ಮುಖ್ಯಮಂತ್ರಿಯಿಂದ ದೂರವಾಣಿ ಕದ್ದಾಲಿಕೆ

7
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪ

ಮುಖ್ಯಮಂತ್ರಿಯಿಂದ ದೂರವಾಣಿ ಕದ್ದಾಲಿಕೆ

Published:
Updated:

ಬೆಂಗಳೂರು: ‘ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್‌..ಡಿ. ಕುಮಾರಸ್ವಾಮಿ ಅವರು ಎಲ್ಲ ಶಾಸಕರ ದೂರವಾಣಿ ಕದ್ದಾಲಿಕೆ ಮಾಡಿಸುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟದ ಶಾಸಕರ ಮೇಲೆ ಅವರಿಗೆ ಅನುಮಾನ ಇದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಶಾಸಕ ಎಂ.ಬಿ.‍ ಪಾಟೀಲ, ವಿರೋಧ ಪಕ್ಷದ ನಾಯಕ ಬಿ. ಎಸ್‌.ಯಡಿಯೂರಪ್ಪ ಅವರ ಚಟುವಟಿಕೆಗಳ ಮೇಲೂ ನಿಗಾ ಇಟ್ಟಿದ್ದಾರೆ’ ಎಂದರು.

‘ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆಯ ಮೇರೆಗೆ ಎಲ್ಲ ಶಾಸಕರನ್ನು ಗೂಟದಲ್ಲಿ ಕಟ್ಟಿ ಹಾಕಿದ್ದಾರೆ. ಟಗರು ಯಾವಾಗ ಗೂಟವನ್ನು ಕಿತ್ತು ತಪ್ಪಿಸಿಕೊಂಡು ಬರುತ್ತದೋ ಗೊತ್ತಿಲ್ಲ’ ಎಂದರು.

‘ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ನಡುವೆ ಸಮನ್ವಯ ಇಲ್ಲ. ಒಬ್ಬರ ಮುಖ ಇನ್ನೊಬ್ಬರು ನೋಡದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಶೀಘ್ರ ಪತನವಾಗಲಿದೆ’ ಎಂದರು.

‘ಇದೊಂದು ದಿನಗೂಲಿ ಸರ್ಕಾರ. ನಿತ್ಯದ ಯೋಜನೆಗಳನ್ನು ರೂಪಿಸುತ್ತಾ ಕಾಲ ಕಳೆಯುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕರಾವಳಿ ಹಾಗೂ ಮಲೆನಾಡಿನಲ್ಲಿ ಜಲಪ್ರಳಯ ಉಂಟಾಗಿದೆ. ಆದರೆ, ಮುಖ್ಯಮಂತ್ರಿ ತೀರ್ಥಯಾತ್ರೆಯಲ್ಲಿ ತೊಡಗಿದ್ದಾರೆ’ ಎಂದು ಕಿಡಿಕಾರಿದರು.

‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಶುಕ್ರವಾರ ಕಡೆಯ ದಿನ. ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಳೆ ಕಾರಣದಿಂದ ಚುನಾವಣೆ ನಡೆಸುವ ಸ್ಥಿತಿ ಇಲ್ಲ. ಹೀಗಾಗಿ, ಚುನಾವಣೆ ಮುಂದೂಡಬೇಕು’ ಎಂದು ಅವರು ಆಗ್ರಹಿಸಿದರು.

‘ಚಿಕ್ಕಮಗಳೂರು ಜಿಲ್ಲೆಯಲ್ಲಿ 34 ವರ್ಷಗಳಲ್ಲೇ ದಾಖಲೆ ಮಳೆಯಾಗಿದೆ. ಆದರೆ, ಮಳೆ ಹಾನಿ ನಿರ್ವಹಣೆಗೆ ಯಾವುದೇ ಯೋಜನೆ ರೂಪಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿ ಮೇಲ್ವಿಚಾರಣೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !