ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ವಿದೇಶಿಯರ ಕರಾಳ ಜಗತ್ತು

ಆಫ್ರಿಕನ್ನರ ಪುಂಡಾಟಕ್ಕೆ ಬೀಳುತ್ತಿಲ್ಲ ಬ್ರೇಕ್ l ಶಿಕ್ಷಣ ನೀಡಿದರೆ ದಂಧೆಗಳನ್ನು ಪರಿಚಯಿಸಿದರು!
Last Updated 1 ಡಿಸೆಂಬರ್ 2018, 20:11 IST
ಅಕ್ಷರ ಗಾತ್ರ

ಬೆಂಗಳೂರು: ಯುವಕರ ನಾಲಿಗೆಗೆ ಹೊಸ ಹೊಸ ಮಾದಕ ದ್ರವ್ಯಗಳ ರುಚಿ ತೋರಿಸುತ್ತಿರುವ, ದೂರದಲ್ಲಿ ಕುಳಿತು ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕಿ ದುಡ್ಡು ಲಪಟಾಯಿಸುವ, ಪೊಲೀಸರ ಕಣ್ತಪ್ಪಿಸಿ ಡ್ರಗ್ಸ್‌ ಮಾಫಿಯಾವನ್ನು ನಿಯಂತ್ರಿಸುವ ದೊಡ್ಡ ದಂಡೇ ಕರುನಾಡಿನಲ್ಲಿ ನೆಲೆಯೂರಿದೆ. ಕೆಲವರ ಪುಂಡಾಟಿಕೆಯಿಂದ ನಮ್ಮ ರಾಜ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದೂ ಉಂಟು.

ಅಕ್ರಮವಾಗಿ ದೇಶದೊಳಗೆ ನುಸುಳಿಸಿರುವ, ವೀಸಾ ಅವಧಿ ಮುಗಿದ ಬಳಿಕವೂ ಭೂಗತರಾಗಿ ನೆಲೆಸಿ ನಾಡಿನ ಸಂಸ್ಕೃತಿಗೆ ಕಂಟಕ ತಂದೊಡ್ಡುತ್ತಿರುವ ವಿದೇಶಿಯರು ಖಾಕಿ ಪಡೆಗೆ ತಲೆನೋವು ತಂದಿದ್ದಾರೆ. ಅದರಲ್ಲೂ ಬೇರೆ ಬೇರೆ ನೆವದಲ್ಲಿ ದೇಶದೊಳಗೆ ಕಾಲಿಡುವ ಆಫ್ರಿಕನ್‌ ದೇಶಗಳ ಕೆಲವು ‘ಪ್ರಜೆ’ಗಳು ದಿನೇ ದಿನೇ ಅಪರಾಧ ಜಗತ್ತನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಇವರನ್ನು ಹಿಡಿದು ಮಟ್ಟಹಾಕಲು ಹೋದರೆ ಅಂತರರಾಷ್ಟ್ರೀಯ ಕಾನೂನು, ಮಾನವ ಹಕ್ಕುಗಳ ಅಡ್ಡಿ ಬರುತ್ತಿದೆ. ಅಪರಾಧ ಹಿನ್ನೆಲೆಯ ಅಥವಾ ಇಲ್ಲಿ ಬಂದ ಮೇಲೆ ದೈನಂದಿನ ಖರ್ಚಿಗಾಗಿ ತಮ್ಮದೇ ದೇಶಿಯರ ‘ಅಕ್ರಮ’ವಾಸಿಗಳ ಜತೆ ಸೇರಿಸಿಕೊಂಡು ನಡೆಸುವ ಕೃತ್ಯಗಳು ಪಾತಕಲೋಕವೊಂದನ್ನೇ ಸೃಷ್ಟಿಸಿವೆ. ಸರ್ಕಾರಕ್ಕೂ ಸವಾಲಾಗಿದೆ.

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್ ಆರ್‌ಓ) ಅಧಿಕಾರಿಗಳ ಮಾಹಿತಿ ಪ್ರಕಾರ, 186 ರಾಷ್ಟ್ರಗಳ 31 ಸಾವಿರ ಜನ ರಾಜ್ಯದಲ್ಲಿದ್ದಾರೆ. ಅವರಲ್ಲಿ 1,025 ಮಂದಿ ಅಕ್ರಮವಾಸಿಗಳು! ಲೆಕ್ಕಕ್ಕೆ ಸಿಗದ ಎಷ್ಟೋ ಮಂದಿ ರಾಜ್ಯದ ನಾನಾ ಮೂಲೆಗಳಲ್ಲಿ ನೆಲೆಸಿದ್ದಾರೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ 21,890 ವಿದೇಶಿಗರಿದ್ದು, ಅವರಲ್ಲಿ 885 ಮಂದಿ ವೀಸಾ ನಿಯಮ ಉಲ್ಲಂಘಿಸಿ ನೆಲೆಯೂರಿದ್ದಾರೆ. ನಗರದ ಕಮ್ಮನಹಳ್ಳಿ, ಕೊತ್ತನೂರು, ಬಾಣಸವಾಡಿ, ಹೆಣ್ಣೂರು ಮತ್ತು ಸೋಲದೇವನಹಳ್ಳಿ ಸುತ್ತಮುತ್ತ ಇವರ ವರ್ತನೆಗಳು ಸ್ಥಳೀಯರನ್ನು ರೊಚ್ಚಿಗೆಬ್ಬಿಸಿವೆ.

ಸ್ಥಳೀಯ ಕಾನೂನಿಗೆ ಬಗ್ಗದೆ, ಇಲ್ಲಿನ ಸಂಸ್ಕೃತಿಗೆ ಒಗ್ಗದೆ, ಮದ್ಯ ಮತ್ತು ಮಾದಕ ವಸ್ತುವಿನ ಅಮಲಿನಲ್ಲಿ ಇವರು ನಿರಂತರವಾಗಿ ದಾಂದಲೆಗಳು ನಡೆಸುತ್ತಿದ್ದಾರೆ. ಒಪ್ಪಿತ ಸೆಕ್ಸ್‌ಗೆ ಹಣ ಪಡೆಯುವ ವಿಚಾರಕ್ಕೆ 2017ರಲ್ಲಿ ಬೆಂಗಳೂರಿನಲ್ಲಿ ನಡೆದ ಉಗಾಂಡ ಪ್ರಜೆ ಫ್ಲಾರೆನ್ಸ್ ಕೊಲೆ ಪ್ರಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಆನಂತರ ಅಕ್ರಮ ವಲಸಿಗರನ್ನು ಹೊರಗಟ್ಟಲು ಗೃಹಇಲಾಖೆಯಿಂದ ಗಂಭೀರ ಕೂಗು ಎದ್ದಿತಾದರೂ, ಆ ಪ್ರಕರಣದ ಕಾವು ಕಡಿಮೆಯಾದಂತೆ ಇಲಾಖೆಯ ಧ್ವನಿಯೂ ಇಳಿಯಿತು.

ಆ ನಂತರದ ದಿನಗಳಲ್ಲಿ ಕೆಲ ಅಕ್ರಮ ವಾಸಿಗಳು ಲೆಕ್ಕವಿಲ್ಲದಷ್ಟು ಹಾವಳಿ ನಡೆಸುತ್ತ ಬಂದಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ತಮ್ಮದೇ ಕೋಟೆ ಕಟ್ಟಿಕೊಂಡು, ಸ್ಥಳೀಯರ ಜೊತೆ ಸಂಘರ್ಷಕ್ಕೆ ಇಳಿಯುತ್ತಿದ್ದಾರೆ. ಪುಂಡಾಟಿಕೆ ಪ್ರಶ್ನಿಸಲು ಹೋಗುವ ಪೊಲೀಸರನ್ನೂ ತದುಕುತ್ತಿದ್ದಾರೆ. ಸ್ಥಳೀಯ ಕಾನೂನನ್ನೇ ತಮ್ಮ ರಕ್ಷಣೆಗೆ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿ, ಪ್ರವಾಸಿ, ಬ್ಯುಸಿನೆಸ್ ವೀಸಾದಡಿ ರಾಜ್ಯಕ್ಕೆ ಬರುತ್ತಿರುವ ಆಫ್ರಿಕಾ ಪ್ರಜೆಗಳು, ಆನಂತರ ವೀಸಾ ನಿಯಮಗಳನ್ನು ಉಲ್ಲಂಘಿಸಿ ನಡೆಸುತ್ತಿರುವ ದಂಧೆಗಳು ಯಾರ ನಿಯಂತ್ರಣಕ್ಕೂ ಸಿಗುತ್ತಿಲ್ಲ.

ಅಕ್ರಮವಾಗಿ ನೆಲೆಸಿರುವ ಆಫ್ರಿಕನ್ನರ ಪೈಕಿ ಹೆಚ್ಚಿನವರು ಮಾಂಸ, ಮದ್ಯ, ಸಂಗೀತ, ಮಾದಕ ವಸ್ತು ಮತ್ತು ದೈಹಿಕ ಕಸರತ್ತಿನ ದಾಸರು. ಬೆಂಗಳೂರು ಹಾಗೂ ಮೈಸೂರಿನ ಪ್ರತಿಷ್ಠಿತ ರಸ್ತೆಗಳ ಪಬ್‌ ಹಾಗೂ ಡ್ಯಾನ್ಸ್‌ ಬಾರ್‌ಗಳಲ್ಲಿ ಎಲ್ಲ ವ್ಯವಹಾರಗಳಿಗೂ ಇವರೇ ಮೂಲ. ಈ ಪಬ್‌, ರೆಸ್ಟೋರೆಂಟ್‌ಗಳೇ ಇವರಿಗೆ ಪಿಕಪ್‌ ಪಾಯಿಂಟ್‌ಗಳೂ ಆಗಿವೆ. ಅವರ ಜಗತ್ತಿನಲ್ಲಿ ಹೊಸಬರಿಗೆ, ಹೊರಗಿನವರಿಗೆ ಅಷ್ಟು ಸುಲಭಕ್ಕೆ ಪ್ರವೇಶ ಸಿಗುವುದಿಲ್ಲ. ಜಗತ್ತನ್ನೇ ಮರೆತು ಮದ್ಯ, ಮಾದಕವಸ್ತುವಿನ ಆರಾಧನೆಯಲ್ಲಿ ತೊಡಗಿ ನಡೆಸುವ ದಾಂದಲೆಗಳು ಇವರ ಅಮಲು ಇಳಿಯುವ ವೇಳೆಗೆ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿರುತ್ತದೆ. ವೇಶ್ಯಾವಾಟಿಕೆ, ಡ್ರಗ್ಸ್ ಮಾರಾಟ, ಸೈಬರ್ ವಂಚನೆಯಂಥ ಅಪರಾಧ ಕೃತ್ಯಗಳಲ್ಲಿ ನೇರವಾಗಿ ಭಾಗಿಯಾಗುತ್ತಿರುವ ವಿದೇಶಿ ಪ್ರಜೆಗಳು, ಎಟಿಎಂ ಸ್ಕಿಮ್ಮರ್‌ನಂತಹ ಹೊಸ ದಂಧೆಯನ್ನೂ ರಾಜ್ಯಕ್ಕೆ ಪ‍ರಿಚಯಿಸಿದ್ದಾರೆ.

ಸಾಮಾನ್ಯನಿರಲಿ, ಐಪಿಎಸ್ ಅಧಿಕಾರಿಗಳ ಬ್ಯಾಂಕ್ ಖಾತೆಗೇ ಕನ್ನ ಹಾಕುವ ಮೂಲಕ ಪೊಲೀಸ್ ಇಲಾಖೆಗೇ ಮುಜುಗರ ತಂದೊಡ್ಡಿದ್ದಾರೆ. ಹೊಸ ಹೊಸ ಮಾದಕ ವಸ್ತುಗಳನ್ನು ಇಲ್ಲಿನ ಯುವಕರ ನಾಲಿಗೆ ಮೇಲಿಟ್ಟು, ಅವರನ್ನೂ ವ್ಯಸನಿಗಳನ್ನಾಗಿ ಮಾಡಿದ್ದಾರೆ. ಅವರ ತರಬೇತಿಯ ಫಲದಿಂದ, ಇಂದು ರಾಜ್ಯದ ಯುವಕರೂ ಸ್ಕಿಮ್ಮಿಂಗ್‌ನಲ್ಲಿ ನಿಸ್ಸೀಮರಾಗಿದ್ದಾರೆ . ‘ಬಾಂಗ್ಲಾ ನಿವಾಸಿಗಳು ಸುಮಾರು 80 ಕ್ಯಾಂಪ್‌ಗಳು ರಾಜ್ಯದಲ್ಲಿದ್ದು, ಅವರೆಲ್ಲ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಈ ಬಗ್ಗೆ ಎಫ್‌ಆರ್‌ಆರ್‌ಒ ಅಧಿಕಾರಿಗಳು ರಾಜ್ಯ ಗುಪ್ತಚರ ಇಲಾಖೆ ಹಾಗೂ ಆಂತರಿಕ ಭದ್ರತಾ ವಿಭಾಗಕ್ಕೆ ಮಾಹಿತಿ ಕೊಟ್ಟಿದ್ದಾರೆ. ಅವರನ್ನು ದೇಶದಿಂದ ಹೊರದಬ್ಬುವ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿ ತಿಳಿಸಿದರು.

ಅಕ್ರಮ ವಿದೇಶಿಯರ ಸಂತತಿ ಎಷ್ಟು?

ಸುಡಾನ್‌;145

ನೈಜೀರಿಯಾ;63

ತಾಂಜಾನಿಯಾ;22

ಉಗಾಂಡ;26

ಯಮನ್‌;69

ಸಿರಿಯಾ;16

ರುವಾಂಡ;18

ಮಂಗೋಲಿಯಾ;13

ಅಫ್ಗಾನಿಸ್ತಾನ 28

ಬಾಂಗ್ಲಾದೇಶ;28

ಕಾಂಗೊ;124

ಇರಾನ್;42

ಇರಾಕ್‌;39

ಐವರಿ ಕೋಸ್ಟ್‌;68

(ವೀಸಾ ಅವಧಿ ಮುಗಿದರೂ ಉಳಿದುಕೊಂಡವರು)

***

ವಿದೇಶಿಗರ ವಿರುದ್ಧ ಪ್ರಕರಣ; 3ನೇ ಸ್ಥಾನ

ಪೊಲೀಸ್ ಇಲಾಖೆಯ ಅಂಕಿ ಅಂಶಗಳ ಪ್ರಕಾರ ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಸಂಬಂಧ ಹೆಚ್ಚು ದೂರುಗಳು ದಾಖಲಾದ ರಾಜ್ಯಗಳ ಪ‍ಟ್ಟಿಯಲ್ಲಿ ಕರ್ನಾಟಕ (130) ಮೂರನೇ ಸ್ಥಾನದಲ್ಲಿದೆ. ಈ ಸಾಲಿನಲ್ಲಿ ಪಶ್ಚಿಮ ಬಂಗಾಳ (689) ಮೊದಲಿದ್ದರೆ, ದೆಹಲಿ (176) ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT