ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕುಟುಂಬದ ನಾಲ್ವರಿಗೆ 20 ಎಕರೆ ಸರ್ಕಾರಿ ಭೂಮಿ

ಲೋಕಾಯುಕ್ತರು ಪತ್ರ ಬರೆದು 6 ವರ್ಷಗಳಾದರೂ ಮುಗಿಯದ ತನಿಖೆ
ಅಕ್ಷರ ಗಾತ್ರ

ಚಿತ್ತಾಪುರ: ತಾಲ್ಲೂಕಿನ ಇಟಗಾ ಗ್ರಾಮದಲ್ಲಿನ ಸರ್ಕಾರಿ ಸರ್ವೆ ನಂ.152 ರಲ್ಲಿನ 20 ಎಕರೆ 23 ಗುಂಟೆ ಭೂಮಿಯನ್ನು ಮೊಗಲಾ ಗ್ರಾಮದ ಒಂದೇ ಕುಟುಂಬದ ನಾಲ್ವರು ಕಬಳಿಸಿರುವ, ಅವರ ಹೆಸರುಗಳನ್ನು ಪಹಣಿ ಪತ್ರಿಕೆಯಲ್ಲಿ ಸೇರ್ಪಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣದ ವಿವರ: ಇಟಗಾ ಗ್ರಾಮದಲ್ಲಿನ ಸರ್ಕಾರಿ ಸರ್ವೆ ನಂ.152/1 ರಲ್ಲಿ 15 ಎಕರೆ 26 ಗುಂಟೆ ಭೂಮಿ ಮೊಗಲಾ ಗ್ರಾಮದ ಒಂದೇ ಕುಟುಂಬದ ಕರಬಸಮ್ಮ ಯಮನಪ್ಪ, ಸರುಬಾಯಿ ಮಲ್ಲಣ್ಣಾ, ನಾಗಪ್ಪ ಮಲ್ಲಪ್ಪ ಅವರು ತಲಾ 4 ಎಕರೆ 35 ಗುಂಟೆ ಹಾಗೂ ಸರ್ವೆ ನಂ.152/2 ರಲ್ಲಿನ 5 ಎಕರೆ 28 ಗುಂಟೆ ಭೂಮಿಯನ್ನು ಮಲ್ಲಣ್ಣಾ ಯಮನಪ್ಪ ಅವರು ಕಬಳಿಸಿ ಪಹಣಿ ಪತ್ರಿಕೆಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಿದ್ದಾರೆ. ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಮೊಗಲಾ ಗ್ರಾಮದ ಶರಣು ತೊನಸನಳ್ಳಿ ಅವರು 2014 ರಲ್ಲಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ತನಿಖೆಯಿಂದ ದೃಢಪಟ್ಟ ಪ್ರಕರಣ: ಡಿ.5,2014 ರಂದು ಲೋಕಾಯುಕ್ತರು ತಹಶೀಲ್ದಾರ್ ಅವರಿಗೆ ಪತ್ರ ಬರೆದು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಅಂದಿನ ತಹಶೀಲ್ದಾರ್ ತನಿಖೆ ಕೈಗೆತ್ತಿಕೊಂಡು 1955-56ನೇ ಸಾಲಿನಿಂದ 1981-82ನೇ ಸಾಲಿನ ಭೂ ದಾಖಲೆ ಪರಿಶೀಲನೆ ನಡೆಸಿ ಖಾರಿಜ ಖಾತಾ ಸರ್ಕಾರಿ ಎಂದು ಪಹಣಿಯಲ್ಲಿ ನಮೂದಾಗಿದೆ ಎಂದು 2015 ಮಾ.1ರಂದು ಸೇಡಂ ಉಪ ವಿಭಾಗಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

1983-84ರಿಂದ 1993- 94ನೇ ಸಾಲಿನಲ್ಲಿ ಸರ್ಕಾರಿ ಜಮೀನು ಎಂದು ಪಹಣಿಯಲ್ಲಿ ನಮೂದಾಗಿದೆ. 1993-94ನೇ ಸಾಲಿನಲ್ಲಿ ಪಂಚಸಾಲಾ ಪಹಣಿ ಬರೆಯುವಾಗ ಆದೇಶವಿಲ್ಲದೆ ಸರ್ವೆ ನಂ.152/1 ರಲ್ಲಿ ಕರಬಸಮ್ಮ ಯಮನಪ್ಪ, ಸರುಬಾಯಿ ಮಲ್ಲಣ್ಣ, ನಾಗಪ್ಪ ಮಲ್ಲಪ್ಪ ಎಂಬುವರ ಹೆಸರಿಗೆ ತಲಾ 4 ಎಕರೆ 35 ಗುಂಟೆ ಭೂಮಿ, ಹಾಗೂ ಸರ್ವೆ ನಂ.152/2 ರಲ್ಲಿ 5 ಎಕರೆ 28 ಗುಂಟೆ ಭೂಮಿ ಮಲ್ಲಣ್ಣ ಯಮನಪ್ಪ ಅವರ ಹೆಸರು ಪಹಣಿಯಲ್ಲಿ ನಮೂದು ಮಾಡಲಾಗಿದೆ ಎಂದು ತಹಶೀಲ್ದಾರ್ ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಅನಧಿಕೃತವಾಗಿ ಸರ್ಕಾರಿ ಭೂಮಿ ವರ್ಗಾವಣೆ, ಆದೇಶವಿಲ್ಲದೆ ಪಹಣಿ ಪತ್ರಿಕೆಯಲ್ಲಿ ಹೆಸರು ಸೇರ್ಪಡೆ ಮಾಡಿರುವ ಹಾಗೂ ಹೆಸರು ಸೇರ್ಪಡೆ ಮಾಡಿಕೊಂಡಿರುವವರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿ ಕಾಯ್ದೆ ಕಲಂ 192(ಎ), 192 (ಬಿ) ಮತ್ತು 192 (ಡಿ) ಪ್ರಕಾರ ಭಾರತೀಯ ದಂಡ ಸಂಹಿತೆಯಡಿ ಕ್ರಿಮಿನಲ್ ಕೇಸು ದಾಖಲಿಸಲು ಹಾಗೂ ಸದರಿ ಭೂಮಿಯನ್ನು ಕರ್ನಾಟಕ ಸರ್ಕಾರದ್ದು ಎಂದು ನಮೂದು ಮಾಡಲು ಆದೇಶ ನೀಡಬೇಕು ಎಂದು ತಹಶೀಲ್ದಾರ್ ಅವರು ವರದಿಯಲ್ಲಿ ಕೋರಿದ್ದಾರೆ.

ಮುಗಿಯದ ತನಿಖೆ: ಪ್ರಕರಣದ ತನಿಖೆ ಆರಂಭವಾಗಿ ಆರು ವರ್ಷಗಳಾದರೂ ಮುಗಿಯುತ್ತಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ‘ಸರ್ಕಾರಿ ಭೂಮಿ ಕಬಳಿಸಿದ್ದಾರೆ. ಪೊಲೀಸ್ ಪ್ರಕರಣ ದಾಖಲಿಸಲು ಆದೇಶ ಮಾಡಬೇಕು’ ಎಂದು 2015ರಲ್ಲೇ ಭೂ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡಿದ ಅಂದಿನ ತಹಶೀಲ್ದಾರ್ ಕೋರಿದ್ದಾರೆ. ಆದರೂ ಕೂಡ ಪುನಃ ತಹಶೀಲ್ದಾರ್ ಕಚೇರಿಯಲ್ಲಿ ಪ್ರಕರಣದ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಲೋಕಾಯುಕ್ತರೇ ಬರೆದ ಪತ್ರದ ಗತಿ ಹೀಗಾದರೆ ಜನಸಾಮಾನ್ಯರ
ಸಮಸ್ಯೆಗಳ ಗತಿಯೇನು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT