ಬುಧವಾರ, ನವೆಂಬರ್ 13, 2019
23 °C
ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸುವ ಸಾಧ್ಯತೆ

ಲಕ್ಷ್ಮಿ ಹೆಬ್ಬಾಳಕರಗೂ ಇ.ಡಿ ಕುಣಿಕೆ?

Published:
Updated:

ಬೆಂಗಳೂರು: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಕೊರಳಿಗೂ ಜಾರಿ ನಿರ್ದೇಶನಾಲಯದ (ಇ.ಡಿ) ಕುಣಿಕೆ ಬೀಳುವ ಸಾಧ್ಯತೆಯಿದೆ. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್‌ಎ) ಪ್ರಕರಣ ದಾಖಲಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಲಕ್ಷ್ಮಿ ಹೆಬ್ಬಾಳಕರ ತಮ್ಮ ಸಹೋದರ ಸಿ.ಬಿ. ಹಟ್ಟಿಹೊಳ್ಳಿ ಮತ್ತಿತರರ ಜೊತೆಗೂಡಿ ಬೆಳಗಾವಿ ಜಿಲ್ಲೆ ಸವದತ್ತಿ ಬಳಿ ಸ್ಥಾಪಿಸಿರುವ ಹರ್ಷ ಸಕ್ಕರೆ ಕಾರ್ಖಾನೆಗೆ ಹೂಡಿರುವ ಬಂಡವಾಳ ಕುರಿತು ಇ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ₹ 300 ಕೋಟಿಗೂ ಅಧಿಕ ಬಂಡವಾಳದಿಂದ ಕಾರ್ಖಾನೆ ಸ್ಥಾಪಿಸಲಾಗಿದ್ದು, ಅಪೆಕ್ಸ್‌ ಬ್ಯಾಂಕ್‌ ಹಾಗೂ ವಿವಿಧ ಜಿಲ್ಲಾ ಸಹಕಾರ ಬ್ಯಾಂಕ್‌ಗಳಿಂದ ₹ 215 ಕೋಟಿ ಸಾಲ ಪಡೆಯಲಾಗಿದೆ. ₹ 77 ಕೋಟಿ ಮೂಲ ಬಂಡವಾಳ ತೊಡಗಿಸಲಾಗಿದೆ.

ಅಪೆಕ್ಸ್‌ ಬ್ಯಾಂಕ್‌ ₹ 50 ಕೋಟಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್‌ ₹ 30 ಕೋಟಿ, ಬಜ್ಪೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ ₹ 20 ಕೋಟಿ, ಬಾಗಲಕೋಟೆ ಜಿಲ್ಲಾ ಸಹಕಾರ ಬ್ಯಾಂಕ್‌ ₹ 40 ಕೋಟಿ, ಬೆಂಗಳೂರು ಗ್ರಾಮೀಣ ಜಿಲ್ಲಾ ಸಹಕಾರ ಬ್ಯಾಂಕ್‌ ₹ 25 ಕೋಟಿ, ವಿಜಯಪುರ ಜಿಲ್ಲಾ ಸಹಕಾರ   ಬ್ಯಾಂಕ್‌ ₹ 25 ಕೋಟಿ, ತುಮಕೂರು ಜಿಲ್ಲಾ ಸಹಕಾರಿ ಬ್ಯಾಂಕ್‌ ₹ 25 ಕೋಟಿ, ಗೋಕಾಕ ವಿಶ್ವಕರ್ಮ ಪತ್ತಿನ ಸಹಕಾರ ಸಂಘ ₹ 25 ಕೋಟಿ ಸಾಲ ನೀಡಿವೆ.

ಕಾರ್ಖಾನೆಗೆ ಸಾಲ ನೀಡುವಾಗ ನಿಯಮಾವಳಿ ಪಾಲಿಸಲಾಗಿದೆಯೇ? ಸೂಕ್ತ ಭದ್ರತೆಯನ್ನು ಪಡೆಯಲಾಗಿ ದೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈಗಾಗಲೇ ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ಅವರ ವಿಚಾರಣೆ ಮುಗಿದಿದ್ದು, ಇನ್ನೂ ಕೆಲ ಜಿಲ್ಲಾ ಸಹಕಾರ ಬ್ಯಾಂಕ್‌ಗಳು ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಅಧಿಕಾರಿಗಳನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಸಕ್ಕರೆ ಕಾರ್ಖಾನೆಯ ಮೂಲ ಬಂಡವಾಳದಲ್ಲಿ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ಹೂಡಿಕೆ ಮಾಡಿರುವ ಕುರಿತು ಇ.ಡಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಷೇರು ಖರೀದಿ ಮಾಡಿರುವ ಖಾಸಗಿ ವ್ಯಕ್ತಿಗಳನ್ನು ಪ್ರಶ್ನಿಸಲಾಗುವುದು. ಕೆಲವು ಉದ್ದಿಮೆದಾರರು ಹಣ ತೊಡಗಿಸಿರುವ ಕುರಿತು ದಾಖಲೆ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಬೆನಚಿನಮರಡಿ, ಕುಂದರಗಿ, ಲೊಲಸೂರು, ಶಿಲ್ತಿಬಾವ್‌, ಗುಜ್ನಾಳ್‌, ಪಂಜನಟ್ಟಿ ಹಾಗೂ ಗಿಳೆ ಹೊಸೂರು ಸೇವಾ ಸಹಕಾರ ಸಂಘಗಳು ತಲಾ ಮೂರು ಕೋಟಿ ಷೇರು ಬಂಡವಾಳ ಹೂಡಿದ್ದು ಈ ಬಗ್ಗೆ ತನಿಖೆ ನಡೆಯಲಿದೆ. ಒಟ್ಟಾರೆ ಮೂಲ ಬಂಡವಾಳದಲ್ಲಿ ₹ 30 ಕೋಟಿ ಬೇನಾಮಿ ಹೆಸರಿನಲ್ಲಿ ಹೂಡಿಕೆ ಆಗಿರಬಹುದು ಎಂಬ ಶಂಕೆ ಇ.ಡಿ ಅಧಿಕಾರಿಗಳಿಗಿದೆ. ಈ ಕಾರಣಕ್ಕೆ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಕಾರ್ಖಾನೆ ಮೂಲ ಬಂಡವಾಳ ಕುರಿತು ಮಾಹಿತಿ ಪಡೆಯಲು ಸಹಕಾರಿ ಇಲಾಖೆಯ ಹಿರಿಯ ಅಧಿಕಾರಿ
ಗಳನ್ನು ಇ.ಡಿ ವಿಚಾರಣೆಗೆ ಕರೆಯುವ ಸಂಭವವಿದೆ.

ಸಕ್ಕರೆ ಕಾರ್ಖಾನೆಯಲ್ಲಿ ಡಿಕೆಶಿ ಹಣ?

ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌  ಆಪ್ತ ವಲಯದಲ್ಲಿ ಲಕ್ಷ್ಮಿ ಹೆಬ್ಬಾಳಕರ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸಕ್ಕರೆ ಕಾರ್ಖಾನೆಗೆ ಅವರ ಹಣವೇನಾದರೂ ಹೂಡಿಕೆಯಾಗಿದೆಯೇ ಎಂಬ ಕುರಿತು ಇ.ಡಿ. ತನಿಖೆ ನಡೆಸುತ್ತಿದೆ.

ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ರಾಜಣ್ಣ ಅವರನ್ನು ಈಚೆಗೆ ವಿಚಾರಣೆ ನಡೆಸಿದ ಇ.ಡಿ ಅಧಿಕಾರಿಗಳು ಲಕ್ಷ್ಮಿ ಮತ್ತು ಶಿವಕುಮಾರ್‌ ಅವರ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

***

ಡಿಕೆಶಿ ಜತೆ ನನಗೆ ಹಣಕಾಸು ವ್ಯವಹಾರವಿಲ್ಲ. ಆದರೆ, ಈ ಹಂತದಲ್ಲಿ ಇ.ಡಿ ತನಿಖೆ ಕುರಿತು ಪ್ರತಿಕ್ರಿಯಿಸುವುದಿಲ್ಲ

– ಲಕ್ಷ್ಮಿ ಹೆಬ್ಬಾಳಕರ, ಕಾಂಗ್ರೆಸ್‌ ಪಕ್ಷದ ಶಾಸಕಿ

ಪ್ರತಿಕ್ರಿಯಿಸಿ (+)