ಶುಕ್ರವಾರ, ಡಿಸೆಂಬರ್ 6, 2019
20 °C
ಅಭಿವೃದ್ಧಿಯ ಮಂತ್ರ– ಕುದುರೆ ವ್ಯಾಪಾರದ ಟೀಕೆ

ಮಹಾಲಕ್ಷ್ಮಿ ಲೇಔಟ್‌ ಅಖಾಡದಲ್ಲೊಂದು ಸುತ್ತು| ಯಾರಿಗೆ ಒಲಿಯುವಳು ‘ಲಕ್ಷ್ಮೀ’?

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ತೆನೆ ಹೊತ್ತ ಮಹಿಳೆ’ಗೆ ಕೈಕೊಟ್ಟು ‘ಕಮಲ’ ಹಿಡಿದಿರುವ ಕೆ. ಗೋಪಾಲಯ್ಯ ಹ್ಯಾಟ್ರಿಕ್‌ ಗೆಲುವಿನ ಕನವರಿಕೆಯಲ್ಲಿದ್ದರೆ, ಎದುರಾಳಿಯನ್ನು ಚಿತ್‌ ಮಾಡಲು ಕೈ ಪಾಳಯದ ಹುರಿಯಾಳು ಎಂ.ಶಿವರಾಜು ಸಮರ ಸನ್ನಾಹ ಮಾಡಿಕೊಂಡಿದ್ದಾರೆ.

ಇನ್ನೊಂದೆಡೆ, ಜೆಡಿಎಸ್‌ ಅಭ್ಯರ್ಥಿ ಡಾ.ಗಿರೀಶ್‌ ಕೆ.ನಾಶಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ನಾಮಬಲದಿಂದಲೇ ಗೆಲುವಿನ ದಡ ಸೇರುವ ತವಕದಲ್ಲಿದ್ದಾರೆ. ತ್ರಿಕೋನ ಸ್ಪರ್ಧೆ ಇರುವ ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದು ಕುತೂಹಲ.

2013 ಹಾಗೂ 2018ರ ಚುನಾವಣೆಗಳಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗೋಪಾಲಯ್ಯ ಗೆಲುವಿನ ನಗೆ ಬೀರಿದ್ದರು. 2013ರಲ್ಲಿ ಗೋಪಾಲಯ್ಯ ಗೆಲುವಿನ ದಡ ಮುಟ್ಟಲು ಸಹಕರಿಸಿದವರು ಕಾಂಗ್ರೆಸ್‌ ಪಾಲಿಕೆ ಸದಸ್ಯರಾದ ಎಂ.ನಾಗರಾಜ್‌ ಹಾಗೂ ಕೇಶವಮೂರ್ತಿ. ಆಗ ‘ಕೈ’ ಹುರಿಯಾಳು ನೆ.ಲ. ನರೇಂದ್ರಬಾಬು ಮೇಲಿನ ಸಿಟ್ಟಿನ ಕಾರಣಕ್ಕೆ ಅವರಿಬ್ಬರೂ ಎದುರಾಳಿಯೊಂದಿಗೆ ಕೈಜೋಡಿಸಿದ್ದರು.

2015ರ ಪಾಲಿಕೆ ಚುನಾವಣೆಯಲ್ಲಿ ಎಂ.ನಾಗರಾಜ್‌ ಅವರಿಗೂ ಸೋಲಾಯಿತು. ಕೆಲವೇ ತಿಂಗಳಲ್ಲಿ ಅವರು ಬಿಜೆ‍ಪಿ ಪಾಳಯಕ್ಕೆ ಜಿಗಿದರು. ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ಮೇಲೆ ಕೋಪ ಮಾಡಿಕೊಂಡು ನರೇಂದ್ರಬಾಬು 2018ರ ಚುನಾವಣೆ ಸಂದರ್ಭದಲ್ಲಿ ಬಿಜೆ‍ಪಿಗೆ ಸೇರ್ಪಡೆಯಾಗಿ ಅಭ್ಯರ್ಥಿಯಾದರು. ಈ ಚುನಾವಣೆಯಲ್ಲಿ ಗೋಪಾಲಯ್ಯ 41 ಸಾವಿರ ಮತಗಳ ಭಾರಿ ಅಂತರದಿಂದ ಜಯಭೇರಿ ಬಾರಿಸಿ ದರು.ಗೋ‍ಪಾಲಯ್ಯ ಬಿಜೆಪಿ ಸೇರ್ಪಡೆಗೆ ‘ಹಳೆಯ ಮಿತ್ರ’ ಹಾಗೂ ‘ಹಳೆಯ ಶತ್ರು’ಗಳಿಬ್ಬರೂ ಆರಂಭದಲ್ಲಿ ಪ್ರತಿರೋಧ ತೋರಿದ್ದರು. ಈ ವಿರೋಧಕ್ಕೆ ಟಿಕೆಟ್‌ ಆಕಾಂಕ್ಷಿಯೂ ಆಗಿದ್ದ ಎಸ್.ಹರೀಶ್‌ ಧ್ವನಿಗೂಡಿಸಿದ್ದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮನವೊಲಿಕೆಯ ಬಳಿಕ ಬಂಡಾಯ ತಣ್ಣಗಾಗಿದ್ದು, ಮೂವರೂ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿಂದೆ ಗೋಪಾಲಯ್ಯ ಬೆಂಬಲಿಗರಿಂದ ಏಟು ತಿಂದ ಬಿಜೆಪಿ ಕಾರ್ಯಕರ್ತರು ಆ ನೋವನ್ನೂ ಇನ್ನೂ ಮರೆತಿಲ್ಲ. ಅವರು ಒಳ ಏಟು ನೀಡಿದರೆ ಗೋ‍ಪಾಲಯ್ಯ ಗೆಲುವಿನ ಹಾದಿ ದುರ್ಗಮವಾಗಲಿದೆ ಎಂಬ ಚರ್ಚೆಯೂ ಕ್ಷೇತ್ರದಲ್ಲಿ ನಡೆದಿದೆ.

ಕ್ಷೇತ್ರದಲ್ಲಿರುವ ಏಳು ಪಾಲಿಕೆ ಸದಸ್ಯರಲ್ಲಿ ನಾಲ್ವರು ಜೆಡಿಎಸ್‌ನಿಂದ, ಇಬ್ಬರು ಕಾಂಗ್ರೆಸ್‌ನಿಂದ ಹಾಗೂ ಒಬ್ಬರು ಬಿಜೆಪಿಯಿಂದ ಚುನಾಯಿತರಾದವರು. ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್‌ನ ಇಬ್ಬರು ಪಾಲಿಕೆ ಸದಸ್ಯರು ಗೋಪಾಲಯ್ಯ ಜೊತೆ ಗುರುತಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಗೋಪಾಲಯ್ಯ ಪತ್ನಿ ಎಸ್‌.ಪಿ.ಹೇಮಲತಾ. ಗೋಪಾಲಯ್ಯ ಅವರನ್ನು ಸೋಲಿಸಬೇಕು ಎಂದು ಪಣ ತೊಟ್ಟಿರುವ ಜೆಡಿಎಸ್‌ ನಾಯಕರು ಅಳೆದೂ ತೂಗಿ ಗಿರೀಶ್‌ ನಾಶಿ ಅವರಿಗೆ ಮಣೆ ಹಾಕಿದ್ದಾರೆ. ನಾಶಿ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪುವುದು ಖಚಿತವಾದ ಕೂಡಲೇ ಜೆಡಿಎಸ್‌ ಸೇರಿದರು. 2016ರ ರಾಜ್ಯಸಭಾ ಚುನಾ ವಣೆ ಸಂದರ್ಭದಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ ಜೆಡಿಎಸ್‌ನ ಏಳು ಶಾಸಕರು ‘ಕೈ’ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು. ಅವರನ್ನೆಲ್ಲ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಬಳಿಕ ಗೋಪಾಲಯ್ಯ ಅಮಾನತನ್ನು ವಾಪಸ್‌ ಪಡೆಯಲಾಗಿತ್ತು. ಮೈತ್ರಿ ಸರ್ಕಾರವು ಕ್ಷೇತ್ರಕ್ಕೆ ₹450 ಕೋಟಿ ಅನುದಾನ ನೀಡಿತ್ತು. ‘ಇಷ್ಟೆಲ್ಲ ಅನುದಾನ ಕೊಟ್ಟರೂ ಗೋಪಾಲಯ್ಯ 2 ಸಲ ಬೆನ್ನಿಗೆ ಚೂರಿ ಹಾಕಿದರು’ ಎಂದು ಜೆಡಿಎಸ್ ನಾಯಕರು ಪ್ರಚಾರ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು