ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಯ ಹೊಸ್ತಿಲಲ್ಲಿ ಕರ್ನಾಟಕ

ವಿಜಯ್ ಹಜಾರೆ ಕ್ರಿಕೆಟ್ ಏಕದಿನ ಟೂರ್ನಿ: ಮಹಾರಾಷ್ಟ್ರ ತಂಡಕ್ಕೆ ನಿರಾಸೆ; ಪ್ರಸಿದ್ಧ್, ಗೌತಮ್ ಮಿಂಚು
Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಈ ಸಲದ ದೇಶಿ ಕ್ರಿಕೆಟ್  ಋತುವಿನುದ್ದಕ್ಕೂ ಅನುಭವಿಸಿದ್ದ ನಿರಾಸೆಯನ್ನು ಮರೆತು ಸಂಭ್ರಮಿಸುವ ಕಾಲ ಕರ್ನಾಟಕ ತಂಡಕ್ಕೆ ಈಗ ಕೂಡಿ ಬಂದಿದೆ.

ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆಲ್ಲುವ ಸುವರ್ಣಾವಕಾಶವನ್ನು ಕರುಣ್ ನಾಯರ್ ನಾಯಕತ್ವದ ಬಳಗವು ತನ್ನದಾಗಿಸಿಕೊಂಡಿದೆ. ಶನಿವಾರ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಸೆಮಿಫೈನಲ್‌ನಲ್ಲಿ 9 ವಿಕೆಟ್‌ಗಳಿಂದ ಮಹಾರಾಷ್ಟ್ರ ತಂಡವನ್ನು ಹಣಿದ ಕರ್ನಾಟಕ ಫೈನಲ್‌ ಪ್ರವೇಶಿಸಿದೆ. 27ರಂದು ಆಂತಿಮ ಹಣಾಹಣಿ ನಡೆಯಲಿದೆ. ಭಾನುವಾರ  ಆಂಧ್ರಪ್ರದೇಶ ಮತ್ತು ಸೌರಾಷ್ಟ್ರ ನಡುವಣ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ತಂಡವು ಕರ್ನಾಟಕವನ್ನು ಎದುರಿಸಲಿದೆ.  ಟೂರ್ನಿಯ ಇತಿಹಾಸದಲ್ಲಿ ಕರ್ನಾಟಕ ತಂಡವು ಮೂರನೇ ಸಲ ಫೈನಲ್ ತಲುಪಿದೆ.

ನಾಲ್ಕರ ಘಟ್ಟದ ಪಂದ್ಯದಲ್ಲಿ ಟಾಸ್ ಗೆದ್ದ ಮಹಾರಾಷ್ಟ್ರ ತಂಡವು ಬ್ಯಾಟಿಂಗ್ ಮಾಡಿತು. ಕರ್ನಾಟಕ ತಂಡದ ವೇಗಿ ಪ್ರಸಿದ್ಧ ಕೃಷ್ಣ  (26ಕ್ಕೆ2) ಮತ್ತು ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ (26ಕ್ಕೆ3) ಅವರ ದಾಳಿಯ ಎದುರು ಮಹಾರಾಷ್ಟ್ರ ತಂಡವು ಕೇವಲ 160 ರನ್‌ಗಳಿಗೆ ಕುಸಿಯಿತು. ‘ರನ್ ಯಂತ್ರ’ ಮಯಂಕ್ ಅಗರವಾಲ್ (81; 86ಎ, 8ಬೌಂ,1ಸಿ) ಮತ್ತು ಕರುಣ್ ನಾಯರ್ (ಔಟಾಗದೆ 70; 90ಎ, 10ಬೌಂ) ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಕರ್ನಾಟಕ ತಂಡವು 30.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 164 ರನ್‌ ಗಳಿಸಿ ಜಯಶಾಲಿಯಾಯಿತು

ಲೀಗ್ ಹಂತದಲ್ಲಿ ‘ಎ’ ಗುಂಪಿ ನಿಂದ ಕ್ವಾರ್ಟರ್‌ಫೈನಲ್ ಪ್ರವೇಶಿ ಸಿದ್ದ ಕರ್ನಾಟಕ ತಂಡವು ಹೈದ ರಾಬಾದ್ ಎದುರು ಗೆದ್ದು ನಾಲ್ಕರ ಘಟ್ಟ ಪ್ರವೇಶಿಸಿತ್ತು. ಹೋದ ಡಿಸೆಂಬರ್‌ನಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವು ಸೆಮಿಫೈನಲ್‌ನಲ್ಲಿ ಮತ್ತು ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿಯ ಸೂಪರ್ ಲೀಗ್‌ನಲ್ಲಿ ಸೋತಿತ್ತು.

ಗುಂಪು ಹಂತದಲ್ಲಿ ಮಿಂಚಿದ್ದ ಪ್ರಸಿದ್ಧ ಕೃಷ್ಣ ಕೋಟ್ಲಾ ಅಂಗಳದಲ್ಲಿಯೂ ತಮ್ಮ ಸ್ವಿಂಗ್ ಅಸ್ತ್ರಗಳನ್ನು ನಿಖರವಾಗಿ ಪ್ರಯೋಗಿಸಿದರು. ಎಂಟರ ಘಟ್ಟದಲ್ಲಿ ಬಲಿಷ್ಠ ಮುಂಬೈ ಎದುರು ಜಯಿಸಿದ್ದ ಮಹಾರಾಷ್ಟ್ರ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ಪ್ರಸಿದ್ಧ ಆಘಾತ ನೀಡಿದರು. ಆರಂ ಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ ವಾಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.ಆದರೆ ಇನ್ನೊಂದು ಬದಿಯಲ್ಲಿದ್ದ ಶ್ರೀಕಾಂತ್ ಮುಂಢೆ (50; 77ಎ, 5ಬೌಂ) ದಿಟ್ಟತನದಿಂದ ಬ್ಯಾಟ್ ಬೀಸಿದರು. ಅವರು ನಾಯಕ ರಾಹುಲ್ ತ್ರಿಪಾಠಿ (16 ರನ್) ಜೊತೆಗೆ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 58 ರನ್ ಸೇರಿಸಿದರು.

ರಾಹುಲ್ ಔಟಾದ ನಂತರ ಶ್ರೀಕಾಂತ್ ಅವರು ಅಂಕಿತ್ ಭಾವ್ನೆ (18 ರನ್) ಜೊತೆಗೆ ಮೂರನೇ ವಿಕೆಟ್‌ಗೆ 36 ರನ್‌ ಸೇರಿಸಿದರು. ಆಗ ರೋನಿತ್ ಮೋರೆ ಎಸೆತವನ್ನು ಹೊಡೆದು ಶ್ರೇಯಸ್ ಗೋಪಾಲ್‌ಗೆ ಕ್ಯಾಚಿತ್ತರು. ನಂತರದ ಓವರ್‌ನಲ್ಲಿ ಅಂಕಿತ್ ರನ್‌ಔಟ್ ಆದರು. ನಂತರ ನೌಷಾದ್ ಶೇಖ್ (42 ರನ್) ಮಾತ್ರ ಮಿಂಚಿದರು. ಆದರೆ ಅವರು 45ನೇ ಓವರ್‌ನಲ್ಲಿ ಪ್ರಸಿದ್ಧ ಕೃಷ್ಣ  ಓವರ್‌ನಲ್ಲಿ ಔಟಾದರು. ಉಳಿದವರಿಗೆ ಎರಡಂಕಿ ಮೊತ್ತ ಗಳಿಸಲು ಗೌತಮ್ ಮತ್ತು ಟಿ. ಪ್ರದೀಪ್ ಆವಕಾಶ ಕೊಡಲಿಲ್ಲ.

ನಂತರ ಅಲ್ಪಮೊತ್ತದ ಗುರಿ ಬೆನ್ನತ್ತಿದ ಕರ್ನಾಟಕ ತಂಡದ ಆರಂಭಿಕ ಜೋಡಿಯು ಎದುರಾಳಿ ಬೌಲರ್‌ಗಳ ಬೆವರಿಳಿಸಿತು. ಟೂರ್ನಿಯಲ್ಲಿ ಮೂರು ಶತಕ ಮತ್ತು ಎರಡು ಶತಕಗಳನ್ನು ದಾಖಲಿಸಿದ್ದ ಮಯಂಕ್ ಇಲ್ಲಿಯೂ ಶತಕದ ಸನಿಹ ಸಾಗಿದ್ದರು.81 ರನ್ ಗಳಿಸಿದ್ದ ಅವರು 29ನೇ ಓವರ್‌ನಲ್ಲಿ ಸಿ.ಎಸ್. ಬಚ್ಚಾವ್  ಓವರ್‌ನಲ್ಲಿ ಔಟಾದರು. ಮಯಂಕ್   ಈ ಟೂರ್ನಿಯಲ್ಲಿ  ಒಟ್ಟು 633 ರನ್‌ಗಳನ್ನು ಗಳಿಸಿದ್ದಾರೆ. ನಂತರ ಕರುಣ್ ಮತ್ತು ಆರ್. ಸಮರ್ಥ್ (ಔಟಾಗದೆ 3) ತಂಡವನ್ನು ಗೆಲುವಿನ ದಡ ಸೇರಿಸಿದರು

ಸಂಕ್ಷಿಪ್ತ ಸ್ಕೋರ್‌: ಮಹಾರಾಷ್ಟ್ರ: 44.3 ಓವರ್‌ಗಳಲ್ಲಿ 160 (ಶ್ರೀಕಾಂತ್‌ ಮುಂಢೆ 50, ರಾಹುಲ್‌ ತ್ರಿಪಾಠಿ 16, ಅಂಕಿತ್‌ ಭವಾನೆ 18, ನೌಷದ್‌ ಶೇಖ್‌ 42, ಎಂ.ಪ್ರಸಿದ್ಧ ಕೃಷ್ಣ 26ಕ್ಕೆ2, ಟಿ.ಪ್ರದೀಪ 38ಕ್ಕೆ1, ರೋನಿತ್‌ ಮೋರೆ 24ಕ್ಕೆ1, ಕೆ.ಗೌತಮ್‌ 26ಕ್ಕೆ3, ಶ್ರೇಯಸ್‌ ಗೋಪಾಲ್‌ 26ಕ್ಕೆ1). ಕರ್ನಾಟಕ: 30.3 ಓವರ್‌ಗಳಲ್ಲಿ 1 ವಿಕೆಟ್‌ಗೆ 164 (ಮಯಂಕ್‌ ಅಗರವಾಲ್‌ 81, ಕರುಣ್‌ ನಾಯರ್‌ ಔಟಾಗದೆ 70, ಆರ್‌.ಸಮರ್ಥ್‌ ಔಟಾಗದೆ 3; ಸತ್ಯಜೀತ್‌ ಬಚ್ಚಾವ್‌ 32ಕ್ಕೆ1).ಫಲಿತಾಂಶ: ಕರ್ನಾಟಕಕ್ಕೆ 9 ವಿಕೆಟ್‌ ಜಯ ಹಾಗೂ ಫೈನಲ್‌ ಪ್ರವೇಶ.

ಮಯಂಕ್ ದಾಖಲೆ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಶ್ರೇಯಕ್ಕೆ ಕರ್ನಾಟಕದ ಮಯಂಕ್ ಆಗರವಾಲ್ ಪಾತ್ರರಾಗಿದ್ದಾರೆ.

ಅವರು ಶನಿವಾರ ಮಹಾರಾಷ್ಟ್ರ ಎದುರಿನ ಪಂದ್ಯದಲ್ಲಿ 81 ರನ್‌ ಗಳಿಸಿದರು. ಅದರೊಂದಿಗೆ ಟೂರ್ನಿಯಲ್ಲಿ ಅವರು ಒಟ್ಟು 633 ರನ್‌ಗಳನ್ನು ಗಳಿಸಿದ್ದಾರೆ. 2016–17ರಲ್ಲಿ ತಮಿಳುನಾಡಿನ ದಿನೇಶ್ ಕಾರ್ತಿಕ್ ಒಂಬತ್ತು ಪಂದ್ಯಗಳಲ್ಲಿ 607 ರನ್‌ ಗಳಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಮಯಂಕ್ ಈ ಟೂರ್ನಿಯಲ್ಲಿ ಒಟ್ಟು ಏಳು ಪಂದ್ಯಗಳಲ್ಲಿ ಆಡಿದ್ದಾರೆ. ಅದರಲ್ಲಿ ಮೂರು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ.

2000 ರನ್ ಗಳಿಕೆ

2017–18ನೇ ಸಾಲಿನ ದೇಶಿ ಕ್ರಿಕೆಟ್‌ನಲ್ಲಿ ಮಯಂಕ್ ಒಟ್ಟು ಎರಡು ಸಾವಿರ ರನ್‌ಗಳನ್ನು ಗಳಿಸಿದ್ದಾರೆ.  ರಣಜಿ ಟ್ರೋಫಿ ಟೂರ್ನಿಯಲ್ಲಿ 1160 ಮತ್ತು ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಟೂರ್ನಿಯಲ್ಲಿ 258 ರನ್‌ಗಳನ್ನು ಅವರು ಗಳಿಸಿದ್ದರು.

ಮೂರನೇ ಬಾರಿ ಫೈನಲ್‌ಗೆ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವು ಮೂರನೇ ಬಾರಿ  ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಟೂರ್ನಿಯು 2007–08ನೇ ಸಾಲಿನಲ್ಲಿ ಆರಂಭವಾಗಿತ್ತು. ಕರ್ನಾಟಕ 2013–14 ಮತ್ತು 2014–15ನೇ ಸಾಲಿನಲ್ಲಿ ಚಾಂಪಿಯನ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT