7
ಪಿ.ಯು. ಮಂಡಳಿ ಬಗ್ಗೆ ಉಪನ್ಯಾಸಕರ ಅಸಮಾಧಾನ

ಮೌಲ್ಯಮಾಪನ ಮುಗಿದು 3 ತಿಂಗಳಾದರೂ ಭತ್ಯೆ ಇಲ್ಲ

Published:
Updated:

ಹೊಸಪೇಟೆ: ದ್ವಿತೀಯ ಪಿ.ಯು.ಸಿ. ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ರಾಜ್ಯದ 12 ಸಾವಿರಕ್ಕೂ ಅಧಿಕ ಉಪನ್ಯಾಸಕರಿಗೆ ಇದುವರೆಗೂ ಭತ್ಯೆ ನೀಡಿಲ್ಲ.

ಎರಡು ವಾರಗಳವರೆಗೆ ನಡೆದ ಮೌಲ್ಯಮಾಪನ ಕೆಲಸದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳ ಉಪನ್ಯಾಸಕರು ಪಾಲ್ಗೊಂಡಿದ್ದರು. ಮಾರ್ಚ್‌ 20ಕ್ಕೇ ಮೌಲ್ಯಮಾಪನ ಮುಗಿದಿದ್ದು, ಇದುವರೆಗೂ ಭತ್ಯೆ ಸಿಕ್ಕಿಲ್ಲ. ಅವರಿಗೆ ತಲಾ ₹ 20 ಸಾವಿರದಂತೆ ಭತ್ಯೆ ಸಿಗಬೇಕಿದೆ.

ಈ ಹಿಂದೆ, ಮೌಲ್ಯಮಾಪನದ ಕೊನೆಯ ದಿನವೇ ಆಯಾ ಉಪನ್ಯಾಸಕರಿಗೆ ಚೆಕ್‌ ಮೂಲಕ ಭತ್ಯೆ ಕೊಡಲಾಗುತ್ತಿತ್ತು. ಈಗ ಪಿ.ಯು ಮಂಡಳಿ ಆರ್‌.ಟಿ.ಜಿ.ಎಸ್‌. ಮೂಲಕ ಪಾವತಿಸಲು ಮುಂದಾಗಿದೆ. ಆದರೆ, ಇದುವರೆಗೆ ಯಾರಿಗೂ ಭತ್ಯೆ ಕೊಟ್ಟಿಲ್ಲ. ಇದೇ 29ರಿಂದ ಪೂರಕ ಪರೀಕ್ಷೆಗಳು ಆರಂಭವಾಗಿದ್ದು, ಮತ್ತೆ ಆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಬೇಕಿದೆ.

ಅತಿ ಕಡಿಮೆ ಸಂಬಳದಲ್ಲಿ ದುಡಿಯುವ ಅನುದಾನ ರಹಿತ ಕಾಲೇಜಿನ ಉಪನ್ಯಾಸಕರು ಬೇರೆ ನಗರಗಳಿಗೆ ಹೋಗಿ, ಹೋಟೆಲ್‌ಗಳಲ್ಲಿ ಉಳಿದುಕೊಂಡು ಕೆಲಸ ಮಾಡಿದ್ದಾರೆ. ಸಕಾಲಕ್ಕೆ ಹಣ ಪಾವತಿಯಾಗದೇ ಅವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮೌಲ್ಯಮಾಪನದ ಭತ್ಯೆಯನ್ನು ಬಡ್ಡಿ ಸಮೇತ ಕೊಡದಿದ್ದ ಪಕ್ಷದಲ್ಲಿ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಲು ಚಿಂತನೆ ನಡೆಸಿದ್ದಾರೆ.

‘ಉಪನ್ಯಾಸಕರು ಅತ್ಯಂತ ದಕ್ಷತೆಯಿಂದ ಮೌಲ್ಯಮಾಪನ ಕೆಲಸ ನಿರ್ವಹಿಸಿದ್ದಾರೆ. ಇದಕ್ಕೂ ಮುನ್ನ ಅಚ್ಚುಕಟ್ಟಾಗಿ ಪರೀಕ್ಷೆಗಳನ್ನು ನಡೆಸಿದ್ದಾರೆ. ಫಲಿತಾಂಶ ವೃದ್ಧಿಯಾಗಲು ಶ್ರಮಿಸಿದ್ದಾರೆ. ಅವರಿಂದಾಗಿಯೇ ಪಿ.ಯು. ಮಂಡಳಿಗೆ ಪ್ರಶಂಸೆಯ ಸುರಿಮಳೆ ಹರಿದು ಬಂದಿದೆ. ಆದರೆ, ಮಂಡಳಿ ಮಾತ್ರ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅನುದಾನರಹಿತ ಕಾಲೇಜಿನ ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರ್‌.ಟಿ.ಜಿ.ಎಸ್‌. ಮೂಲಕ ಹಣ ಪಾವತಿಸುವುದಾಗಿ ಮಂಡಳಿ ತಿಳಿಸಿತ್ತು. ಆದರೆ, ಇದುವರೆಗೂ ನೀಡಿಲ್ಲ. ಮೌಲ್ಯಮಾಪನದ ಕೊನೆಯ ದಿನ ಸ್ಥಳದಲ್ಲೇ ಚೆಕ್‌ ಕೊಡುತ್ತಿದ್ದ ಈ ಹಿಂದಿನ ವ್ಯವಸ್ಥೆಯೇ ಸರಿಯಾಗಿತ್ತು’ ಎಂದು ಕಮಲಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ದಯಾನಂದ ಕಿನ್ನಾಳ್‌, ಟಿ.ಬಿ. ಡ್ಯಾಂ ಪಿಯು ಕಾಲೇಜಿನ ಉಪನ್ಯಾಸಕ ಸಮದ್‌ ಕೊಟ್ಟೂರು ಅಭಿಪ್ರಾಯಪಟ್ಟರು.

ಈ ಕುರಿತು ಪಿ.ಯು. ಮಂಡಳಿ ನಿರ್ದೇಶಕಿ ಸಿ. ಶಿಖಾ ಅವರನ್ನು ಸಂಪರ್ಕಿಸಿದಾಗ, ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !