ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಸಹಾಯಕಿಯಿಂದ ಎ.ಸಿ. ಹುದ್ದೆಗೆ

ಕೋಚಿಂಗ್‌ ಇಲ್ಲದೇ ಶ್ವೇತಾ ಬೀಡಿಕರ ಸಾಧನೆ
Last Updated 24 ಡಿಸೆಂಬರ್ 2019, 15:49 IST
ಅಕ್ಷರ ಗಾತ್ರ

ಚಿಕ್ಕೋಡಿ: ತಮಗೆ ಸಿಕ್ಕಿದ್ದ ಅಂಚೆ ಸಹಾಯಕಿ (ಪೋಸ್ಟಲ್ ಅಸಿಸ್ಟಂಟ್‌) ಹುದ್ದೆಯ ಸಮರ್ಥ ನಿರ್ವಹಣೆಯ ಜೊತೆಗೆ ಕೆಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ್ದ ಯುವತಿಯೊಬ್ಬರು ಯಾವುದೇ ರೀತಿಯ ಕೋಚಿಂಗ್ ಪಡೆಯದೇ ಕಠಿಣ ಪರಿಶ್ರಮ, ಶ್ರದ್ಧೆಯಿಂದ ಅಧ್ಯಯನ ಮಾಡಿ ಉಪ ವಿಭಾಗಾಧಿಕಾರಿ ಹುದ್ದೆಯನ್ನು ಪಡೆದುಕೊಂಡಿದ್ದಾರೆ.

ಪಟ್ಟಣದ ರಾಜೀವನಗರದ ನಿವಾಸಿ ಶ್ವೇತಾ ಮೋಹನ ಬೀಡಿಕರ ಕೆಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಗಮನಸೆಳೆದಿದ್ದಾರೆ. ರತ್ನಾ–ಮೋಹನ ಬೀಡಿಕರ ದಂಪತಿಯ ಎರಡು ಹೆಣ್ಣು ಮಕ್ಕಳ ಪೈಕಿ ಕಿರಿಯವರು ಶ್ವೇತಾ. ತಂದೆ ಭಾರತೀಯ ಜೀವವಿಮಾ ನಿಗಮದ ನಿವೃತ್ತ ನೌಕರ, ತಾಯಿ ಗೃಹಿಣಿ. ಧಾರವಾಡದವರಾದ ಬೀಡಿಕರ ದಂಪತಿ 3 ದಶಕಗಳಿಂದ ಚಿಕ್ಕೋಡಿಯಲ್ಲಿ ನೆಲೆಸಿದ್ದಾರೆ.

ಶ್ವೇತಾ ಇಲ್ಲಿನ ಆರ್.ಡಿ. ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.89 ಅಂಕ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.95 ಅಂಕಗಳೊಂದಿಗೆ ಮತ್ತು ಪದವಿ ಶಿಕ್ಷಣವನ್ನು ಶೇ.77 ಅಂಕಗಳನ್ನು ಪಡೆದು ಪಾಸಾಗಿದ್ದಾರೆ. 2008ರಿಂದ ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಪೋಸ್ಟಲ್ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದರು.

‘ಪ್ರೌಢಶಾಲೆ ಮತ್ತು ಕಾಲೇಜು ಹಂತದಿಂದಲೂ ಹಂಬಲವಿತ್ತು. 2008ರಲ್ಲಿ ಪೋಸ್ಟಲ್ ಅಸಿಸ್ಟಂಟ್ ಹುದ್ದೆಗೆ ನೇಮಕಗೊಂಡೆ. ಆ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸುತ್ತಿದ್ದೆ. ತಂದೆ-ತಾಯಿ ನನ್ನ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತರು. 2014ರಲ್ಲಿ ಕೆಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ ಪ್ರಿಲಿಮಿನರಿ ಪರೀಕ್ಷೆ ಪಾಸ್ ಮಾಡಿದ್ದೆ. ಮುಖ್ಯ ಪರೀಕ್ಷೆಯಲ್ಲಿ ವಿಫಲವಾಗಿದ್ದೆ. ಆದರೂ ಧೃತಿಗೆಡದೇ 2017ರ ಪರೀಕ್ಷೆಯಲ್ಲಿ ಯಶಸ್ಸು ಲಭಿಸಿದ್ದು, ಖುಷಿಯಾಗಿದೆ’ ಎಂದು ಶ್ವೇತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಪಿಎಸ್‌ಸಿ ಪರೀಕ್ಷೆಗೆ ಕೋಚಿಂಗ್ ಪಡೆದಿಲ್ಲ. ನಿತ್ಯ 8 ಗಂಟೆ ಪ್ರಚಲಿತ ವಿದ್ಯಮಾನಗಳು, ಕನ್ನಡ ಸಾಹಿತ್ಯ, ಇತಿಹಾಸ, ಸಂವಿಧಾನದ ಕುರಿತು ಓದುತ್ತಿದ್ದೆ. ಮುಖ್ಯ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಲಿಖಿತ ಉತ್ತರ ಹೆಚ್ಚಿಗೆ ಬರೆಯಬೇಕು. ಆದ್ದರಿಂದ ಪ್ರತಿ ದಿನ 2 ಗಂಟೆಗಳ ಕಾಲ ಬರೆಯುತ್ತಿದ್ದೆ. ವಾರಕ್ಕೊಂದು ಬಾರಿ ಧಾರವಾಡದಲ್ಲಿ ನಡೆಯುತ್ತಿದ್ದ ಅಣಕು ಪರೀಕ್ಷೆಯಲ್ಲಿ ಪಾಲ್ಗೊಂಡು ಸಿದ್ಧತೆ ನಡೆಸಿದ್ದೆ. ಅಂತರ್ಜಾಲದಲ್ಲಿ ದೊರೆಯುವ ಸಾಮಗ್ರಿ ಅಧ್ಯಯನ ಮಾಡುತ್ತಿದ್ದೆ’ ಎಂದು ಅನುಭವ ಹಂಚಿಕೊಂಡರು.

‘ಅಂಚೆ ಇಲಾಖೆಯಲ್ಲಿ ದಶಕದಿಂದ ಕೆಲಸ ಮಾಡಿದ ಅನುಭವವಿದೆ. ಕಂದಾಯ ಇಲಾಖೆಯಲ್ಲೂ ಉಪ ವಿಭಾಗಾಧಿಕಾರಿಯಾಗಿ ವಿಭಿನ್ನ ಯೋಚನೆಗಳೊಂದಿಗೆ ಆಡಳಿತ ವ್ಯವಸ್ಥೆ ಬಲಪಡಿಸಲು ಪ್ರಯತ್ನಿಸುತ್ತೇನೆ. ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಆದ್ಯತೆ ನೀಡುತ್ತೇನೆ. ಗ್ರಾಮೀಣ ಮಹಿಳೆಯರ ಸಶಕ್ತೀಕರಣಕ್ಕೆ ಗಮನ ನೀಡುತ್ತೇನೆ. ನನ್ನ ಪ್ರತಿಭೆಯನ್ನು ಜನಪರವಾಗಿ ಬಳಸುವ ಬಯಕೆ ಇದೆ’ ಎಂದು ತಮ್ಮ ಕನಸುಗಳನ್ನು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT