ಮಂಗಳವಾರ, ಮಾರ್ಚ್ 9, 2021
18 °C
ಮಹಾನಗರ ಪಾಲಿಕೆ ಚುನಾವಣೆ; 16ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಉಲ್ಲಾ ಖಾನ್ ಮೆರವಣಿಗೆಯಲ್ಲಿ ನಡೆದ ಕೃತ್ಯ

ತುಮಕೂರು: ಮೆರವಣಿಗೆ ವೇಳೆ ರಾಸಾಯನಿಕ ದಾಳಿ; 30 ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತುಮಕೂರು ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಬಳಿಕ 16ನೇ ವಾರ್ಡ್ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಇನಾಯತ್‌ ಉಲ್ಲಾ ಖಾನ್ ಅವರ ಮೆರವಣಿಗೆ ನಡೆಯುತ್ತಿದ್ದ ವೇಳೆ ಆ್ಯಸಿಡ್ ರೂಪದ ರಾಸಾಯನಿಕ ದಾಳಿಯಲ್ಲಿ 30 ಜನರು ಗಾಯಗೊಂಡಿದ್ದಾರೆ.

ಎಲ್ಲ ಗಾಯಾಳುಗಳೂ ಅಪಾಯದಿಂದ ಪಾರಾಗಿದ್ದಾರೆ. ಮುಖ, ತಲೆ, ಕೈ, ಎದೆ, ಬೆನ್ನಿನ ಮೇಲೆ ರಾಸಾಯನಿಕ ಬಿದ್ದಿದೆ. ಅಬು ಮತ್ತು ವಸೀಮ್ ಕಣ್ಣಿನ ರೆಪ್ಪೆಯ ಮೇಲೆ ರಾಸಾಯನಿಕ ಬಿದ್ದಿದ್ದು, ಕಣ್ಣಿಗೆ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಘಟನೆ ವಿವರ

ಮಧ್ಯಾಹ್ನ 1 ಗಂಟೆ ಹೊತ್ತಿಗೆ ಬಾರ್ ಲೈನ್‌ ರಸ್ತೆ ಪೆನ್‌ಶನ್ ಮೊಹಲ್ಲಾ ಬಳಿ ಇನಾಯತ್ ಉಲ್ಲಾ ಖಾನ್ ಅವರ ಮೆರವಣಿಗೆ ಸಾಗುತ್ತಿದ್ದಾಗ ಅದರಲ್ಲಿದ್ದ ಇಬ್ಬರು ಆ್ಯಸಿಡ್ ರೂಪದ ರಾಸಾಯನಿಕ ತುಂಬಿದ್ದ ಎರಡು ಲೀಟರ್ ಬಾಟಲ್‌ಗಳನ್ನು ಹಿಡಿದು ಮೇಲೆ ತಿರುಗಿಸುತ್ತ ನೃತ್ಯ ಮಾಡುತ್ತಿದ್ದರು. ನೃತ್ಯ ಮಾಡುತ್ತಿದ್ದ ಇತರರ ಮೈ ಮೇಲೆ ಇದು ಬಿದ್ದಾಗ ನೀರು ಚೆಲ್ಲಿರಬಹುದು ಎಂದು ಉಪೇಕ್ಷಿಸಿ ಉಮೇದಿಯಲ್ಲಿ ಕುಣಿಯುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿ ಉರಿ ಕಾಣಿಸಿಕೊಂಡಾಗ ಸಮೀಪದ ಕೋತಿ ತೋಪಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಓಡಿ ಬಂದಿದ್ದಾರೆ.

ಆ್ಯಸಿಡ್ ಅಲ್ಲ: ‘ಕೃತ್ಯಕ್ಕೆ ಬಳಸಿರುವುದು ಆ್ಯಸಿಡ್ ಅಂತೂ ಅಲ್ಲ. ಕಾಸ್ಟಿಕ್ ಸೋಡಾ, ಟೈಲ್ಸ್ ತೊಳೆಯುವ ರಾಸಾಯನಿಕ, ಬಾತ್ ರೂಮ್ ಕ್ಲೀನರ್ ಇರಬಹುದು. ಇಲಾಖೆ ಹಿರಿಯ ಅಧಿಕಾರಿಗಳು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಿ ವರದಿ ಬಂದ ಬಳಿಕ ಏನು ಎಂಬುದು ಗೊತ್ತಾಗಲಿದೆ. ಗಾಯಾಳುಗಳಲ್ಲಿ ಯಾರಿಗೂ ಅಪಾಯವಿಲ್ಲ’ ಎಂದು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹೇಶ್ ಪ್ರಜಾವಾಣಿಗೆ ತಿಳಿಸಿದರು.

ಆರೋಪ: ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳ ಬೆಂಬಲಿಗರೇ ರಾಜಕೀಯ ವೈಷಮ್ಯದಿಂದ ಈ ಕೃತ್ಯ ನಡೆಸಿದ್ದು, ತಕ್ಷಣ ಬಂಧಿಸಬೇಕು ಎಂದು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಒತ್ತಾಯ ಮಾಡಿದರು.


ಅಬು ಎಂಬ ಯುವಕನ ಕಣ್ಣಿಗೆ ಗಾಯವಾಗಿದ್ದು  ಕೋತಿತೋಪು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿದರು

ಆಸ್ಪತ್ರೆಗೆ ಭೇಟಿ: ಆಸ್ಪತ್ರೆಗೆ ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಡಾ.ರಫೀಕ್ ಅಹಮದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಿಕಾ ಭೇಟಿ ನೀಡಿ ಗಾಯಾಳುಗಳಿಗೆ ನೀಡುತ್ತಿದ್ದ ಚಿಕಿತ್ಸೆ ಗಮನಿಸಿದರು. ಗಾಯಾಳುಗಳಿಗೆ ಧೈರ್ಯ ತುಂಬಿದರು.

ಶಾಂತಿ ಕಾಪಾಡಲಿ: ಈ ಕೃತ್ಯ ನಡೆಸಿದ ಕಿಡಿಗೇಡಿಗಳನ್ನು ಪೊಲೀಸರು ತಕ್ಷಣ ಬಂಧಿಸಬೇಕು. ಇಂತಹ ಕೃತ್ಯ ನಗರದ ಇತಿಹಾಸದಲ್ಲಿಯೇ ನಡೆದಿರಲಿಲ್ಲ. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯ ಮಾಡಿದರು.

‘ಇದೊಂದು ಅಸಹನೆಯ ಕೃತ್ಯವಾಗಿದ್ದು, ಖಂಡನೀಯವಾಗಿದೆ. ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಹೇಳಿದ್ದಾರೆ. ತಕ್ಷಣ ಬಂಧಿಸಲಿ ಎಂದು ಮಾಜಿ ಶಾಸಲ ಡಾ.ರಫೀಕ್ ಅಹಮದ್ ಒತ್ತಾಯಿಸಿದರು.


ಗಾಯಗೊಂಡವರು ಆಸ್ಪತ್ರೆಯಲ್ಲಿ

 


ವಸೀಮ್ ಎಂಬ ಯುವಕನ ಕಣ್ಣಿಗೆ ಗಾಯ ಆಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.