ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಹಿಂಜರಿತ: ವರದಿ ಕೇಳಿದ ಸಚಿವ ಶೆಟ್ಟರ್

Last Updated 4 ಸೆಪ್ಟೆಂಬರ್ 2019, 18:48 IST
ಅಕ್ಷರ ಗಾತ್ರ

ಬೆಂಗಳೂರು: ‘ಆರ್ಥಿಕ ಹಿಂಜರಿತದಿಂದಾಗಿ ಕೈಗಾರಿಕೆಗಳು ಮುಚ್ಚಿವೆಯೇ? ಉದ್ಯೋಗ ನಷ್ಟವಾಗಿದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇರುವ ವರದಿಯನ್ನು ತಿಂಗಳೊಳಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಆರ್ಥಿಕ ಹಿಂಜರಿತ ಎಂಬುದು ನಮ್ಮ ರಾಜ್ಯ ಅಥವಾ ದೇಶಕ್ಕೆ ಸೀಮಿತವಾಗಿಲ್ಲ. ಇಡೀ ವಿಶ್ವದಲ್ಲೇ ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ ಅದು ಅಷ್ಟರಮಟ್ಟಿಗೆ ಪರಿಣಾಮ ಬೀರಿಲ್ಲ. ಮಾಧ್ಯಮಗಳಲ್ಲಿನ ವರದಿ ಗಮನಿಸಿದ ಬಳಿಕ ಹಿಂಜರಿತದಿಂದ ಸಮಸ್ಯೆಯಾಗಿದೆಯೇ ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದರು.

‘ಕೈಗಾರಿಕೆಗಳಿಗೆ ಉತ್ತೇಜನ, ಉದ್ಯಮ ಸ್ಥಾಪನೆ ಮಾಡಲು ಮುಂದೆ ಬರುವವರಿಗೆ ಪ್ರೋತ್ಸಾಹ ನೀಡಲು ಹಾಗೂ ಕರ್ನಾಟಕವನ್ನು ಉದ್ಯಮ ಸ್ನೇಹಿ ರಾಜ್ಯವಾಗಿಸುವ ಆಶಯದಿಂದ ‘ಕೈಗಾರಿಕಾ ನೀತಿ–2019’ ಅನ್ನು ಸದ್ಯವೇ ಜಾರಿಗೊಳಿಸಲಾಗುವುದು. ನೀತಿಯನ್ನು ಅಂತಿಮಗೊಳಿಸುವ ಮುನ್ನ ಉದ್ಯಮಿಗಳು, ಕೈಗಾರಿಕಾ ಕ್ಷೇತ್ರದ ವಿವಿಧ ಸಂಘಟನೆಗಳು ಹಾಗೂ ತಜ್ಞರ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಉದ್ಯಮಿಗಳು ಕೈಗಾರಿಕಾ ಸ್ಥಾಪನೆಗೆ ನಾಲ್ಕೈದು ಕಡೆ ಅಲೆಯುವ ಬದಲು ಒಂದೇ ಕಡೆ ಎಲ್ಲ ರೀತಿಯ ಪರವಾನಗಿ ದೊರಕಿಸಿಕೊಡುವ ನೂತನ ವ್ಯವಸ್ಥೆ ಜಾರಿಗೆ ತರಲಾಗುವುದು. ಏಕ ಗವಾಕ್ಷಿ ಎಂಬುದು ವಾಸ್ತವದಲ್ಲಿ ಜಾರಿಯಾಗುವಂತೆ ಮಾಡಲಾಗುವುದು. ಇದನ್ನು ಅನುಷ್ಠಾನಕ್ಕೆ ತರಲು ಸಂಬಂಧ ಪಟ್ಟ ಎಲ್ಲ ಇಲಾಖೆಯ ಮುಖ್ಯಸ್ಥರ ಸಭೆ ಕರೆಯಲು ಸೂಚಿಸಿದ್ದೇನೆ’ ಎಂದು ಹೇಳಿದರು.

ಜಿಮ್ ಮುಂದೂಡಿಕೆ: 2020ರ ಜನವರಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ(ಜಿಮ್‌) ಹಮ್ಮಿಕೊಳ್ಳಲು ಹಿಂದಿನ ಸರ್ಕಾರ ನಿರ್ಧರಿಸಿತ್ತು. ಅದೇ ಅವಧಿಯಲ್ಲಿ ನಡೆಸುವುದು ಕಷ್ಟ. 2–3 ತಿಂಗಳ ಕಾಲಾವಕಾಶ ತೆಗೆದುಕೊಂಡು ಜಿಮ್ ನಡೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT