ಭಾರತದಲ್ಲಿ 63 ದಶಲಕ್ಷ ಜನರಿಗೆ ಶ್ರವಣೇಂದ್ರಿಯ ಸಮಸ್ಯೆ

7
ಶೀಘ್ರ ಪತ್ತೆ ಹಚ್ಚಿದರೆ ದೀರ್ಘಕಾಲದ ಶ್ರವಣದೋಷಕ್ಕೆ ‍ಪರಿಹಾರ : ಕ್ರಿಕೆಟಿಗ ಬ್ರೆಟ್ಲಿ

ಭಾರತದಲ್ಲಿ 63 ದಶಲಕ್ಷ ಜನರಿಗೆ ಶ್ರವಣೇಂದ್ರಿಯ ಸಮಸ್ಯೆ

Published:
Updated:
Deccan Herald

ಬೆಂಗಳೂರು: ‘ಶ್ರವಣ ಸಮಸ್ಯೆ ಬಗ್ಗೆ ಅರಿವು ಮೂಡಿಸಿ ಶೀಘ್ರ ಪತ್ತೆ ಹಚ್ಚಿದರೆ ದೀರ್ಘಕಾಲದ ಶ್ರವಣದೋಷವನ್ನು ತಡೆಗಟ್ಟಬಹುದು’ ಎಂದು ಜಾಗತಿಕ ವಾಕ್‌ ಶ್ರವಣ ರಾಯಭಾರಿಯೂ ಆಗಿರುವ ಕ್ರಿಕೆಟಿಗ ಬ್ರೆಟ್‌ ಲೀ ಹೇಳಿದರು.

ಆರೋಗ್ಯ ಇಲಾಖೆ ವತಿಯಿಂದ ವಿಕಾಸಸೌಧದಲ್ಲಿ ಸೋಮವಾರ ನಡೆದ ‘ನವಜಾತ ಶಿಶುವಿನ ಶ್ರವಣದೋಷ ತಪಾಸಣಾ ಕಾರ್ಯಾಗಾರ’ದಲ್ಲಿ ಮಾತನಾಡಿದ ಅವರು, ‘ಆರೋಗ್ಯ ವ್ಯವಸ್ಥೆಯಲ್ಲಿ ನವಜಾತ ಶಿಶುವಿನ ಶ್ರವಣ ದೋಷ ತಪಾಸಣೆಯನ್ನು ಕಡ್ಡಾಯವಾಗಿ ಮಾಡಬೇಕು. ದೋಷದ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇಂತಹ ಕಾರ್ಯಾಗಾರ ಸಹಕಾರಿಯಾಗಿದೆ’ ಎಂದರು.

ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ ಭಾರತದಲ್ಲಿ 63 ದಶಲಕ್ಷ ಜನರು ಶ್ರವಣೇಂದ್ರಿಯಗಳ ತೀವ್ರ ದುರ್ಬಲತೆಯಿಂದ ಬಳಲುತ್ತಿದ್ದಾರೆ. ಇದು ಒಟ್ಟು ಜನಸಂಖ್ಯೆಯ ಶೇ 6.3ರಷ್ಟು. ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಘಟನೆಯ (ಎನ್‌ಎಸ್‌ಎಸ್‌ಒ) 2001ರ ವರದಿ ಪ್ರಕಾರ ಒಂದು ಲಕ್ಷ ಜನರ ಪೈಕಿ 291 ಮಂದಿ ಶ್ರವಣದೋಷ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದ ರಾಜ್ಯ ನೋಡಲ್‌ ಅಧಿಕಾರಿ ಡಾ. ರಜನಿ ತಿಳಿಸಿದರು.

ರಾಜ್ಯದಲ್ಲಿ 2017–18ರಲ್ಲಿ 31,208 ಜನರ ಶ್ರವಣ ಪರೀಕ್ಷೆ ನಡೆಸಲಾಗಿದೆ. ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ 30 ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿದ್ದು, ದೋಷ ಕಂಡುಬಂದ 0–14 ವಯೋಮಾನದ ಮಕ್ಕಳಿಗೆ ಸರ್ವಶಿಕ್ಷಣ ಅಭಿಯಾನ ಮತ್ತು ಅಂಗಲವಿಕಲರ ಅಭಿವೃದ್ಧಿ ಇಲಾಖೆ ಮೂಲಕ ಶ್ರವಣ ಯಂತ್ರಗಳನ್ನು ನೀಡಲಾಗುತ್ತದೆ. ಶಸ್ತ್ರ ಚಿಕಿತ್ಸೆ ಅಗತ್ಯ ಇರುವವರಿಗೆ ಅದನ್ನೂ ನಡೆಸಲಾಗುತ್ತಿದೆ ಎಂದರು.

ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ. ರತನ್‌ ಕೇಲ್ಕರ್‌ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !