ಮಂಗನ ಕಾಯಿಲೆ: ಸ್ಥಳಾಂತರಕ್ಕೆ ಸಂತ್ರಸ್ತರ ಮನವಿ

ಮಂಗಳವಾರ, ಏಪ್ರಿಲ್ 23, 2019
32 °C
ಮಂಗನ ಕಾಯಿಲೆಪೀಡಿತ ಅರಲಗೋಡು ಸುತ್ತಮುತ್ತಲ ಪ್ರದೇಶದ ಗ್ರಾಮಸ್ಥರ ತಳಮಳ

ಮಂಗನ ಕಾಯಿಲೆ: ಸ್ಥಳಾಂತರಕ್ಕೆ ಸಂತ್ರಸ್ತರ ಮನವಿ

Published:
Updated:
Prajavani

ಶಿವಮೊಗ್ಗ: ಮಂಗನ ಕಾಯಿಲೆ ಹಾವಳಿಗೆ ತತ್ತರಿಸಿರುವ ಸಾಗರ ತಾಲ್ಲೂಕು ಅರಲಗೋಡು ಗ್ರಾಮ ವ್ಯಾಪ್ತಿಯ ಜನರು ತಮ್ಮನ್ನು ಗ್ರಾಮಗಳಿಂದ ಸ್ಥಳಾಂತರಿಸುವಂತೆ ಕೋರಿ ಸರ್ಕಾರದ ಮೊರೆ ಹೋಗಿದ್ದಾರೆ.

ನಾಲ್ಕೂವರೆ ತಿಂಗಳ ಹಿಂದೆ ಕಾಣಿಸಿಕೊಂಡ ಮಂಗನ ಕಾಯಿಲೆಗೆ ಶರಾವತಿ ಅಭಯಾರಣ್ಯ ಪ್ರದೇಶದ ಅರಲಗೋಡು, ನೆಲ್ಲಿಮಕ್ಕಿ, ಮರಬಿಡಿ, ಚೇಗಳ, ಸಂಪ, ಬಣ್ಣುಮನೆ, ಕಂಚಿಕೈ, ಕಾಳಮಂಜಿ, ಇಟಿಗೆ, ಐತುಮನೆ, ಮರಾಠಿಕೇರಿ, ಮಜರೆಗಳ 150ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟ ಅನುಭವಿಸಿವೆ. ಏಪ್ರಿಲ್‌ನಲ್ಲೂ ಮಂಗಗಳ ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡರೂ ಹೊಸದಾಗಿ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಬೆಳೆಯುತ್ತಲೇ ಇದೆ.

‘ಅರಣ್ಯ ವ್ಯಾಪ್ತಿಯಿಂದ ಹೊರಗೆ ಗ್ರಾಮಗಳನ್ನು ಸ್ಥಳಾಂತರಿಸಬೇಕು. ಅಲ್ಲಿನ ಜಮೀನು, ತೋಟಗಳ ಬದಲು ಪರ್ಯಾಯ ಭೂಮಿ ಮಂಜೂರು ಮಾಡಬೇಕು. ಹೊಸದಾಗಿ ಕೃಷಿ ಚಟುವಟಿಕೆ ಕೈಗೊಳ್ಳಲು, ತೋಟ ಮಾಡಲು, ಬದುಕು ಕಟ್ಟಿಕೊಳ್ಳಲು ಪರಿಹಾರದ ಪ್ಯಾಕೇಜ್‌ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

‘ಹಿರೇಭಾಸ್ಕರ ಅಣೆಕಟ್ಟೆ ನಿರ್ಮಿಸಿದಾಗ ಹಿರಿಯರು ಅರಲಗೋಡಿಗೆ ಸ್ಥಳಾಂತರಗೊಂಡಿದ್ದರು. 10 ಎಕರೆ ತೋಟ, 2 ಎಕರೆ ಗದ್ದೆ ಇದೆ. ಈಗ ಮಂಗನ ಕಾಯಿಲೆ ಕಾಣಿಸಿಕೊಂಡ ಮೇಲೆ ಎಲ್ಲವೂ ಪಾಳು ಬಿದ್ದಿವೆ’ ಎಂದು ಭಾವುಕರಾದರು 57 ವರ್ಷದ ಕೃಷಿಕ ಮಹಾಬಲಗಿರಿ.

ಮನವೊಲಿಕೆಗೆ ಅಭಿಯಾನ: ಮಳೆ ಬೀಳುವುದು ವಿಳಂಬವಾದರೆ ಇನ್ನೂ ಸಾಕಷ್ಟು ಜನರು ಮಂಗನ ಕಾಯಿಲೆಗೆ ಬಲಿಯಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿಯಾದರೂ ಜನರು ಬೇರೆ ಕಡೆ ಸ್ಥಳಾಂತರಗೊಳ್ಳಬೇಕು ಎಂದು ಅಲ್ಲಿನ ಗ್ರಾಮಗಳ ಜನರ ಮನವೊಲಿಸಲು ವೃಕ್ಷಲಕ್ಷ ಆಂದೋಲನ ಅಭಿಯಾನ ಆರಂಭಿಸಿದೆ.

ಅಭಿಯಾನಕ್ಕೆ ಹಲವು ಕುಟುಂಬಗಳು ಒಪ್ಪಿಗೆ ಸೂಚಿಸಿದ್ದು, ಸೊರಬ, ಸಾಗರ ತಾಲ್ಲೂಕಿನ ಹಲವೆಡೆ ಅವರಿಗೆ ತಾತ್ಕಾಲಿಕ ವಸತಿ, ಮೂಲ ಸೌಕರ್ಯ ಕಲ್ಪಿಸಲು ವಿವಿಧ ಸಂಘಟನೆಗಳವರು, ಹಲವು ಗ್ರಾಮಗಳ ಜನರು ಮುಂದೆ ಬಂದಿದ್ದಾರೆ. ಸಾಗರ ತಾಲ್ಲೂಕಿನ ಕುಂಟುಗೋಡು ಪುಣ್ಯಕೋಟಿ ಗೋಶಾಲೆ ನೆಲೆ ಕಲ್ಪಿಸಲು ಒಪ್ಪಿಗೆ ನೀಡಿದೆ. ವರದಳ್ಳಿಯ ಶ್ರೀಧರಾಶ್ರಮ ಮೇವು ಪೂರೈಸಲು ಮುಂದೆ ಬಂದಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !