ಶುಕ್ರವಾರ, ನವೆಂಬರ್ 22, 2019
23 °C
ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ l ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭೂಕುಸಿತ

ಕಣಕುಂಬಿ: ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ; ಕೃಷ್ಣಾಗೆ ಹೆಚ್ಚಿದ ಒಳಹರಿವು

Published:
Updated:

ಬೆಂಗಳೂರು: ರಾಜ್ಯದಲ್ಲಿ ಕರಾವಳಿ, ಕೊಡಗು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರವೂ ಮಳೆ ಆರ್ಭಟ ಮುಂದುವರಿದಿದೆ.

ಮಲಪ್ರಭಾ ನದಿಯ ಉಗಮ ಸ್ಥಳವಾಗಿರುವ ಕಣಕುಂಬಿಯಲ್ಲಿ ಭಾರಿ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 15.7 ಸೆಂ.ಮೀ ಮಳೆಯಾಗಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ. ಭಾಗಮಂಡಲದಲ್ಲಿ 11.0 ಸೆಂ.ಮೀ, ಆಗುಂಬೆಯಲ್ಲಿ 9.0 ಸೆಂ.ಮೀ ಮಳೆಯಾಗಿದೆ.

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮೂರು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದ್ದು, ಸಕಲೇಶಪುರ ತಾಲ್ಲೂಕಿನಲ್ಲಿ ಭೂ ಕುಸಿತದ ಭೀತಿ ಎದುರಾಗಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಡಗೋಡ ಸುತ್ತಮುತ್ತ ದಿನವಿಡೀ ಜೋರಾಗಿ ಮಳೆಯಾಯಿತು.‌ 

ರಾಜಾಪುರ ಬ್ಯಾರೇಜ್‌ ಮೂಲಕ 1,10,350 ಕ್ಯುಸೆಕ್‌, ದೂಧ್‌ಗಂಗಾ ಹಾಗೂ ವೇದಗಂಗಾ ನದಿಯ ಮೂಲಕ 19,060 ಕ್ಯುಸೆಕ್‌ ಸೇರಿದಂತೆ ಚಿಕ್ಕೋಡಿಯ ಕಲ್ಲೋಳದ ಬಳಿ 1,29,410 ಕ್ಯುಸೆಕ್‌ ನೀರು ಕೃಷ್ಣಾಗೆ ಸೇರಿಕೊಳ್ಳುತ್ತಿದೆ. 

ರಾಯಬಾಗದ ಕುಡಚಿ ಬಳಿ ಸೇತುವೆಯು ಜಲಾವೃತವಾಗಿದೆ. ಜಿಲ್ಲೆಯ ಒಟ್ಟು ಏಳು ಸೇತುವೆಗಳು ಜಲಾವೃತಗೊಂಡಂತಾಗಿದೆ.  ನವಿಲುತೀರ್ಥ ಜಲಾಶಯದಿಂದ 16,100 ಕ್ಯುಸೆಕ್‌ ಹೊರಬಿಡಲಾಗಿದೆ. ಗದಗ ಜಿಲ್ಲೆಯ ರೋಣ ಮತ್ತು ನರಗುಂದ ತಾಲ್ಲೂಕುಗಳ 13ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮತ್ತೆ ಪ್ರವಾಹ ಭೀತಿ ತಲೆದೋರಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.

ಸೂಪಾ ಜಲಾಶಯ ಭರ್ತಿಯಾಗಲು ಕೇವಲ 0.67 ಮೀ. (ಎರಡು ಅಡಿ) ಬಾಕಿಯಿದ್ದು, ಶುಕ್ರವಾರ ಸಂಜೆ 5ರ ವೇಳೆಗೆ 33 ಸಾವಿರ ಕ್ಯುಸೆಕ್ ಒಳಹರಿವು ಇತ್ತು. 30 ಸಾವಿರ ಕ್ಯುಸೆಕ್ ಹೊರಹರಿವು ದಾಖಲಾಗಿತ್ತು. ಅದರ ಕೆಳಭಾಗದಲ್ಲಿರುವ ಕದ್ರಾ ಜಲಾಶಯದಿಂದ 63 ಸಾವಿರ ಕ್ಯುಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಯಿತು. ಇದರಿಂದ ನದಿಪಾತ್ರದ ಗ್ರಾಮಗಳಿಗೆ ಮತ್ತೆ ಪ್ರವಾಹದ ಆತಂಕ ಎದುರಾಗಿದೆ. ಆರು ಪರಿಹಾರ ಕೇಂದ್ರಗಳನ್ನು ಮುಂದುವರಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶುಕ್ರವಾರವೂ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭೂಕುಸಿತ ಉಂಟಾಗಿದೆ.

ಬೆಳ್ತಂಗಡಿ, ಸುಳ್ಯ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿದ್ದು, ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 4.6 ಸೆಂ.ಮೀ. ಮಳೆ ದಾಖಲಾಗಿದೆ.


ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ಅಂಗಡಿಯಲ್ಲಿರುವ ಸಾಮಗ್ರಿಗಳನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಿದರು. -ಪ್ರಜಾವಾಣಿ ಚಿತ್ರ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಚೆನ್ನಡ್ಲು ಬಳಿ ರಸ್ತೆಯ ಮೇಲೆ ಗುಡ್ಡದ ಮಣ್ಣು ಕುಸಿದಿದ್ದು, ಸಂಚಾರಕ್ಕೆ ಅಡಚಣೆಯಾಗಿತ್ತು.

ಸುಂದರಬೈಲಿನ ಮನೆಯೊಂದರ ಬದಿಯಲ್ಲಿ ಮಣ್ಣು ಕುಸಿದು ಕಂದಕಗಳಾಗಿವೆ. ಮೂಡಿಗೆರೆ, ಕೊಟ್ಟಿಗೆಹಾರ ಸುತ್ತಲಿನ ಭಾಗದಲ್ಲಿ ಬೆಳಿಗ್ಗೆಯಿಂದಲೂ ಮಳೆ ಸುರಿದಿದೆ. ಕೊಟ್ಟಿಗೆಹಾರ ಭಾಗದಲ್ಲಿ 9.3 ಸೆಂ.ಮೀ ಮಳೆಯಾಗಿದೆ.

ಎನ್‌.ಆರ್‌.ಪುರ, ಕೊಪ್ಪ, ಬಾಳೆಹೊನ್ನೂರು, ಶೃಂಗೇರಿ ಭಾಗದಲ್ಲಿ ಮಳೆಯಾಗಿದೆ. ಚಿಕ್ಕಮಗಳೂರು ಮತ್ತು ಗಿರಿಶ್ರೇಣಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಹಳ್ಳಕೊಳ್ಳಗಳು, ಹೇಮಾವತಿ, ತುಂಗಾ, ಭದ್ರಾ ನದಿಗಳಲ್ಲಿ ಹರಿವು ಹೆಚ್ಚಾಗಿದೆ.

ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವು 53 ಸಾವಿರ ಕ್ಯುಸೆಕ್‌ ದಾಟಿದೆ. 52,807 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ನದಿ ತೀರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ನದಿ ತೀರದ ಗ್ರಾಮಗಳಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ಬಂದ ನೀರನ್ನು ನದಿ ಹಾಗೂ ನಾಲೆಗಳಿಗೆ ಹರಿಸಲಾಗುತ್ತಿದೆ. ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ವಿವಿಧೆಡೆ ನದಿ ತೀರದ ಜಮೀನು ಮುಳುಗಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ನಾಲ್ಕು ದಿನಗಳ ಹಿಂದೆಯೇ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ.


ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದ ಒಳ ಹರಿವು ಹೆಚ್ಚುತ್ತಿದ್ದು, ಶುಕ್ರವಾರ ಸಂಜೆ ಜಲಾಶಯದಿಂದ 52,807 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು

ಕೊಡಗಿನಲ್ಲಿ ಮತ್ತೆ ಮಳೆಯ ಆರ್ಭಟ (ಮಡಿಕೇರಿ): ಕೊಡಗು ಜಿಲ್ಲೆಯ ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಬೇತ್ರಿ, ಮೂರ್ನಾಡು ಭಾಗದಲ್ಲಿ ಶುಕ್ರವಾರ ಮಧ್ಯಾಹ್ನದಿಂದ ನಿರಂತರವಾಗಿ ಬಿರುಸಿನ ಮಳೆಯಾಗುತ್ತಿದೆ. ಮಧ್ಯಾಹ್ನದ ತನಕ ಬಿಡುವು ನೀಡಿದ್ದ ಮಳೆ ಬಳಿಕ ಆರ್ಭಟಿಸಲು ಆರಂಭಿಸಿತು. ಮೂರ್ನಾಡು – ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ. ಕರಡಿಗೋಡು, ಗುಹ್ಯ, ನೆಲ್ಯಹುದಿಕೇರಿ, ಕುಂಬಾರಗುಂಡಿ ನದಿ ದಂಡೆಯ ನಿವಾಸಿಗಳು ಈಗ ಮತ್ತೆ ಆತಂಕದಲ್ಲಿದ್ದಾರೆ.  

ಉತ್ತರ ಕೊಡಗಿನ ಸೋಮವಾರಪೇಟೆ, ಮಲ್ಲಳ್ಳಿ, ಶಾಂತಳ್ಳಿ ಸುತ್ತಮುತ್ತ ಧಾರಾಕಾರ ಮಳೆಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಡಿಕೇರಿ, ಶನಿವಾರಸಂತೆ, ಕೊಡ್ಲಿಪೇಟೆ, ಸುಂಟಿಕೊಪ್ಪ, ಗೋಣಿಕೊಪ್ಪಲು, ವಿರಾಜಪೇಟೆ ಸುತ್ತಮುತ್ತ ಸಾಧಾರಣ ಮಳೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹಲವೆಡೆ ಶುಕ್ರವಾರ ಸಾಧಾರಣ ಮಳೆಯಾಗಿದೆ. ಆಗುಂಬೆ, ತೀರ್ಥಹಳ್ಳಿ, ರಿಪ್ಪನ್‌ಪೇಟೆ, ಹೊಸನಗರ, ಮಾಸ್ತಿಕಟ್ಟೆ, ಸಾಗರ, ಜೋಗ, ಶಿಕಾರಿಪುರ, ಸೊರಬ, ಶಿವಮೊಗ್ಗ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಭದ್ರಾವತಿ,ಹೊಳೆಹೊನ್ನೂರು ಭಾಗದಲ್ಲಿ ತುಂತುರು ಮಳೆಯಾಗಿದೆ.

ಶಿರಾಡಿ ಘಾಟಿಯಲ್ಲಿ ಭೂ ಕುಸಿತ

ಶಿರಡಿ ಘಾಟಿ ಸಮೀಪದ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಬಳಿ 20 ಅಡಿ ಎತ್ತರದಿಂದ ಬೃಹತ್ ಬಂಡೆ ಉರುಳಿ ಬಿದ್ದಿದ್ದು, ಆತಂಕ ಸೃಷ್ಟಿಸಿದೆ. ಐದಾರು ಬಂಡೆ ಕಲ್ಲುಗಳು ರಸ್ತೆ ಬದಿಗೆ ಉರುಳಿ ಬಿದ್ದಿವೆ. ಇನ್ನು ಒಂದು ಬಂಡೆ ಕುಸಿದು ಬೀಳುವ ಹಂತದಲ್ಲಿದೆ.

ಧಾರಾಕಾರ ಮಳೆಯಾಗುತ್ತಿರುವುದರಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ಅಲ್ಲಲ್ಲಿ ಭೂ ಕುಸಿತ ಉಂಟಾಗಿದೆ. ಗುಡ್ಡ ಕುಸಿತದಿಂದ ಶಿರಾಡಿ ಘಾಟಿಯಲ್ಲಿ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಅಪಾಯಕಾರಿ ಸ್ಥಿತಿಯಲ್ಲಿರುವ ಬಂಡೆ ಉರುಳಿ ಬಿದ್ದರೆ ಸಮಸ್ಯೆ ಎದುರಾಗಬಹುದು.

ನದಿ ತೀರದ ಗ್ರಾಮಗಳಿಗೆ ಎಚ್ಚರಿಕೆ

ಹೊಸಪೇಟೆ: ಇಲ್ಲಿಯ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಾಗಿರುವ ಕಾರಣ ಶುಕ್ರವಾರ ಬೆಳಿಗ್ಗೆಯಿಂದ ನದಿಗೆ 1 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸಲಾಗುತ್ತಿದ್ದು, ನದಿ ತೀರದ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ತಿಳಿಸಿದೆ. 

ಒಟ್ಟು 33 ಕ್ರಸ್ಟ್‌ ಗೇಟ್‌ಗಳ ಪೈಕಿ 28 ಗೇಟ್‌ಗಳನ್ನು ತೆರೆದು ನದಿಗೆ 1,00,100 ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. 11,200 ಕ್ಯುಸೆಕ್‌ ನೀರು ಎಡದಂಡೆ, ಬಲದಂಡೆ ಹಾಗೂ ವಿಜಯನಗರ ಕಾಲದ ಉಪ ಕಾಲುವೆಗಳಿಗೆ ಹರಿಸಲಾಗುತ್ತಿದೆ. 69,986 ಕ್ಯುಸೆಕ್‌ ಒಳಹರಿವು ಇದೆ. ಎಲ್ಲ ಕ್ರಸ್ಟ್‌ಗೇಟ್‌ ತೆರೆದು ಒಂದೂವರೆ ಲಕ್ಷ ಕ್ಯುಸೆಕ್‌ಗಿಂತ ಅಧಿಕ ನೀರು ಹೊರಬಿಡುವ ಸಾಧ್ಯತೆ ಇದೆ.

ಕೃಷ್ಣಾ ನದಿ ಪ್ರವಾಹ ಇಳಿಮುಖ
ಕಲಬುರ್ಗಿ:
ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಹೊರಬಿಡುತ್ತಿರುವ ನೀರಿನ ಪ್ರಮಾಣವು 1.85 ಲಕ್ಷ ಕ್ಯುಸೆಕ್‌ನಿಂದ 1.33 ಲಕ್ಷ ಕ್ಯುಸೆಕ್‌ಗೆ ತಗ್ಗಿದೆ. ಪ್ರವಾಹಕ್ಕೆ ಸಿಲುಕುವ ಆತಂಕಕ್ಕೆ ಒಳಗಾಗಿದ್ದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಗ್ರಾಮಸ್ಥರು ಕೊಂಚ ನಿರಾಳರಾಗಿದ್ದಾರೆ.

ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಿರುವ ಕಾರಣ ಶುಕ್ರವಾರ ಬೆಳಿಗ್ಗೆಯಿಂದ, 33ರ ಪೈಕಿ 28 ಕ್ರಸ್ಟ್‌ ಗೇಟ್‌ಗಳಿಂದ ನದಿಗೆ 1 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸಲಾಗುತ್ತಿದೆ. ನದಿ ತೀರದಲ್ಲಿ ಜಿಲ್ಲಾ ಆಡಳಿತ ಕಟ್ಟೆಚ್ಚರ ವಹಿಸಿದೆ.

ಪ್ರತಿಕ್ರಿಯಿಸಿ (+)