ ಯೋಜನೆ ಜಾರಿಯಾಗಿಲ್ಲ. ಪ್ರಸ್ತುತ ಯೋಜನಾ ವೆಚ್ಚ ₹17 ಸಾವಿರ ಕೋಟಿಗೆ ಏರಿಕೆ ಆಗಿದೆ. ಕೆಲಸ ಮಾಡುವುದಿಲ್ಲ, ಕೆಲಸ ಮಾಡಲು ಮುಂದಾದರೆ ಅದಕ್ಕೂ ಅವಕಾಶ ನೀಡುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ರಾಜೀವ್ ಚಂದ್ರಶೇಖರ್ ವಿರುದ್ಧ ಕಿಡಿ: ‘ಮಹಾನುಭಾವರೊಬ್ಬರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದೆವು. ಆದರೆ ಅವರು ಈಗ ಏನೇನು ಮಾಡುತ್ತಿದ್ದಾರೆ ಎಂಬುದನ್ನು ಮಹಾಲಕ್ಷ್ಮಿ ದೇವಿ ನೋಡಿಕೊಳ್ಳುತ್ತಾಳೆ’ ಎಂದು ರೇವಣ್ಣ ಹೇಳುವ ಮೂಲಕ ರಾಜೀವ್ ಚಂದ್ರಶೇಖರ್ ಹೆಸರು ಹೇಳದೆ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT