ಮಾನ ಕಳೆಯುತ್ತಿರುವ ಆಸ್ಪತ್ರೆಗಳು

ಮಂಗಳವಾರ, ಜೂನ್ 18, 2019
29 °C
ಆಸ್ಪತ್ರೆಗಳ ತ್ಯಾಜ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ * ಜಾರಿಯಾಗದ ಕೋರ್ಟ್ ಆದೇಶ

ಮಾನ ಕಳೆಯುತ್ತಿರುವ ಆಸ್ಪತ್ರೆಗಳು

Published:
Updated:
Prajavani

ಬೆಂಗಳೂರು: ಕಸ ವಿಲೇವಾರಿಯಲ್ಲಿ ಮುಗ್ಗರಿಸಿ ಜಾಗತಿಕ ಮಟ್ಟದಲ್ಲಿ ಅಪಮಾನ ಅನುಭವಿಸಿದರೂ ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರ ಆಸ್ಪತ್ರೆಗಳ ತ್ಯಾಜ್ಯ ನಿರ್ವಹಣೆಯಲ್ಲೂ ಅಂತಹದ್ದೇ ಎಡವಟ್ಟಿನತ್ತ ಹೆಜ್ಜೆ ಇರಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಅಸಮರ್ಪಕ ಆಸ್ಪತ್ರೆ ತ್ಯಾಜ್ಯ ವಿಲೇವಾರಿಯಿಂದ ಆತಂಕದ ವಾತಾ ವರಣ ನಿರ್ಮಾಣವಾಗಿದೆ. ಸಣ್ಣಪುಟ್ಟ ಕ್ಲಿನಿಕ್‌ಗಳಿಂದ ‘ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್’ ಎಂದು ಹಣೆಪಟ್ಟಿ ಹೊತ್ತಿರುವ ಆಸ್ಪತ್ರೆಗಳೂ ಕಾನೂನು ಗಾಳಿಗೆ ತೂರಿ ಆಸ್ಪತ್ರೆ ತ್ಯಾಜ್ಯವನ್ನು ಮನಬಂದಂತೆ ವಿಲೇವಾರಿ ಮಾಡುತ್ತಿವೆ.

ಅಪಾಯಕಾರಿ ರಾಸಾಯನಿಕಗಳಿರುವ ಕಸವನ್ನು ಜನವಸತಿ ಪ್ರದೇಶಗಳಲ್ಲೇ ಸುರಿದು ಸ್ಥಳೀಯರನ್ನು ಗಂಭೀರ ರೋಗಗಳಿಗೆ ತುತ್ತಾಗಿಸುತ್ತಿದ್ದರೆ, ಅಮಾ ಯಕ ಜಾನುವಾರುಗಳು ತ್ಯಾಜ್ಯ ತಿಂದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚು ತ್ತಿವೆ. ಕೆಲ ಸರ್ಕಾರಿ ಆಸ್ಪತ್ರೆಗಳಲ್ಲೂ ತ್ಯಾಜ್ಯ ವಿಲೇವಾರಿಗೆ ನೀಡಿದ ಹಣವನ್ನು ನುಂಗಿ ಹಾಕುತ್ತಿರುವ ವೈದ್ಯಾಧಿಕಾರಿಗಳು ಅವೈಜ್ಞಾನಿಕವಾಗಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಸುತ್ತಿರುವ ನಿದರ್ಶನಗಳೂ ಇವೆ.

ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಾಗಿ ಹೇಳಿಕೊಂಡು ಗುತ್ತಿಗೆ ಪಡೆದ ಸಂಸ್ಥೆಗಳು ನಿರ್ಜನ ಪ್ರದೇಶ, ಹೊಸ ಬಡಾವಣೆಗಳಲ್ಲಿ ತ್ಯಾಜ್ಯವನ್ನು ಸುರಿಯುತ್ತಿವೆ. ಇದಕ್ಕೆ ಬೆಂಬಲವಾಗಿ ಭೂಗತಶಕ್ತಿಗಳನ್ನೂ ಬಳಸಿಕೊಂಡು ಅಕ್ರಮ ಪ್ರಶ್ನಿಸುವವರನ್ನು ಬೆದರಿಸಿ, ಹಲ್ಲೆ ನಡೆಸುವ ಪ್ರಕರಣಗಳು ವರದಿಯಾಗಿ ಅಪಾಯಗಳ ಮುನ್ಸೂಚನೆ ಕೊಟ್ಟಿವೆ. ಇವರ ಪಾಲಿಗೆ ಸುಪ್ರೀಂಕೋರ್ಟ್ ನಿರ್ದೇಶನ, ರಾಜ್ಯ ಸರ್ಕಾರ ರೂಪಿಸಿ ರುವ ನಿಯಮಗಳು ಲೆಕ್ಕಕ್ಕೆ ಇಲ್ಲವಾಗಿವೆ.

ಕಾಗದಕ್ಕೆ ಸೀಮಿತ: ಆಸ್ಪತ್ರೆಗಳ ತ್ಯಾಜ್ಯ ನಿರ್ವಹಣೆಗೆ ನಿಯಮಗಳಿದ್ದರೂ ಉಲ್ಲಂಘನೆ ಆಗುತ್ತಿದೆ. ಆಸ್ಪತ್ರೆಗಳು ಹಾಗೂ ಆಸ್ಪತ್ರೆಗಳ ತ್ಯಾಜ್ಯ ಉತ್ಪಾದಿಸುವ ಆರೋಗ್ಯ ಸೇವಾ ಸಂಸ್ಥೆಗಳು ವಿಲೇವಾರಿಗೆ ತಮ್ಮದೇ ವ್ಯವಸ್ಥೆ ರೂಪಿಕೊಳ್ಳಬೇಕು. ಇಲ್ಲವೇ ವಿಲೇವಾರಿ ಘಟಕಗಳಿಗೆ ಶುಲ್ಕ ತೆತ್ತು ನಿರ್ವಹಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಆದರೆ ಪಾಲನೆ ಆಗುತ್ತಿಲ್ಲ. ಆಸ್ಪತ್ರೆಗಳ ತ್ಯಾಜ್ಯ ಸುರಿಯುತ್ತಿರುವ ಸುತ್ತ ಮುತ್ತಲ ಪ್ರದೇಶಗಳು ರೋಗ ಹರಡುವ ತಾಣಗಳಾಗಿ ಪರಿವರ್ತನೆಯಾಗಿವೆ.

ಶಸ್ತ್ರ ಚಿಕಿತ್ಸೆಯಿಂದ ಕತ್ತರಿಸಿದ ಮಾನವ ಅಂಗಾಂಗಗಳು, ಗಂಭೀರ ಕಾಯಿಲೆಗೆ ಚಿಕಿತ್ಸೆ ನೀಡಿ ಉಳಿಯುವ ತ್ಯಾಜ್ಯ, ಸಿರಿಂಜ್, ರಕ್ತಸಿಕ್ತ ರೋಗಾಣು ಗಳನ್ನು ಮೆತ್ತಿಕೊಂಡ ಹತ್ತಿ, ಪ್ರಯೋಗಾಲಯಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ, ಭ್ರೂಣ ಹಾಗೂ ಪ್ರಾಣಿಗಳ ಚಿಕಿತ್ಸೆ ನಂತರ ಉಳಿಯುವ ತ್ಯಾಜ್ಯವು ಪ್ರತ್ಯೇಕವಾಗಿ ವಿಂಗಡಣೆಯಾಗದೇ ಅನೇಕ ಕಡೆ ಮಾಮೂಲಿ ಕಸದ ತೊಟ್ಟಿಯನ್ನೇ ಸೇರುತ್ತಿದೆ. ಇದನ್ನು ತಿಂದು ಅಭ್ಯಾಸ ಆಗಿರುವ ಬೀದಿನಾಯಿಗಳು ಅಂತಹ ತ್ಯಾಜ್ಯ ಸಿಗದಿದ್ದಾಗ ಮಕ್ಕಳ ಮೇಲೆ ಮುಗಿಬೀಳುವುದು ಸಾಮಾನ್ಯವಾಗಿದೆ. ಕಾಯಿಲೆ ಗುಣಪಡಿಸಬೇಕಾದ ಆಸ್ಪತ್ರೆ ಗಳೇ ಮತ್ತೊಂದು ಮಾರ್ಗದಲ್ಲಿ ಜನರಿಗೆ ರೋಗಗಳನ್ನು ಹರಡುತ್ತಿವೆ, ಪರಿಸರ ಮಾಲಿನ್ಯಕ್ಕೂ ಕಾರಣ ವಾಗುತ್ತಿವೆ.

ಕಳ್ಳಮಾರ್ಗದಲ್ಲಿ ವಿಲೇವಾರಿ: ಕೆಲ ಆಸ್ಪತ್ರೆಗಳು, ಪ್ರಯೋಗಾಲಯಗಳು ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಹೊಂದಿವೆ. ಮತ್ತೆ ಕೆಲವು ಹಣ ಕೊಟ್ಟು ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ರವಾನಿಸಿ ಕೈತೊಳೆದುಕೊಳ್ಳುತ್ತಿವೆ. ಬಹುತೇಕ ಕ್ಲಿನಿಕ್ ಮತ್ತು ಆಸ್ಪತ್ರೆಗಳು ಬೀದಿ ಬದಿ ತ್ಯಾಜ್ಯ ಸುರಿಯುವುದನ್ನು ಮುಂದು ವರಿಸಿವೆ. ಸ್ವಂತ ಘಟಕ ಹೊಂದಲು ಆರ್ಥಿಕ ಹೊರೆಯಾಗುತ್ತದೆ, ಖಾಸಗಿ ಘಟಕಗಳಿಗೆ ನೀಡಿದರೆ ಹಣ ಕೊಡಬೇಕು.

ಅದಕ್ಕಿಂತ ರಾತ್ರಿ ವೇಳೆ ಕಸದ ತೊಟ್ಟಿ, ಚರಂಡಿಗಳಿಗೆ ಸುರಿಯುವುದು, ನಗರದ ಹೊರ ವಲಯದ ರಸ್ತೆ ಬದಿ ಬಿಸಾಡುವುದು ಇಲ್ಲವೇ ಖಾಲಿ ಜಮೀನಿನಲ್ಲಿ ಹಾಕು ವುದು ಸಲೀಸು ಎಂದು  ಕಳ್ಳ ಮಾರ್ಗಗಳನ್ನು ಕಂಡುಕೊಂಡಿವೆ.

ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿಯೂ ‘ಮಾಫಿಯಾ’ ಕೈಗೆ ಸಿಲುಕಿದೆ. ಗುತ್ತಿಗೆ ಪಡೆದ ಸಂಸ್ಥೆಗಳು ಸರ್ಕಾರಿ ಅಧಿಕಾರಿಗಳು, ಪೊಲೀಸರು, ಸ್ಥಳೀಯ ಆಡಳಿತದ ಅಧಿಕಾರಿಗಳ ಮಾಫಿಯಾವನ್ನು ಬೆಂಗಾವಲಿಗಿಟ್ಟುಕೊಂಡು ತಮಗೆ ತೋಚಿದಂತೆ ಸುರಿದು ಹೋಗುತ್ತಾರೆ. ಕೆಲ ತಿಂಗಳ ಹಿಂದೆ ಮಾಗಡಿ ರಸ್ತೆ ತಾವರೇಕೆರೆ ಬಳಿ ಮಧ್ಯರಾತ್ರಿ ವೇಳೆ ತ್ಯಾಜ್ಯ ಸುರಿಯುತ್ತಿದ್ದ ಪುಂಡರ ಗುಂಪು ಸಾಕಷ್ಟು ಗದ್ದಲಕ್ಕೆ ಕಾರಣವಾಗಿತ್ತು.

ತಪಾಸಣೆ ನಡೆಯುತ್ತಿಲ್ಲ: ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರಿಗೆ ಪರವಾನಗಿ ನೀಡುವ ಮುನ್ನ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಇದೆಯೇ ಎಂಬುದನ್ನು ಪರಿಶೀಲಿಸುತ್ತಿಲ್ಲ ಮತ್ತು ನಿಯಮಿತವಾಗಿ ಭೇಟಿ ನೀಡಿ ಕಾರ್ಯನಿರ್ವಹಣೆಯನ್ನೂ ಖಾತರಿ ಪಡಿಸಿಕೊಳ್ಳುತ್ತಿಲ್ಲ. ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಜವಾಬ್ದಾರಿಯಿಂದ ದೂರ ಸರಿದಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉಸ್ತುವಾರಿ ನೋಡಿಕೊಳ್ಳಬೇಕಾದ ಸ್ಥಳೀಯ ಆಡಳಿತಗಳು ಕಣ್ಣು ಮುಚ್ಚಿ ಕುಳಿತಿವೆ. ದೂರು ಬಂದಾಗ ಪರಿಶೀಲನೆ ಶಾಸ್ತ್ರ ಮಾಡಿ ಸುಮ್ಮನಾಗುತ್ತಿವೆ.

ಕಸ ಸಂಗ್ರಹಿಸುವ ಪೌರ ಕಾರ್ಮಿಕರ ಮೇಲೂ ವೈದ್ಯತ್ಯಾಜ್ಯ ಪರಿಣಾಮ ಬೀರುತ್ತಿದೆ. ಉಳಿದಂತೆ ಸಿರಿಂಜ್, ಬ್ಲೇಡ್‌ನಂತಹ ವಸ್ತುಗಳನ್ನು ಕಂಡು ಆಕರ್ಷಿತರಾಗುವ ಮಕ್ಕಳು ಆಟವಾಡಲು ಬಳಸುವ ಮೂಲಕ ಸೋಂಕು ತಂದುಕೊಳ್ಳುತ್ತವೆ. ರೋಗಾಣುಗಳು ಗಾಳಿಯಲ್ಲಿ ಹರಡಿ, ಸ್ಥಳಿಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ತ್ಯಾಜ್ಯ ತಿನ್ನುವ ಹಸು, ಎಮ್ಮೆ ಇತರ ಪ್ರಾಣಿಗಳ ಹೊಟ್ಟೆ ಸೇರಿ ಅವುಗಳ ಜೀವಕ್ಕೂ ಕಂಟಕ ತರುತ್ತಿವೆ.

ಜೀವ ಸಂಕುಲಕ್ಕೆ ಅಪಾಯಕಾರಿಯಾಗಿರುವ ವೈದ್ಯ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಗಾಗಿ ಸರ್ಕಾರ ಕಠಿಣ ಕಾನೂನು ರೂಪಿಸಬೇಕಿದೆ. ಈಗಾಗಲೇ ತ್ಯಾಜ್ಯ ನಿರ್ವಹಣೆ ಸೌಲಭ್ಯ ಹೊಂದಿರುವ ಆಸ್ಪತ್ರೆ ಆಡಳಿತಮಂಡಳಿಗಳ ಒಕ್ಕೂಟವು ಸೌಲಭ್ಯ ಇಲ್ಲದ ಆಸ್ಪತ್ರೆಗಳ ಮೇಲೆ ಒತ್ತಡ ತಂದು ತ್ಯಾಜ್ಯ ನಿರ್ವಹಣಾ ಸೌಲಭ್ಯ ಅಳವಡಿಸಿಕೊಳ್ಳುವಂತೆ ಮಾಡಿ ಆರೋಗ್ಯ ಕ್ಷೇತ್ರಕ್ಕೆ ಅಂಟಿರುವ ಕಳಂಕ ತೊಳೆಯಬೇಕಿದೆ.

ವೈದ್ಯಕೀಯ ಪ್ರವಾಸೋದ್ಯಮಕ್ಕೂ ಕುತ್ತು...

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಧನೆಯಿಂದ ಬೆಂಗಳೂರಿನ ಕೀರ್ತಿ ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿದೆ. ಈಗ ವೈದ್ಯಕೀಯ ಪ್ರವಾಸೋದ್ಯಮಕ್ಕೂ ನಗರ ತೆರೆದುಕೊಂಡಿದೆ. ಅಂತರರಾಷ್ಟ್ರೀಯ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿದ್ದು, ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿಗರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಬರುವ ವಿದೇಶಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಆರ್ಥಿಕ ಚಟುವಟಿಕೆಗಳು ವೃದ್ಧಿಸುತ್ತಿವೆ.

ವೈದ್ಯಕೀಯ ಕ್ಷೇತ್ರದಲ್ಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಎಲ್ಲಾ ಅವಕಾಶಗಳು ಇವೆ. ಆದರೆ ಆಸ್ಪತ್ರೆಗಳ ತ್ಯಾಜ್ಯ ನಿರ್ವಹಣೆಯಲ್ಲಿ ಕಳಂಕಿತರೆಂಬ ಹಣೆಪಟ್ಟಿ ಅಂಟಿಕೊಂಡರೆ ಇಂಥ ಅವಕಾಶಗಳಿಂದ ವಂಚಿತವಾಗಬೇಕಾಗುತ್ತದೆ ಎಂಬುದನ್ನು ಮನಗಂಡು ಕಾರ್ಯೋನ್ಮುಖರಾಗಬೇಕಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 2

  Sad
 • 0

  Frustrated
 • 7

  Angry

Comments:

0 comments

Write the first review for this !