ಶುಕ್ರವಾರ, ನವೆಂಬರ್ 22, 2019
20 °C
ಬೆಳೆಯುವವರೇ ಖರೀದಿಸಿ ಉಣ್ಣಬೇಕಾದ ಸ್ಥಿತಿ l ಲಾಭದಾಯಕ ಬೆಳೆಗಳತ್ತ ರೈತರ ಚಿತ್ತ

‘ಮಾಲ್ದಂಡಿ’ ತಳಿ ಬೆಳೆ ಪ್ರದೇಶ ಇಳಿಕೆ

Published:
Updated:
Prajavani

ವಿಜಯಪುರ: ‘ಮಾಲ್ದಂಡಿ’ ತಳಿ ಬಿಳಿಜೋಳ ಬಿತ್ತನೆಗೆ ವಿಜಯಪುರ ಜಿಲ್ಲೆ ಒಂದು ಕಾಲದಲ್ಲಿ ಹೆಸರಾಗಿತ್ತು. ಆದರೆ, ಕೃಷ್ಣಾ ಮತ್ತು ಭೀಮಾ ನದಿ ದಂಡೆಯ ರೈತರು ಕಬ್ಬಿನತ್ತ ಮುಖ ಮಾಡಿದ್ದರಿಂದ ಹಾಗೂ ಕೃಷಿ ಹೊಂಡ, ಕೊಳವೆಬಾವಿ ಮೂಲಕ ಇತರ ರೈತರು ಲಾಭದಾಯಕ ಬೆಳೆಗಳತ್ತ ವಾಲಿದ್ದರಿಂದ ಜೋಳ ಬೆಳೆಯುತ್ತಿದ್ದವರೇ ಈಗ ಜೋಳವನ್ನು ಖರೀದಿಸಿ ಉಣ್ಣಬೇಕಾಗಿದೆ.

ಜಿಲ್ಲೆಯಲ್ಲಿ 2009–10ರಲ್ಲಿ ಸುಮಾರು 2.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ‘ಮಾಲ್ದಂಡಿ’ ಜೋಳವನ್ನು ಬಿತ್ತನೆ ಮಾಡಿದ್ದರು. ಆದರೆ, ಉತ್ತಮ ಬೆಲೆ ಸಿಗದ ಕಾರಣ ಬಿತ್ತನೆ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಬಂದಿದ್ದು, ಈಗ ಕೇವಲ 1.5 ಲಕ್ಷ ಹೆಕ್ಟೇರ್‌ಗೆ ಸೀಮಿತಗೊಂಡಿದೆ.

ಇನ್ನೊಂದೆಡೆ ತೊಗರಿ ಮತ್ತು ಕಡಲೆಗೆ ಉತ್ತಮ ದರ ಇರುವುದರಿಂದ ರೈತರು ಈ ಎರಡು ಬೆಳೆಗಳತ್ತ ಚಿತ್ತ ಹರಿಸಿದ್ದಾರೆ. ಹತ್ತು ವರ್ಷಗಳಲ್ಲಿ ಸರಾಸರಿ ಒಂದು ಲಕ್ಷ ಪ್ರದೇಶದಷ್ಟು ಬಿತ್ತನೆ ಪ್ರದೇಶ ಕುಸಿತವಾಗಿದೆ.

‘ಮಾಲ್ದಂಡಿ’ ವಿಶೇಷ ಏನು?: ‘ಮಾಲ್ದಂಡಿ’ ಜೋಳದ ಒಂದು ತಳಿ. ಇದು ಕಡಿಮೆ ನೀರು, ತೇವಾಂಶ ಇದ್ದರೂ ಬೆಳೆಯಬಹುದು. ಬಿಸಿಲು ಹೆಚ್ಚಾಗಿದ್ದರೂ ಫಸಲು ಉತ್ತಮವಾಗಿ ಬರುತ್ತದೆ. ಹೀಗಾಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಈ ತಳಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

ಬೆಂಬಲ ಬೆಲೆ ಕಾರಣ: ತೊಗರಿ, ಕಡಲೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ನೀಡುತ್ತಿರುವುದರಿಂದ ಜೋಳದ ಬಿತ್ತನೆ ಪ್ರದೇಶ ಕಡಿಮೆಯಾಗುತ್ತಿದೆ. ಕೇಂದ್ರ ಸರ್ಕಾರ ಪ್ರಸಕ್ತ ವರ್ಷ
ಕ್ವಿಂಟಲ್ ತೊಗರಿಗೆ ₹5,800, ಹೆಸರು ₹7,050, ಉದ್ದು ₹5,700 ಬೆಂಬಲ ಬೆಲೆ ಘೋಷಿಸಿದ್ದರೆ, ‘ಮಾಲ್ದಂಡಿ’ ಜೋಳಕ್ಕೆ ₹2,570 ಘೋಷಿಸಿದೆ. ಹೀಗಾಗಿ ರೈತರು ಜೋಳವನ್ನು ಕೈಬಿಟ್ಟು, ತೊಗರಿ, ಕಡಲೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

‘ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.27 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ 2.23 ಲಕ್ಷ ಹೆಕ್ಟೇರ್ ಕಡಲೆ ಹಾಗೂ 1.84 ಲಕ್ಷ ಹೆಕ್ಟೇರ್ ಬಿಳಿಜೋಳ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ, ಕಡಲೆ ಬಿತ್ತನೆ ಇನ್ನಷ್ಟು ಹೆಚ್ಚಾಗಲಿದ್ದು, ಜೋಳದ ಬಿತ್ತನೆ ಗುರಿ ಕಡಿಮೆಯಾಗಲಿದೆ’ ಎಂದು ಕೃಷಿ ಇಲಾಖೆ ಮೂಲಗಳು ಹೇಳುತ್ತವೆ.

***

ಜೋಳ ಬಿತ್ತನೆ ವಿವರ

ವರ್ಷ;ಬಿತ್ತನೆ (ಲಕ್ಷ ಹೆಕ್ಟೇರ್‌ಗಳಲ್ಲಿ)

2014–15;1.48

2015–16;1.72

2016–17;1.02

2017–18;1.48

2018–19;1.51

 

ಅಕ್ಕಿ, ಗೋಧಿ ಬಳಕೆ ಹೆಚ್ಚಿದ್ದರಿಂದ ಜೋಳಕ್ಕೆ ಬೇಡಿಕೆ ಕಡಿಮೆಯಾಗಿದೆ. ಬೆಂಬಲ ಬೆಲೆ ಹೆಚ್ಚಿಸಬೇಕು ಮತ್ತು ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡಬೇಕು
-ಶಿವಕುಮಾರ್
ಜಂಟಿ ನಿರ್ದೇಶಕ, ಕೃಷಿ ಇಲಾಖೆ

ಪ್ರತಿಕ್ರಿಯಿಸಿ (+)