ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೇನು ಬಳೆ ತೊಟ್ಕೊಂಡು ಕೂತಿಲ್ಲ: ಇಕ್ಬಾಲ್ ಅನ್ಸಾರಿ

ರೆಡ್ಡಿ ಹೇಳಿಕೆಗೆ ತಿರುಗೇಟು
Last Updated 6 ಜನವರಿ 2020, 16:47 IST
ಅಕ್ಷರ ಗಾತ್ರ

ಕೊಪ್ಪಳ:'ಅವರು ಖಡ್ಗ ಹಿಡಿದರೆ ನಾವೇನು ಬಳೆ ತೊಟ್ಟಿಲ್ಲ. ನಮಗೂ ಬೇರೆಯದನ್ನು ಹಿಡಿಯಲು ಗೊತ್ತಿದೆ' ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಿರುಗೇಟು ನೀಡಿದರು.

ಸೋಮವಾರ ನಗರದಲ್ಲಿನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಸಿಎಎ ಪರ ಮಾತನಾಡುವಾಗ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡಿರುವ ಶಾಸಕ ಸೋಮಶೇಖರ ರಡ್ಡಿಮಾತು ಖಂಡನೀಯ ಎಂದರು.

'ಕಾನೂನಿನ ಚೌಕಟ್ಟಿನಲ್ಲಿ ಮಾತನಾಡಬೇಕು. ಅವರ ಮಾತುಗಳು ಅವರ ಅಜ್ಞಾನ ತೋರಿಸುತ್ತದೆ. ಅವರು ಕೈಯಲ್ಲಿ ಖಡ್ಗ ಹಿಡಿಯುವ ಮಾತನಾಡುತ್ತಾರೆ. ನೀವು ಖಡ್ಗ ಹಿಡಿದರೆ ಇನ್ನೊಬ್ಬರು ಇನ್ನೊಂದನ್ನು ಹಿಡಿದುಕೊಂಡರೆ ದೇಶವನ್ನು ಎಲ್ಲಿಗೆ ಒಯ್ಯ ಬಯಸುತ್ತೀರಿ? ಕೋಮು ಗಲಭೆಗಳನ್ನು ಎಬ್ಬಿಸಿ ಪ್ರಚೋದನೆ ನೀಡುವಂತ ಕೆಲಸವನ್ನು ಶಾಸಕರು ಮಾಡಬಾರದು. ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವಾಗ ಸಂವಿಧಾನದ ಆಶಯಗಳಂತೆ ಎಲ್ಲರನ್ನೂ ಸಮಾನರಾಗಿ ಕಾಣುತ್ತೇನೆ ಎಂದು ಪ್ರಮಾಣ ಪಡೆಯುತ್ತೀರಿ, ಇದೀಗ ಒಂದು ಸಮುದಾಯ ಗುರಿಯಾಗಿಸಿ ಮಾತನಾಡುವುದು ಸರಿಯಲ್ಲ' ಎಂದರು.

'ಕೇಂದ್ರ ಸರ್ಕಾರ ಹಿಟ್ಲರ್‌ನಂತೆ ವರ್ತಿಸುತ್ತಿದೆ. ಜನಪ್ರಿಯತೆಗಾಗಿ ಹಿಟ್ಲರ್ ಮಾಡುತ್ತಿದ್ದದ್ದನ್ನು ಮೋದಿ, ಶಾ ಮಾಡುತ್ತಿದ್ದಾರೆ. ಇಡೀ ಮುಸ್ಲಿಂ ಸಮುದಾಯವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಅವಶ್ಯಕತೆ ಇರದ ತ್ರಿವಳಿ ತಲಾಕ್‍ ಅನ್ನು ಮುಸ್ಲಿಂ ಯುವಕರನ್ನು ಹೆದರಿಸಲು, ಇಡೀ ಸಮುದಾಯವನ್ನು ಗೊಂದಲದಲ್ಲೇ ಇಡಲು ಜಾರಿಗೊಳಿಸಿದರು. ಆದರೂ ಸುಮ್ಮನಿದ್ದೆವು. ಅಯೋಧ್ಯೆ ತೀರ್ಪು ಬಂದಾಗ ಅದರಲ್ಲಿ ಕೆಲ ಅನ್ಯಾಯಗಳಾದರೂ ನಾವು ಅದನ್ನು ಸ್ವಾಗತಿಸಿದೆವು, ಇದೀಗ ಎನ್‍ಆರ್‌ಸಿ, ಸಿಎಎ ತರಲು ಹೊರಟಿದ್ದಾರೆ' ಎಂದು ಆರೋಪಿಸಿದರು.

'ನಾನು ಹುಟ್ಟಿದಾಗ ಯಾವ ಆಸ್ಪತ್ರೆ, ಡಾಕ್ಟರ್ ಇರಲಿಲ್ಲ. ಸೂಲಗಿತ್ತಿಯರು ಹೆರಿಗೆ ಮಾಡಿಸಿಕೊಂಡಿದ್ದಾರೆ. ಅವರೇನು ಬರ್ತ್ ಸರ್ಟಿಫಿಕೆಟ್ ನೀಡಿಲ್ಲ. ಹಾಗಾದರೆ ನಾನು ಎಲ್ಲಿ ಹುಟ್ಟಿ ಬೆಳೆದೆ ಎಂದು ದಾಖಲಾತಿ ಕೊಡಬೇಕು. ನಾವು ಈ ದೇಶದ ಮೂಲ ನಿವಾಸಿಗಳು, ಸ್ವಾತಂತ್ರಕ್ಕಾಗಿ ಹೋರಾಡಿ ಪ್ರಾಣ ಕಳೆದುಕೊಂಡ ಗಾಂಧಿ ಕಡೆಯವರು, ಬ್ರಿಟಿಷರ ಜೊತೆ ಕೈ ಜೋಡಿಸಿದ ಬಿಜೆಪಿಯವರ ತರ ಅಲ್ಲ. ನರೇಂದ್ರ ಮೋದಿಯವರ ಈ ಕೆಲಸ ಬಹಳ ದಿನ ನಡೆಯುವುದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಬಸವರಾಜ ರಾಯರಡ್ಡಿ, ಅಮರೇಗೌಡ ಬಯ್ಯಾಪುರ, ಶಾಸಕ ರಾಘವೇಂದ್ರ ಹಿಟ್ನಾಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

'ಈ ರೀತಿ ರಾಜಕಾರಣಬಹಳ ದಿನ ಬದುಕಲ್ಲ'

'ದೇಶದ ಆರ್ಥಿಕ ಸ್ಥಿತಿ ಕುಸಿದು ನಿರುದ್ಯೋಗ, ಬೆಲೆ ಏರಿಕೆಯಂತಹ ಸಮಸ್ಯೆಗಳು ಹೆಚ್ಚಿರುವಾಗ ಮೋದಿ, ಅಮಿತ್ ಶಾ ಜನರ ದಿಕ್ಕು ತಪ್ಪಿಸಲು ಸಿಎಎ, ಎನ್‍ಆರ್‌ಸಿಯಂತಹ ಗೊಂದಲಕಾರಿ ಕಾನೂನು ಜಾರಿಗೊಳಿಸಲು ಮುಂದಾಗಿದ್ದಾರೆ. ಇಂತಹ ಕೆಲಸ ಮಾಡುತ್ತಿರುವ ಮೋದಿ, ಅಮಿತ್ ಶಾ ಬಹಳ ದಿನ ಅಧಿಕಾರದಲ್ಲಿ ಉಳಿಯಲ್ಲ, ಬಲದಾಗಿ ಜನಮಾನಸದಿಂದ ದೂರವಾಗುತ್ತಾರೆ. ಇವರಿಗೂ ಅದೇ ಪರಿಸ್ಥಿತಿ ಬರುತ್ತದೆ' ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.

'ಈ ದೇಶದ ಜನ ಬಹಳ ಬುದ್ದಿವಂತರಿದ್ದಾರೆ, ಭಾವನಾತ್ಮಕವಾಗಿ ರಾಜಕಾರಣ ಮಾಡುವವರಿಗೆ ಬಹಳ ದಿನ ಆಯುಷ್ಯ ಇರುವುದಿಲ್ಲ. ಇದನ್ನೆಲ್ಲ ಮರೆಮಾಚಲು ಆಗುವುದಿಲ್ಲ. ಈಗಾಗಲೇ ದೇಶದ ಬೇರೆ, ಬೇರೆ ರಾಜ್ಯದಲ್ಲಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಿದೆ. ಇದರಿಂದ ಅವರು ಅರಿತುಕೊಂಡು ಆಡಳಿತ ನಡೆಸಬೇಕು' ಎಂದು ಹೇಳಿದರು.

***

ಮೋದಿ, ಶಾ ಮಾಡುತ್ತಿರುವ ಅನಾಚಾರಗಳನ್ನು ಜನ ಎಷ್ಟು ದಿನ ಸಹಿಸುತ್ತಾರೆ. ಇವರಿಗೆ ಒದಗಿ ಬರುವ ಕಷ್ಟಕಾಲವನ್ನೂ ನಾವು, ನೀವೆಲ್ಲ ಕಣ್ಣಾರೆ ನೋಡುತ್ತೇವೆ
-ಶಿವರಾ ತಂಗಡಗಿ, ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT