ಜಂಟಿ ‘ಆಪರೇಷನ್‌’: ಬಿಜೆಪಿ ಕಕ್ಕಾಬಿಕ್ಕಿ

7
ವಲಸಿಗರಿಗೆ ಮಣೆ: ಕಮಲ ಪಾಳಯದಲ್ಲಿ ಅಸಮಾಧಾನ

ಜಂಟಿ ‘ಆಪರೇಷನ್‌’: ಬಿಜೆಪಿ ಕಕ್ಕಾಬಿಕ್ಕಿ

Published:
Updated:

ಬೆಂಗಳೂರು: ಮಂಡ್ಯ ಲೋಕಸಭಾ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ವಲಸಿಗರಿಗೆ ಮಣೆ ಹಾಕಿರುವುದು ಬಿಜೆಪಿ ಪಾಳಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಶಾಸಕ ಆರ್‌.ಅಶೋಕ್‌ ಹಾಗೂ ಮಾಜಿ ಸಚಿವ ಸಿ.‍ಪಿ.ಯೋಗೀಶ್ವರ ಅವರ ‘ಆಪರೇಷನ್‌’ ಕಾರ್ಯಾಚರಣೆಗೆ ಪಕ್ಷದ ಮುಖಂಡರೇ ಕಕ್ಕಾಬಿಕ್ಕಿಯಾಗಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ನಿವೃತ್ತರಾದ ಡಾ. ಸಿದ್ಧರಾಮಯ್ಯ ಅವರು ಅಶೋಕ್‌ ಸಮ್ಮುಖದಲ್ಲಿ ಬಿಜೆಪಿಗೆ ಗುರುವಾರ ಸೇರ್ಪಡೆಯಾದರು.

ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅವರು, ಮಾಜಿ ಶಾಸಕ ದೊಡ್ಡಬೋರೇಗೌಡ ಅವರ ಅಣ್ಣನ ಮಗ. ಮಂಡ್ಯ ಕ್ಷೇತ್ರಕ್ಕೆ 12 ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದರು. ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಪಕ್ಷದ ಕಚೇರಿಯಲ್ಲಿ ಬುಧವಾರ ಸುದೀರ್ಘ ಸಮಾಲೋಚನೆ ನಡೆಸಲಾಗಿತ್ತು. ಕಣಕ್ಕೆ ಇಳಿಯಲು ಸಿದ್ಧತೆ ಮಾಡಿಕೊಳ್ಳುವಂತೆ ವಿಧಾನ ‍ಪರಿಷತ್‌ನ ಮಾಜಿ ಸದಸ್ಯ ಅಶ್ವತ್ಥನಾರಾಯಣ ಅವರಿಗೆ ಸೂಚಿಸಲಾಗಿತ್ತು. ಮರುದಿನವೇ ಸಿದ್ಧರಾಮಯ್ಯ ಅವರನ್ನು ಕರೆ ತರಲಾಗಿದೆ.

ರಾಮನಗರ ಕ್ಷೇತ್ರದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರುದ್ರೇಶ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ವಾರದ ಹಿಂದೆ ರುದ್ರೇಶ್‌ ಅವರನ್ನು ಕರೆಸಿ ಮಾತನಾಡಿದ್ದರು. ಸ್ಪರ್ಧೆಗೆ ಸಿದ್ಧರಾಗಿರುವಂತೆ ಸೂಚಿಸಿದ್ದರು. ಈ ನಡುವೆ, ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟ ಬಗ್ಗೆ ರಾಮನಗರ ಜಿಲ್ಲಾ ಕಾಂಗ್ರೆಸ್‌ನಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಸಿ.ಎಂ. ಲಿಂಗಪ್ಪ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ಪುತ್ರ ಎಲ್‌.ಚಂದ್ರಶೇಖರ್ ಟಿಕೆಟ್‌ ನಿರೀಕ್ಷೆಯಲ್ಲಿದ್ದರು. ಅವರು ಬುಧವಾರ ಬಿಜೆಪಿ ಪಾಳಯಕ್ಕೆ ಜಿಗಿದಿದ್ದಾರೆ.

‘ಸಿದ್ಧರಾಮಯ್ಯ ಹಾಗೂ ಎಲ್‌.ಚಂದ್ರಶೇಖರ್ ಅವರು, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿ
ಕೊಂಡವರು. ಅಂತಹವರನ್ನು ಕರೆ ತಂದು ಟಿಕೆಟ್‌ ನೀಡುವ ಅಗತ್ಯವೇನಿದೆ’ ಎಂದು ಕೆಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ಪ್ರಮುಖರ ಸಭೆ ಮಂಗಳವಾರ ಸೇರಿತ್ತು. ಮೂರು ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಆಯ್ಕೆ ಮಾಡಿ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿತ್ತು. ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿ ಅಭ್ಯರ್ಥಿಗಳ ಆಯ್ಕೆ ಅಧಿಕಾರವನ್ನು ಯಡಿಯೂರಪ್ಪ ಅವರಿಗೆ ನೀಡಿತ್ತು. ಈಗ ಎರಡೂ ಕ್ಷೇತ್ರಗಳಲ್ಲಿ ‘ಕೈ’ ಕಟ್ಟಾಳುಗಳ ‘ಆಪರೇಷನ್‌’ ನಡೆದಿದೆ. ಮಂಡ್ಯ ಕ್ಷೇತ್ರದಲ್ಲಿ ಆರ್‌.ಅಶೋಕ್‌ ಹಾಗೂ ರಾಮನಗರದಲ್ಲಿ ಯೋಗೀಶ್ವರ ಅವರನ್ನು ಕಣಕ್ಕೆ ಇಳಿಸಬೇಕು ಎಂಬುದು ಯಡಿಯೂರಪ್ಪ ಅವರ ಅಭಿಲಾಷೆಯಾಗಿತ್ತು. ಇವರಿಬ್ಬರೂ ಸ್ಪರ್ಧೆಯಿಂದ ತಪ್ಪಿಸಿಕೊಳ್ಳಲು ವಲಸಿಗರಿಗೆ ಮಣೆ ಹಾಕಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.

ಇದೇ ಮೊದಲಲ್ಲ: ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಸ್ಪರ್ಧಿಸಲು ಎ.ಎಚ್‌.ಆನಂದ್‌ ಅವರಿಗೆ ಟಿಕೆಟ್‌ ನೀಡಲು ಹೆಚ್ಚಿನ ಮುಖಂಡರು ಒಲವು ವ್ಯಕ್ತಪಡಿಸಿದ್ದರು. ಆದರೆ, ಅಶೋಕ್‌ ಹಾಗೂ ಶಾಸಕ ವಿ.ಸೋಮಣ್ಣ ಅವರು ಟಿಕೆಟ್‌ ಘೋಷಣೆಗೆ ಹಿಂದಿನ ದಿನ, ಜೆಡಿಎಸ್‌ನಲ್ಲಿದ್ದ ಅ.ದೇವೇಗೌಡ ಅವರನ್ನು ಪಕ್ಷಕ್ಕೆ ಕರೆತಂದು ಅವರಿಗೆ ಟಿಕೆಟ್‌ ಸಿಗುವಂತೆ ಮಾಡಿದ್ದರು. ಈ ನಡೆಗೆ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು.

 

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 3

  Frustrated
 • 8

  Angry

Comments:

0 comments

Write the first review for this !