ಮಣ್ಣಿನಲ್ಲಿ ಮುಚ್ಚಿದ ಜಲಮೂಲ

7
ಸುತ್ತಲೂ ಕೆಸರು, ಕುಡಿಯಲು ಹನಿ ನೀರಿಲ್ಲ

ಮಣ್ಣಿನಲ್ಲಿ ಮುಚ್ಚಿದ ಜಲಮೂಲ

Published:
Updated:
Deccan Herald

ಮಡಿಕೇರಿ: ಪ್ರವಾಹ, ಭೂಕುಸಿತದಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯು ಈಗ ಮತ್ತೊಂದು ರೀತಿಯ ಸಮಸ್ಯೆಗೆ ಸಿಲುಕಿದೆ. ವಾರದಿಂದ ಬಿಸಿಲು ಕಾಣಿಸುತ್ತಿದ್ದು ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಇನ್ನೊಂದೆಡೆ ಮನೆಗಳತ್ತ ಮುಖಮಾಡಿರುವ ಸಂತ್ರಸ್ತರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ.

‌ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದ 32 ಗ್ರಾಮಗಳಲ್ಲಿ ಹೆಬ್ಬಟ್ಟಗೇರಿ, ದೇವಸ್ತೂರು, ಕಾಲೂರು, ಗಾಳಿಬೀಡು, ಮಾದಾಪುರ, ಮೊಕ್ಕೋಡ್ಲು, ಮಾಂದಲ್‌ಪಟ್ಟಿ ಗ್ರಾಮದ ಸುತ್ತಲೂ ಕೆಸರು ಮಣ್ಣು ಕಾಣಿಸುತ್ತಿದ್ದು, ಕುಡಿಯಲು ನೀರು ಸಿಗುತ್ತಿಲ್ಲ. ದೇವಸ್ತೂರು ಗ್ರಾಮದ ಹೊಳೆ ಈಗಲೂ ಕೆಂಪಾಗಿಯೇ ಹರಿಯುತ್ತಿದೆ. ವಾಡಿಕೆಗಿಂತ ಹೆಚ್ಚು ಮಳೆ ಸುರಿದರೂ ಭೂಕುಸಿತದ ಪರಿಣಾಮವಾಗಿ ಜಲಮೂಲಗಳು ಮಣ್ಣಿನಲ್ಲಿ ಮುಚ್ಚಿ ಹೋಗಿವೆ.

ತೋಡು, ನದಿಗಳಲ್ಲಿ ಕೆಸರು ಮಿಶ್ರಿತ ನೀರು ನಿಂತಿದ್ದು ಬಳಕೆಗೆ ಯೋಗ್ಯವಾಗಿಲ್ಲ. ಗ್ರಾಮಕ್ಕೆ ತೆರಳಿರುವ ಜನರು ಕುಡಿಯುವ ನೀರು ಸಿಗದೇ ಪರದಾಡುತ್ತಿದ್ದಾರೆ. ಹಲವಾರು ಗ್ರಾಮಗಳಿಗೆಒಂದು ವಾರದಿಂದ ಟ್ಯಾಂಕರ್‌ ಮೂಲಕವೇ ನೀರು ಪೂರೈಕೆಯಾಗುತ್ತಿದೆ.

ಬಾವಿಗಳು ಕಣ್ಮರೆ: ಕೊಡಗಿನ ಬಹುತೇಕ ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ಹೊಳೆ, ನದಿ ಹಾಗೂ ಬಾವಿಯ ನೈಸರ್ಗಿಕ ನೀರನ್ನೇ ಆಶ್ರಯಿಸಿದ್ದರು. ಪ್ರತಿ ಮನೆಯ ಎದುರೂ ಪುಟ್ಟ ಬಾವಿ ಇರುತ್ತಿತ್ತು. ಬೆಟ್ಟದ ಮೇಲಿನ ಜರಿಗಳಿಗೂ ಪೈಪ್‌ ಅಳವಡಿಸಿ ಆ ನೀರು ಬಳಕೆ ಮಾಡುತ್ತಿದ್ದರು. ಆದರೆ, ಭೂಕುಸಿತದಿಂದ ಬಾವಿಗಳು ಕಣ್ಮರೆಯಾಗಿವೆ. ನೂರಾರು ವರ್ಷಗಳಿಂದ ಧುಮ್ಮಿಕ್ಕುತ್ತಿದ್ದ ಸಣ್ಣಪುಟ್ಟ ಜಲಪಾತಗಳು ಹಾಗೂ ತೋಡುಗಳು ಪಥ ಬದಲಿಸಿವೆ. ಹತ್ತಾರು ವರ್ಷಗಳಿಂದ ಮನೆಯ ಎದುರೇ ಆಸರೆ ನೀಡಿದ್ದ ಜಲಮೂಲಗಳು ಕಣ್ಮರೆಯಾಗಿವೆ.

32 ಗ್ರಾಮಗಳ 100ಕ್ಕೂ ಹೆಚ್ಚು ಬಾವಿಗಳಲ್ಲಿ ಮಣ್ಣು ತುಂಬಿದೆ. ಭೂಕುಸಿತದ ರಭಸಕ್ಕೆ 10ಕ್ಕೂ ಹೆಚ್ಚು ಕೆರೆಗಳು ಒಡೆದಿವೆ. ಅಂತರ್ಜಲದ ನೀರನ್ನೇ ಆಶ್ರಯಿಸಿದ್ದ ಜನರು ಬೇಸಿಗೆಯಲ್ಲಿ ಹೇಗಪ್ಪ ಬದುಕು ಸಾಗಿಸುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ಹೆಬ್ಬಟ್ಟಗೇರಿ ಶಾಲೆಮನೆ ಪೈಸಾರಿ ನಿವಾಸಿಗಳು ಬೆಟ್ಟದ ಮೇಲಿದ್ದ ಕೆರೆಗೆ ಪೈಪ್‌ ಅಳವಡಿಸಿ ನೀರು ಬಳಸುತ್ತಿದ್ದರು. ಬೆಟ್ಟದ ಮಣ್ಣು, ಪೈಪ್‌ ಸಮೇತ ಕೊಚ್ಚಿಕೊಂಡು ಹೋಗಿದೆ. ಗ್ರಾಮಸ್ಥರು ತೋಡಿನ ನೀರನ್ನೇ ಬಟ್ಟೆ,ಪಾತ್ರೆ ತೊಳೆಯಲು ಬಳಸುತ್ತಿದ್ದಾರೆ. ಅದೂ ಇನ್ನೊಂದು ತಿಂಗಳಲ್ಲಿ ಬತ್ತಿ ಹೋಗಲಿದೆ ಎಂಬ ಆತಂಕ ಗ್ರಾಮಸ್ಥರದ್ದು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !