ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ವಿಜ್ಞಾನಿ ಈ ‘ಕನ್ನಡದ ಜಗದ್ಗುರು’

ಡಾ.ಅಂಬೇಡ್ಕರ್ ಪುರಾಣ ಬರೆಯಿಸಿ, ಪ್ರವಚನ ಮಾಡಿಸಿದ ಅಪರೂಪದ ಶ್ರೀ
Last Updated 20 ಅಕ್ಟೋಬರ್ 2018, 19:01 IST
ಅಕ್ಷರ ಗಾತ್ರ

ಕೊಪ್ಪಳ:ಬಡ ಜಂಗಮರ ಹುಡುಗ. ತುತ್ತು ಅನ್ನಕ್ಕೆ ನೆತ್ತಿ ಸುಡುವ ಬಿರು ಬಿಸಿಲಿನಲ್ಲಿ ರೈತರ ಕಣದಲ್ಲಿ ಧಾನ್ಯ ಭಿಕ್ಷೆ ಪಡೆದು ಮನೆತನದ ಜಂಗಮ ಕಾಯಕ ನಡೆಸಿದ್ದರು. ಬಾಲ್ಯದಲ್ಲಿ ಕಿತ್ತು ತಿನ್ನುವ ಹಸಿವು, ಬಡತನ, ಬಿಸಿಲಿನ ಬಗ್ಗೆ ಅವರಿಗೆ ಇದ್ದ ಕಠೋರ ಅನುಭವ ಸಮಾಜಮುಖಿ ಚಿಂತನೆಯ ಸ್ವಾಮೀಜಿಯನ್ನಾಗಿ ರೂಪಿಸಿದವು.

ದೂರದ ಸಿಂದಗಿಯ ಹಿರೇಮಠದ ಜಂಗಮರ ಮನೆತನದಲ್ಲಿ ಜನಿಸಿ ಗದುಗಿನ ವಿರಕ್ತ ಪರಂಪರೆಯ ಪೀಠವನ್ನೇರಿದರೂ ಅವರಲ್ಲಿ ತಮ್ಮ ಬಾಲ್ಯದ ನೆನಪುಗಳು ಹಾಗೆಯೇ ಇದ್ದವು. ಜನರ ಜಗದ್ಗುರು ಆಗಲು ಅವರು ಬೆಳೆದು ಬಂದ ಪರಂಪರೆಯೇ ಸಾಕ್ಷಿಯಾಗಿತ್ತು. ಹಸಿದು ಬಂದವರಿಗೆ ಉಪದೇಶ ಮಾಡದೇ ‘ಮೊದಲು ಪ್ರಸಾದ ಮಾಡ್ರಿ’ ಎಂದು ಅಕ್ಕರೆಯಿಂದ ಹೇಳಿ ನಂತರ ಮಾತಿಗೆ ಇಳಿಯುತ್ತಿದ್ದರು.

’ಕನ್ನಡದ ಜಗದ್ಗುರು’, ’ಜನಸಾಮಾನ್ಯರ ಸ್ವಾಮೀಜಿ’ ಎಂಬ ಅಭಿದಾನ ಹೊಂದಿದ್ದ ಅವರು ನಾಡು-ನುಡಿಯ ಬಗ್ಗೆ ಹೊಂದಿದ್ದ ಕಾಳಜಿ ಅನನ್ಯ. ಕರ್ನಾಟಕ ಎಲ್ಲ ಹಳ್ಳಿಗಳ ವಿಶೇಷತೆಯನ್ನು ಬಲ್ಲವರಾಗಿದ್ದರು. ಜನ, ಜೀವನ, ಜಾತಿಗಳನ್ನು ಸಮಾಜ ವಿಜ್ಞಾನಿಯ ಹಾಗೆ ವಿಶ್ಲೇಷಿಸುತ್ತಿದ್ದನ್ನು ಕಂಡಾಗ ಅವರು ನಡೆದಾಡುವ ವಿಶ್ವಕೋಶ ಎಂಬ ಅರಿವು ಆಗದೇ ಇರುತ್ತಿರಲಿಲ್ಲ.

ಡಾ.ಸಿದ್ಧಲಿಂಗ ಸ್ವಾಮೀಜಿಅವರು ಹೊಂದಿದ್ದ ಸಾಮಾಜಿಕ ಜ್ಞಾನ ಅಪಾರವಾದದ್ದು. ಹೊಲ ಮಾರುವ ರೈತರಿಗೆ ಬುದ್ಧಿ ಹೇಳಿ ಒಕ್ಕಲುತನದ ಮಹತ್ವವನ್ನು ವಿವರಿಸಿ ಅವರ ಮನವೊಲಿಸುತ್ತಿದ್ದರು. ಜಾತಿವಾದಿಗಳನ್ನು ಕಂಡರೆ ಅವರಿಗೆ ಆಗುತ್ತಿರಲಿಲ್ಲ. ತಮ್ಮದೇ ಜಾತಿಯ ಅನೇಕ ಜನರ ವಿರೋಧ ಕಟ್ಟಿಕೊಂಡು ಬಸವ ಪಥದಲ್ಲಿ ಸಾಗಿದ ಅಪ್ಪಟ ಶರಣ ಅವರು.

ವಿಜಯಪುರದ ಜನರ ಬಗ್ಗೆ ಅವರಿಗೆ ವಿಶೇಷ ಪ್ರೀತಿ. 'ಶ್ರಮ ಜೀವನಕ್ಕೆ ಹೆಸರಾದ ನನ್ನ ಜನ ಎಲ್ಲಿಯಾದರೂ ಬದುಕುತ್ತಾರೆ' ಎಂದು ಮೇಲಿಂದ ಮೇಲೆ ಹೇಳುತ್ತಿದ್ದರು. ಜಿಲ್ಲೆಯ ಜನರ ಮೇಲಿನ ಪ್ರೀತಿಗೆ ವಿಜಯಪುರದಲ್ಲಿ ಅನುಭವ ಮಂಟಪ ನಿರ್ಮಿಸಿ ಅರ್ಥಪೂರ್ಣ ಕಾರ್ಯಕ್ರಮ ನಡೆಸಿ, ಅಭಿಮಾನ ತೋರಿದರು.

ಹೀನಾಯ ಸ್ಥಿತಿಯಲ್ಲಿ ಇದ್ದ ಗದುಗಿನ ಪೀಠವನ್ನು ಪುನರುಜ್ಜೀವನಗೊಳಿಸಿ, ಕರ್ನಾಟಕದಲ್ಲಿ ಹೆಸರು ಮಾಡುವಂತೆ ಅವಿಶ್ರಾಂತವಾಗಿ ದುಡಿದು ಮಠ, ಭಕ್ತರ ಮನವನ್ನು ಬೆಳಗಿಸಿದರು. ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಅನೇಕ ಪುಸ್ತಕಗಳನ್ನು ತಮ್ಮ ವಿದ್ಯಾಗುರುಗಳಾದ ಡಾ.ಎಂ.ಎಂ.ಕಲಬುರಗಿ ಅವರ ನೇತೃತ್ವದಲ್ಲಿ ನೂರಾರು ಪುಸ್ತಕಗಳನ್ನು ಹೊರ ತಂದು, ಕನ್ನಡ ಸಾಹಿತ್ಯ ಸರಸ್ವತಿಯ ಭಂಡಾರವನ್ನು ತುಂಬಿಸಿದರು.

ಉತ್ತರ ಕರ್ನಾಟಕಕ್ಕೆ ಮಳೆ ತರುವ ಕಪ್ಪತಗುಡ್ಡವನ್ನು ರಕ್ಷಿಸಲು ಅವಿರತವಾಗಿ ಹೋರಾಟ ನಡೆಸಿದ್ದರು. ಪರಿಸರದ ಮೇಲೆ ಆಗುತ್ತಿರುವ ಅನ್ಯಾಯವನ್ನು ಸರ್ಕಾರದ ಮುಂದೆ ಎಳೆ, ಎಳೆಯಾಗಿ ಬಿಡಿಸಿಟ್ಟಿದ್ದರು. ಮುಂದಿನ ತಲೆಮಾರಿಗೆಭೂಮಿ, ನೀರು ಉಳಿಸುವ ಅವರ ಹೋರಾಟ ಕರ್ನಾಟಕದಲ್ಲಿ ಮಾದರಿಯಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT