ಜಲಾಯನ ವ್ಯಾಪ್ತಿ ಒಂದು ವಾರದಿಂದ ಮಳೆ: ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಆರಂಭ

ಬುಧವಾರ, ಜೂನ್ 19, 2019
28 °C

ಜಲಾಯನ ವ್ಯಾಪ್ತಿ ಒಂದು ವಾರದಿಂದ ಮಳೆ: ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಆರಂಭ

Published:
Updated:
Prajavani

ಕುಶಾಲನಗರ : ಉತ್ತರ ಕೊಡಗಿನ ರೈತರ ಜೀವನಾಡಿಯಾದ ಹಾರಂಗಿ ಜಲಾಶಯಕ್ಕೆ ನೀರನ ಒಳಹರಿವು ಆರಂಭಗೊಂಡಿದ್ದು, ಇದೀಗ ನೀರಿನ ಕೊರತೆಯಿಂದ ಭಣಗುಡುತ್ತಿದ್ದ ಜಲಾಶಯಕ್ಕೆ ಜೀವಕಳೆ ಬಂದಿದೆ.

ಹಾರಂಗಿ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ 96 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಜೂನ್ ನ ಎರಡನೇ ವಾರದಲ್ಲಿ ಮುಂಗಾರು ಮಳೆ ವಾಡಿಕೆಯಂತೆ ಆರಂಭಗೊಂಡಿತು. ನಂತರ ಆಗಸ್ಟ್ ನಲ್ಲಿ ತೀವ್ರಗೊಂಡ ಮಳೆಯಿಂದ ಪ್ರಾಕೃತಿಕ ವಿಕೋಪ ಉಂಟಾಗಿತ್ತು. ಜಲಪ್ರಳಯ ಸೃಷ್ಟಿಯಾಗಿ ಹಾರಂಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿತು.

ಪ್ರಸಕ್ತ ವರ್ಷ ಮೇ ಎರಡನೇ ವಾರದಿಂದ ಅಶ್ಲೇಷ ಮಳೆಯ ಆರ್ಭಟ ಜೋರಾಗಿದ್ದು, ಗುಡುಗು, ಮಿಂಚು ಸಹಿತ ಆಲಿಕಲ್ಲಿನ ಮಳೆಯಾಗುತ್ತಿದೆ. ಇದರಿಂದ ಬೇಸಿಗೆಯಲ್ಲಿ ಸಂಪೂರ್ಣ ಕ್ಷೀಣಗೊಂಡು ಕೆರೆ ಮಾದರಿಯಲ್ಲಿ ಗೋಚರಿಸುತ್ತಿದ್ದ ಅಣೆಕಟ್ಟೆಯ ಹಳ್ಳದಿಣ್ಣೆಗಳು ಭರ್ತಿಯಾಗಲು ಆರಂಭಿಸಿವೆ.

ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದ್ದು, ಇದೀಗ 1.554 ಟಿಎಂಸಿ ನೀರು ಸಂಗ್ರಹಗೊಂಡಿದೆ. ಸಹಜವಾಗಿ, ಅಚ್ಚುಕಟ್ಟು ವ್ಯಾಪ್ತಿಯ ರೈತರ ಮೊಗದಲ್ಲಿ ಮಂದಹಾಸ ಕಂಡುಬಂದಿದೆ. ಈ ಜಲಾಶಯದಿಂದ ಜಿಲ್ಲೆಯ ಸುಮಾರು 12 ಗ್ರಾಮಗಳು ಪ್ರಯೋಜನ ಪಡೆಯಲಿದ್ದು, ಜೊತೆಗೆ ಮೈಸೂರು ಮತ್ತು ಹಾಸನ ಜಿಲ್ಲೆಗಳ ಗಡಿ ಗ್ರಾಮಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

ಏರುತ್ತಿರುವ ನೀರಿನ ಮಟ್ಟ

ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ನೀರಿನ ಒಳ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ. 2859 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಶುಕ್ರವಾರ ಬೆಳಿಗ್ಗೆ 6 ಗಂಟೆ 2805.76 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಜಲಾಶಯಕ್ಕೆ 96 ಕ್ಯುಸೆಕ್‌ ನೀರಿನ ಒಳಹರಿವು ಇದ್ದು, ನದಿಗೆ 25 ಕ್ಯುಸೆಕ್‌ ಹಾಗೂ ನಾಲೆಗೆ 20 ಕ್ಯುಸೆಕ್‌ ನೀರು ಹರಿಬಿಡಲಾಗಿದೆ. ಇದೀಗ ಜಲಾಶಯದಲ್ಲಿ 1.554 ಟಿಎಂಸಿ ಅಡಿಯಷ್ಟು ನೀರು ಸಂಗ್ರಹಗೊಂಡಿದೆ.

ಕೃಷಿ ಚಟುವಟಿಕೆ ಬಿರುಸು: ಬೇಸಿಗೆ ಹಂಗಾಮಿನ ಕೃಷಿ ಚಟುವಟಿಕೆಯಲ್ಲಿ ರೈತರು  ತಮ್ಮನ್ನು ತೊಡಗಿಸಿದ್ದು, ಉಳುಮೆ ಕಾರ್ಯದ ಜೊತೆಗೆ, ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಬೇಸಿಗೆ ಬೆಳೆಗಳಾದ ರಾಗಿ, ಮುಸುಕಿನ ಜೋಳ, ಶುಂಠಿ ಹಾಗೂ ದ್ವಿದಳ ಧಾನ್ಯಗಳ ಬೆಳೆಗಳನ್ನು ಬೆಳೆಯಲು ರೈತರು ಸಿದ್ಧತೆ ಕೈಗೊಂಡಿದ್ದಾರೆ. ಇದೀಗ ಬೀಳುತ್ತಿರುವ ಮಳೆ ಕೂಡ ರೈತರ ಬೇಸಿಗೆ ಹಂಗಾಮಿಗೆ ಸಹಕಾರಿಯಾಗಿದ್ದು ರೈತರ ಮನದಲ್ಲಿ ಸಂತಸ ಉಂಟುಮಾಡಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !