ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಕಾರ್ಜುನ ಆಪ್ತನಿಗೆ ಟಿಕೆಟ್

Last Updated 3 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ದಾವಣಗೆರೆ: ಆಪ್ತ ಎಚ್‌.ಬಿ. ಮಂಜಪ್ಪಗೆ ಟಿಕೆಟ್‌ ಕೊಡಿಸುವಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ ಯಶಸ್ವಿಯಾಗಿದ್ದಾರೆ.

ಮಂಗಳವಾರ ತಡರಾತ್ರಿ ಬಿಡುಗಡೆಯಾದ ಕಾಂಗ್ರೆಸ್‌ ಪಟ್ಟಿಯಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಹೆಸರು ಕಾಣಿಸಿಕೊಂಡಿದೆ.

ಹಲವು ದಿನಗಳಿಂದ ಟಿಕೆಟ್‌ ಹಂಚಿಕೆ ವಿಷಯದಲ್ಲಿ ನಡೆಯುತ್ತಿದ್ದ ‘ಕೊಕ್ಕೊ ಆಟ’ಕ್ಕೆ ಕೊನೆಗೂ ವಿರಾಮ ಬಿದ್ದಿದೆ.

ಪಕ್ಷ ತಮಗೆ ನೀಡಿದ್ದ ಟಿಕೆಟ್‌ ಅನ್ನು ಮಗನಿಗೆ ಕೊಡಿಸಲು ಶಾಸಕ ಶಾಮನೂರು ಶಿವಶಂಕರಪ್ಪ ಮುಂದಾಗಿದ್ದರು. ಆದರೆ ಹೈಕಮಾಂಡ್‌ಗೆ ಇಷ್ಟ ಇರಲಿಲ್ಲ. ಹೀಗೆ ಹಗ್ಗ ಜಗ್ಗಾಟ ನಡೆಯುತ್ತಿರುವಾಗಲೇ ರಾಜ್ಯ ನಾಯಕರು ಜೆ.ಎಚ್‌. ಪಟೇಲ್‌ ಅವರ ಅಣ್ಣನ ಮಗ, ಜಿಲ್ಲಾ ಪಂಚಾಯಿತಿ ಪಕ್ಷೇತರ ಸದಸ್ಯ ತೇಜಸ್ವಿ ಪಟೇಲ್ ಹೆಸರು ತೇಲಿಬಿಟ್ಟರು.

ಯಾವುದೇ ಕಾರಣಕ್ಕೂ ತಮ್ಮದೇ ಜನಾಂಗದ ತೇಜಸ್ವಿಗೆ ಟಿಕೆಟ್‌ ಸಿಗಬಾರದೆಂಬ ಉದ್ದೇಶದಿಂದ ಮಲ್ಲಿಕಾರ್ಜುನ ಮತ್ತೆ ತಾವೇ ಸ್ಪರ್ಧೆಗೆ ಇಳಿಯುವುದಾಗಿ ಪ್ರಕಟಿಸಿದರು. ಆದರೆ, ಮಲ್ಲಿಕಾರ್ಜುನ ಅವರನ್ನು ಸಮಾಧಾನ ಮಾಡಲು ಹೈಕ
ಮಾಂಡ್‌ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ನೇಮಿಸಿತು.

ಕೊನೆಗೆ ತಮ್ಮ ಕುಟುಂಬಕ್ಕೆ ನಿಷ್ಠಾವಂತರಾದ ಮಂಜಪ್ಪ ಹೆಸರನ್ನು ಅಪ್ಪ–ಮಗ ಸೂಚಿಸಿದರು. ಮಂಜಪ್ಪ 2018ರ ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾಳಿಯಿಂದ ಟಿಕೆಟ್‌ ಬಯಸಿದ್ದರು. ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಇದೆ. ಮೂರು ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಪಕ್ಷ ನಿಷ್ಠೆಗಿಂತ ಶಾಮನೂರು ಕುಟುಂಬ ನಿಷ್ಠೆ ಮೆರೆದಿದ್ದೇ ಹೆಚ್ಚು.

ಸಹಮತ ಇಲ್ಲದ ಕಾರಣ ತಪ್ಪಿದ ಟಿಕೆಟ್: ತೇಜಸ್ವಿ

‘ಸ್ಥಳೀಯ ಮುಖಂಡರ ಸಹಮತ ಇಲ್ಲದಿರುವುದರಿಂದ ನನಗೆ ಟಿಕೆಟ್ ತಪ್ಪಿರಬಹುದು. ಆಕಾಂಕ್ಷಿಯಾಗಿರಲಿಲ್ಲ. ನನಗೆ ಬೇಸರವೂ ಇಲ್ಲ. ಆದರೆ, ಕಾಂಗ್ರೆಸ್‌ ರೈತಪರ ಹೋರಾಟಗಾರರನ್ನು ಗುರುತಿಸುವ ಕೆಲಸವನ್ನು ಮುಂದುವರಿಸಬೇಕು’ ಎಂದು ತೇಜಸ್ವಿ ಪಟೇಲ್ ಹೇಳಿದರು.

ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರ ಕರೆಯ ಮೇರೆಗೆ ಭೇಟಿ ಮಾಡಿದ್ದೆ. ಸ್ಪರ್ಧೆ ಬಗ್ಗೆ ಒಪ್ಪಿಗೆ ಸೂಚಿಸಿದ್ದೆ. ಮುಂದೆ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಟಿಕೆಟ್‌ ಘೋಷಣೆಯನ್ನು ಇಷ್ಟು ವಿಳಂಬ ಮಾಡಿದ್ದು ಸರಿ ಅಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.

‘ಪಕ್ಷದ ಟಿಕೆಟ್ ಪಡೆದ ಎಚ್‌.ಬಿ. ಮಂಜಪ್ಪ ಅವರ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಆ ಪಕ್ಷದ ಮುಖಂಡರ ಪ್ರಚಾರ ಶೈಲಿ ಗಮನಿಸಿ ಬೆಂಬಲಿಸುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT