ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ಗೆ ನೂತನ ಮುಖ್ಯ ನ್ಯಾಯಮೂರ್ತಿ

Last Updated 10 ಮೇ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬಾಂಬೆ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯಾಗಿದ್ದ ಅಭಯ್‌ ಶ್ರೀನಿವಾಸ್ ಓಕ್‌ ಅವರು ಶುಕ್ರವಾರ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಓಕ್‌ ಅವರಿಗೆ ಪ್ರಮಾಣ ವಚನ ಬೋಧಿಸಿದರು. ವೇದಿಕೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದರು.

ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ, ಕರ್ನಾಟಕ ಗಡಿ ಮತ್ತು ರಾಜ್ಯ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ಎಲ್‌.ಮಂಜುನಾಥ್‌, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಿ.ಎಚ್‌.ವಘೇಲಾ, ಅಡ್ವೊಕೇಟ್‌ ಜನರಲ್ ಉದಯ ಹೊಳ್ಳ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಸೇರಿದಂತೆ ನ್ಯಾಯಮೂರ್ತಿಗಳು, ಗಣ್ಯರು, ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಈ ಮೊದಲು ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ದಿನೇಶ್‌ ಮಾಹೇಶ್ವರಿ ಅವರು, 2019ರ ಜನವರಿ 18ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದನ್ನೋತಿ ಹೊಂದಿದರು. ಅಂದಿನಿಂದ ಎಲ್‌.ನಾರಾಯಣ ಸ್ವಾಮಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಪರಿಚಯ: ಓಕ್‌ ಅವರು 1960 ಮೇ 25ರಂದು ಜನಿಸಿದ್ದು, ಬಾಂಬೆ ವಿಶ್ವವಿದ್ಯಾಲಯದಿಂದ ಬಿಎಸ್ಸಿ, ಎಲ್‌ಎಲ್‌.ಎಂ ಪದವಿ ಪಡೆದಿದ್ದಾರೆ. 1983ರ ಜೂನ್‌ 28ರಂದು ವಕೀಲರಾಗಿ ನೋಂದಣಿ ಮಾಡಿಸಿಕೊಂಡ ಅವರು ಥಾಣೆ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ತಂದೆ ಶ್ರೀನಿವಾಸ ಡಬ್ಲ್ಯು ಓಕ್‌ ಅವರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ವೃತ್ತಿ ಆರಂಭಿಸಿದರು.

ನಂತರ 1985–86ರಲ್ಲಿ ವಿ.ಪಿ.ಟಿಪ್ನಿಸ್‌ (ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಲೋಕಾಯುಕ್ತರು) ಕಚೇರಿಯಲ್ಲಿ ವೃತ್ತಿ ಮುಂದುವರಿಸಿದರು. 2003ರ ಆಗಸ್ಟ್‌ 29ರಂದು ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT