ಶುಕ್ರವಾರ, ಡಿಸೆಂಬರ್ 6, 2019
19 °C

ಪೊಲೀಸರಿಗೆ ಚಾಕು ಇರಿತ; ಆರೋಪಿಗೆ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್‌.ಟಿ. ನಗರದ ಪೊಲೀಸರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಆರೋಪಿ ಮರ್ದಾನ್ ಖಾನ್ ಎಂಬಾತನನ್ನು ಕಾಲಿಗೆ ಗುಂಡು ಹಾರಿಸಿ ಸೋಮವಾರ ಸೆರೆ ಹಿಡಿಯಲಾಗಿದೆ.

‘ಆರ್‌.ಟಿ. ನಗರ ನಿವಾಸಿಯಾದ ಮರ್ದಾನ್ ಖಾನ್‌ನ ಕಾಲಿಗೆ ಎರಡು ಗುಂಡುಗಳು ತಗುಲಿದ್ದು, ಚಿಕಿತ್ಸೆಗಾಗಿ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನಿಂದ ಹಲ್ಲೆಗೀಡಾಗಿರುವ ಸಿಬ್ಬಂದಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೇಳಿದರು.

‘ಡಿ. 30ರಂದು ಚಾಮುಂಡಿನಗರ ಬಳಿಯ ವೆಂಕಟಶಾಮಪ್ಪ ಲೇಔಟ್‍ನಲ್ಲಿರುವ ಪಾಳು ಬಿದ್ದ ಕಟ್ಟಡದಲ್ಲಿ ಮರ್ದಾನ್ ಖಾನ್ ಹಾಗೂ ಆತನ ಸಹಚರರು ಗಾಂಜಾ ಹಾಗೂ ಸಿಗರೇಟ್‌ ಸೇದುತ್ತಿದ್ದರು. ದಾರಿಹೋಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಒಡ್ಡುತ್ತಿದ್ದರು.’

‘ಗಸ್ತಿನಲ್ಲಿದ್ದ ಆರ್‌.ಟಿ. ನಗರ ಠಾಣೆ ಹೆಡ್‌ ಕಾನ್‌ಸ್ಟೆಬಲ್ ನಾಗರಾಜ್ ಹಾಗೂ ಕಾನ್‌ಸ್ಟೆಬಲ್ ಚಂದ್ರಕಾಂತ್ ಆರೋಪಿಗಳನ್ನು ಪ್ರಶ್ನಿಸಿದ್ದರು. ಅವರನ್ನೂ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಆಗ ಆರೋಪಿಗಳನ್ನು ಹಿಡಿದುಕೊಂಡಿದ್ದ ಸಿಬ್ಬಂದಿ ಆಟೊದಲ್ಲಿ ಹತ್ತಿಸಿಕೊಂಡು ಠಾಣೆಗೆ ಕರೆದೊಯ್ಯಲು ಮುಂದಾಗಿದ್ದರು. ಅದೇ ಸಂದರ್ಭದಲ್ಲಿ ಮರ್ದಾನ್‌ ಖಾನ್ ಚಾಕುವಿನಿಂದ ಸಿಬ್ಬಂದಿಗೆ ಇರಿದಿದ್ದ’ ಎಂದು ಹೇಳಿದರು.

‘ನಾಗರಾಜ್ ಅವರ ಹೊಟ್ಟೆ ಹಾಗೂ ಚಂದ್ರಕಾಂತ್‍ ಅವರ ಕಾಲು–ಕೈಗೆ ಗಾಯ ಆಗಿತ್ತು. ಅವರಿಬ್ಬರು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

ಬಂಧಿಸಲು ಹೋದಾಗಲೂ ಹಲ್ಲೆ: ‘ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಮರ್ದಾನ್ ಖಾನ್, ಕೆ.ಎಚ್‌.ಎಂ ಹಂತದ ಈರಳ್ಳಿ ಮೈದಾನದಲ್ಲಿ ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದ. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಇನ್‌ಸ್ಪೆಕ್ಟರ್‌ ಮಿಥುನ್‌ ಶಿಲ್ಪಿ ನೇತೃತ್ವದ ತಂಡ ಸ್ಥಳಕ್ಕೆ ಹೋಗಿತ್ತು’ ಎಂದು ಶಶಿಕುಮಾರ್ ಹೇಳಿದರು.

‘ಪೊಲೀಸರನ್ನು ಕಂಡ ತಕ್ಷಣ ಆರೋಪಿ ತಪ್ಪಿಸಿಕೊಳ್ಳಲು ಮುಂದಾಗಿದ್ದ. ತನ್ನನ್ನು ಹಿಡಿಯಲು ಬಂದ ಸಿಬ್ಬಂದಿಯಾದ ಶ್ರೀಧರ್ ಮೂರ್ತಿ ಮತ್ತು ಮುತ್ತಪ್ಪ ಅವರಿಗೆ ಚಾಕುವಿನಿಂದ ಇರಿದಿದ್ದ. ಕಲ್ಲು ತೂರಾಟ ಸಹ ನಡೆಸಿದ್ದ. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್‌ ಅವರು ಆರೋಪಿ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿದರು’ ಎಂದು ತಿಳಿಸಿದರು. 

 

‘ಪತ್ನಿ ಸಂಬಂಧಿಕರ ಮೇಲೂ ಹಲ್ಲೆ’

‘ಈ ಹಿಂದೆ ದಾಖಲಾಗಿದ್ದ ಹಲ್ಲೆ, ದೊಂಬಿ ಪ್ರಕರಣದಲ್ಲಿ ಮರ್ದಾನ್ ಖಾನ್ ಆರೋಪಿ ಆಗಿದ್ದ. ಪತ್ನಿ ಸಂಬಂಧಿಕರಿಗೂ ಚಾಕುವಿನಿಂದ ಇರಿದಿದ್ದ. ಆ ಬಗ್ಗೆ ದೂರು ದಾಖಲಾಗಿತ್ತು’ ಎಂದು ಶಶಿಕುಮಾರ್ ಹೇಳಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು