ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಜ್ಯೇಷ್ಠತಾ ಪಟ್ಟಿಗೆ ಮುನ್ನವೇ ಎಂಜಿನಿಯರುಗಳ ಬಡ್ತಿಗೆ ತರಾತುರಿ ಪ್ರಕ್ರಿಯೆ

Last Updated 22 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬಡ್ತಿ ಮೀಸಲಾತಿ ಕಾಯ್ದೆ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರಿಗೆ ಬಡ್ತಿ ನೀಡಲು ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸುವ ಮುನ್ನವೇ 331 ಎಂಜಿನಿಯರ್‌ಗಳಿಗೆ ಬಡ್ತಿ ನೀಡಲು ಲೋಕೋಪಯೋಗಿ ಇಲಾಖೆ ಸಿದ್ಧತೆ ನಡೆಸಿದೆ.

‘ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಯಿಂದ ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡಲು ಪರಿಶೀಲನೆ ನಡೆಸಲಾಗುತ್ತಿದೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ಸೇವಾ ವಿವರ, ಇತ್ತೀಚಿನ ಐದು ವರ್ಷಗಳ ಕಾರ್ಯನಿರ್ವಹಣಾವರದಿಗಳು ಹಾಗೂ ಲಭ್ಯವಿರುವ ಇಲಾಖಾ ವಿಚಾರಣಾ ಮಾಹಿತಿಯನ್ನು ಕೂಡಲೇ ಒದಗಿಸಬೇಕು’ ಎಂದು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರು ಮುಖ್ಯ ಎಂಜಿನಿಯರ್‌ಗಳಿಗೆ ಗುರುವಾರ ಸೂಚನೆ ನೀಡಿದ್ದಾರೆ. ಸಚಿವ ಎಚ್‌.ಡಿ.ರೇವಣ್ಣ ನಿರ್ದೇಶನದ ಮೇರೆಗೆ ಪ್ರಕ್ರಿಯೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

ಇಲಾಖೆಯಲ್ಲಿ ಕಾರ್ಯಪಾಲಕ ಎಂಜಿನಿಯರ್‌ಗಳ ವೃಂದ ಬಲ 520. ಈಗಾಗಲೇ 470 ಕಾರ್ಯಪಾಲಕ ಎಂಜಿನಿಯರ್‌ಗಳು ಇದ್ದಾರೆ. ಗರಿಷ್ಠ 50 ಮಂದಿಗಷ್ಟೇ ಬಡ್ತಿ ನೀಡಬಹುದು ಅಷ್ಟೇ. ಆದರೆ, ಬಡ್ತಿ ಪಡೆಯುವವರ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಶುಕ್ರವಾರ ಮತ್ತೆ 25 ಮಂದಿಯ ಹೆಸರನ್ನು ಸೇರಿಸುವ ಪ್ರಕ್ರಿಯೆ ಶುರುವಾಗಿದೆ ಎಂದು ಹಿರಿಯ ಅಧಿಕಾರಿ ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿ.ಕೆ.ಪವಿತ್ರ ‍ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಧಿಕಾರಿಗಳಿಗೆ ಹಿಂಬಡ್ತಿ ನೀಡುವಂತೆ ಸುಪ್ರೀಂ ಕೋರ್ಟ್‌ 2017ರಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆಗ ಲೋಕೋಪಯೋಗಿ ಇಲಾಖೆ 441 ಎಂಜಿನಿಯರ್‌ಗಳನ್ನು ಲೋಕೋಪಯೋಗಿ ಇಲಾಖೆ ಹಿಂಬಡ್ತಿಗೊಳಿಸಿತ್ತು.

ಬಡ್ತಿ ಮೀಸಲು ಕಾಯ್ದೆ ರದ್ದತಿಯಿಂದ ಹಿಂಬಡ್ತಿಗೊಂಡಿರುವ ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪರಿಶಿಷ್ಟ ವರ್ಗದ (ಎಸ್‌.ಟಿ) ನೌಕರರ ಹಿತ ಕಾಪಾಡಲು ರಾಜ್ಯ ಸರ್ಕಾರ ರೂಪಿಸಿದ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಮೇ ತಿಂಗಳಲ್ಲಿ ಎತ್ತಿ ಹಿಡಿದಿತ್ತು. ಬಳಿಕ ಇಲಾಖೆ 371 ಮಂದಿಯ ಹಿಂಬಡ್ತಿಯನ್ನು ರದ್ದುಪಡಿಸಿತ್ತು. ನಿವೃತ್ತಿ ಕಾರಣದಿಂದ 68 ಎಂಜಿನಿಯರ್‌ಗಳ ಹಿಂಬಡ್ತಿಯನ್ನು ಕೈಬಿಡಲಾಗಿತ್ತು. ಹಿಂಬಡ್ತಿಗೆ ಒಳಗಾದ ದಿನಾಂಕದಿಂದ ಪೂರ್ವಾನ್ವಯವಾಗುವಂತೆ ಹಿಂಬಡ್ತಿ ಪೂರ್ವದ ವೃಂದದ ಹುದ್ದೆಗಳಿಗೆ ಅವರನ್ನು ನಿಯೋಜಿಸುವಂತೆ ಮುಖ್ಯ ಕಾರ್ಯದರ್ಶಿಯವರೇ ಸೂಚಿಸಿದ್ದರು. ಇಲಾಖೆ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿತ್ತು. ಇದಕ್ಕೆ 500ಕ್ಕೂ ಅಧಿಕ ಮಂದಿ ಆಕ್ಷೇಪಣೆ ಸಲ್ಲಿಸಿದ್ದಾರೆ.

ಈ ನಡುವೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 25 ಸೂಪರಿಟೆಂಡಿಂಗ್‌ ಎಂಜಿನಿಯರ್‌ಗಳು ಹಾಗೂ 178 ಕಾರ್ಯಪಾಲಕ ಎಂಜಿನಿಯರ್‌ಗಳನ್ನು ವಿವಿಧ ಇಲಾಖೆಗಳಿಗೆ ಇದೇ 14ರಂದು ಸ್ಥಳ ಹಂಚಿಕೆ ಮಾಡಿತ್ತು. ಇಲಾಖಾ ಅಭಿಪ್ರಾಯ ಪಡೆಯದೇ ಸ್ಥಳ ನಿಯುಕ್ತಿ ಮಾಡಲಾಗಿದ್ದು, ಇಲಾಖೆಗೆ 15 ಕಾರ್ಯಪಾಲಕ ಎಂಜಿನಿಯರ್‌ಗಳ ಸೇವೆ ಅಗತ್ಯ ಇಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಇದೇ 17ರಂದು ಪ್ರತಿಕ್ರಿಯಿಸಿತ್ತು. ಈ ಅಧಿಕಾರಿಗಳ ಸೇವೆ ಬಳಸಿಕೊಳ್ಳಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ, ಸಣ್ಣ ನೀರಾವರಿ ಇಲಾಖೆ ಹಿಂದೇಟು ಹಾಕಿವೆ. ಇಲಾಖೆಗಳ ಅಭಿಪ್ರಾಯ ಪಡೆಯದೆ ಸ್ಥಳ ನಿಯುಕ್ತಿ ಮಾಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿವೆ. ಇದರ ನಡುವೆಯೇ, ಬಡ್ತಿ ನೀಡಲು ಇಲಾಖೆ ಸಿದ್ಧತೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯೆಗೆ ರಜನೀಶ್‌ ಗೋಯಲ್‌ ಲಭ್ಯರಾಗಲಿಲ್ಲ.

‘ಮೊದಲು ಜ್ಯೇಷ್ಠತಾ ಪಟ್ಟಿ: ಬಳಿಕ ಬಡ್ತಿ’
‘ಅಂತಿಮ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವ ಮುನ್ನವೇ ಎಂಜಿನಿಯರ್‌ಗಳಿಗೆ ಬಡ್ತಿ ನೀಡಲು ಮುಂದಾಗಿರುವುದು ಅಕ್ಷಮ್ಯ ಅಪರಾಧ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರು ಹುದ್ದೆ ಇಲ್ಲದೆ ಖಾಲಿ ಕುಳಿತುಕೊಳ್ಳಬೇಕು ಎಂದು ಸಚಿವರು ಷಡ್ಯಂತ್ರ ನಡೆಸಿದ್ದಾರೆ’ ಎಂದು ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯ ಕಾನೂನು ಸಲಹೆಗಾರ ಡಿ.ಚಂದ್ರಶೇಖರಯ್ಯ ಕಿಡಿಕಾರಿದರು.

‘ಸ್ಥಳ ನಿರೀಕ್ಷಣೆಯಲ್ಲಿರುವ, ಕಷ್ಟದ ದಿನಗಳನ್ನು ಎದುರಿಸುತ್ತಿರುವ 215 ಎಂಜಿನಿಯರ್‌ಗಳಿಗೆ ಸ್ಥಳ ನಿಯುಕ್ತಿ ಮಾಡುವುದನ್ನು ಬಿಟ್ಟು ಇಲಾಖೆ ಬಡ್ತಿ ಪ್ರಕ್ರಿಯೆ ಆರಂಭಿಸಿದೆ. 331 ಮಂದಿಗೆ ಬಡ್ತಿ ನೀಡಿದರೆ ಸ್ಥಳ ನಿಯುಕ್ತಿ ಪ್ರಕ್ರಿಯೆ ಗೊಂದಲಮಯವಾಗುತ್ತದೆ. ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿದ ನಂತರವೇ ಈ ಪ್ರಕ್ರಿಯೆ ನಡೆಸಬೇಕು’ ಎಂದು ಎಸ್‌ಸಿ/ಎಸ್‌ಟಿ ಎಂಜಿನಿಯರ್‌ಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಎಚ್‌.ಆರ್‌.ಒತ್ತಾಯಿಸಿದರು.

ಸಿದ್ದರಾಮಯ್ಯಗೆ ಮೊರೆ
ಪರಿಶಿಷ್ಟ ಜಾತಿ ಹಾಗೂ ಪಂಗಡದ ನೌಕರರ ನಿಯೋಗವು ಸಮ್ಮಿಶ್ರ ಸರ್ಕಾರದ ಸಮನ್ವಯಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಡ್ತಿ ಹಾಗೂ ಸ್ಥಳ ನಿಯುಕ್ತಿ ಗೊಂದಲದ ಬಗ್ಗೆ ಅಳಲು ತೋಡಿಕೊಂಡಿತು.

ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜತೆಗೆ ಚರ್ಚೆ ನಡೆಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT