ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ‌, ಪಕ್ಷದ ವಿರುದ್ಧ ಸಭೆ ಕರೆದಿಲ್ಲ: ಎಸ್‌.ಟಿ. ಸೋಮಶೇಖರ್‌ ಸ್ಪಷ್ಟನೆ

ಸಮಾನ ಮನಸ್ಕ ಕಾಂಗ್ರೆಸ್‌ ಶಾಸಕರ ಸಭೆ ಮುಂದೂಡಿಕೆ
Last Updated 29 ಏಪ್ರಿಲ್ 2019, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರ ಅಥವಾ ಪಕ್ಷದ ವಿರುದ್ಧ ನಾನು ಸಭೆ ಕರೆದಿಲ್ಲ. ನಿಗಮ –ಮಂಡಳಿಗಳಲ್ಲಿರುವ ಸಮಸ್ಯೆ
ಗಳನ್ನು ಸರ್ಕಾರದ ಮುಂದಿಟ್ಟು ಪರಿಹಾರ ಕಂಡುಕೊಳ್ಳಲು ಅಧ್ಯಕ್ಷರ ಸಭೆ ಕರೆದಿದ್ದೆ’ ಎಂದು ಬಿಡಿಎ ಅಧ್ಯಕ್ಷರೂ ಆಗಿರುವ ಯಶವಂತಪುರ ಶಾಸಕಎಸ್‌.ಟಿ. ಸೋಮಶೇಖರ್‌ ಹೇಳಿದರು.

ಇದೇ 30ರಂದು ಅವರು ಕರೆದಿದ್ದ ಸಮಾನ ಮನಸ್ಕ ಶಾಸಕರ ಸಭೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಮಾತನಾಡಿದ ಅವರು, ಈ ಕುರಿತು ವಿವರಣೆ ನೀಡಿದರು.

‘ಸಭೆ ನಡೆಸುವ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಹೀಗೆ ಎಲ್ಲರಿಗೂ ತಿಳಿಸಿದ್ದೇವೆ. ಸಭೆ ನಡೆಸದಂತೆ ಯಾರ ಒತ್ತಡವೂ ನಮಗೆ ಬಂದಿಲ್ಲ. ನಾವ್ಯಾರೂ ಅಸಮಾಧಾನಿತ ಶಾಸಕರಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಾನು ಹಿಟ್ ಅಂಡ್ ರನ್ ಮಾಡುವವನಲ್ಲ. ಏನೇ ಇದ್ದರೂ ನೇರವಾಗಿ ಹೇಳುತ್ತೇನೆ. ನನ್ನದು ಪ್ರೆಷರ್ ಪಾಲಿಟಿಕ್ಸ್ ಇಲ್ಲ. ನಾನು ಬ್ಲ್ಯಾಕ್‌ ಮೇಲ್ ರಾಜಕಾರಣ ಮಾಡುವವನಲ್ಲ’ ಎಂದೂ ಖಾರವಾಗಿ ಹೇಳಿದರು.

‘ಉಪ ಚುನಾವಣೆ ನಡೆಯುವ ಚಿಂಚೋಳಿ ಮತ್ತು ಕುಂದಗೋಳದಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆ ಇತ್ತು. ಎಲ್ಲ ಶಾಸಕರು ಅಲ್ಲಿ ಇರಬೇಕೆಂದು ಹೇಳಿದ್ದರು. ಹೀಗಾಗಿ, ಸಭೆ ಮುಂದೂಡಿದ್ದೇವೆ’ ಎಂದು ವಿವರಿಸಿದರು.

‘ಸಾರ್ವಜನಿಕ ಜೀವನದಲ್ಲಿ ಕೆಲಸವನ್ನೂ ಮಾಡಬೇಕಲ್ಲ. ಬೆಂಗಳೂರು ಅಭಿವೃದ್ಧಿ ‍ಪ್ರಾಧಿಕಾರದ (ಬಿಡಿಎ) ಒಬ್ಬ ಉಪ ಕಾರ್ಯದರ್ಶಿ 32 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡುತ್ತಾನೆ. ಆದರೆ, ಬಿಡಿಎ ಅಧ್ಯಕ್ಷನಾಗಿ ಈ ಅಕ್ರಮದ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಅವಕಾಶ ಬೇಡವೇ’ ಎಂದು ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಸಭೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನಪರಿಷತ್‌ ಸದಸ್ಯ ರಘು ಆಚಾರ್‌ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಘು ಆಚಾರ್ ಪತ್ರ ಬರೆದಿದ್ದು ನಿಜ. ಅವನೇ ಕರೆ ಮಾಡಿ ಪಬ್ಲಿಸಿಟಿ ಆಗಲಿ. ವಿವಾದ ಆಗಲಿ ಎಂದು ಹೇಳಿದ. ಪಬ್ಲಿಸಿಟಿಗಾಗಿ ನಾನು ಮಾಡ್ತಿಲ್ಲ ಅಂತ ಹೇಳಿದೆ. ರಘು ಆಚಾರ್‌ಗಿಂತ ಹೆಚ್ಚು ವರ್ಷದಿಂದ ಕಾಂಗ್ರೆಸ್‌ನಲ್ಲಿ ನಾನಿದ್ದೇನೆ. ಕೆಳಮಟ್ಟದಿಂದ ಬಂದವನು ನಾನು’ ಎಂದರು.

‘ಕೆಪಿಸಿಸಿ ಅಧ್ಯಕ್ಷರು ಯಾರು, ನಮ್ಮ ನಾಯಕರ ಬಳಿ ಏನು ಮಾತನಾಡಬೇಕು ಎನ್ನುವುದು ರಘು ಆಚಾರ್‌ಗಿಂತ ನನಗೆ ಚೆನ್ನಾಗಿ ಗೊತ್ತಿದೆ’ ಎಂದೂ ಹೇಳಿದರು.

‘ಸಿ.ಎಂ ಜತೆ ಉತ್ತಮ ಬಾಂಧವ್ಯ’

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಎಸ್.ಟಿ. ಸೋಮಶೇಖರ್ ಅವರ ಮಧ್ಯೆ ಉತ್ತಮ ಬಾಂಧವ್ಯವಿದೆ’ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು. ಸೋಮಶೇಖರ್ ಕರೆದಿರುವ ಸಮಾನ ಮನಸ್ಕ ಶಾಸಕರಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬೇರೆ ಪಕ್ಷಗಳಲ್ಲೂಅಧಿಕೃತ, ಅನಧಿಕೃತವಾಗಿ ಶಾಸಕರು ಸೇರುತ್ತಾರೆ. ಅವರ ಸಮಸ್ಯೆಗಳಿದ್ದರೆ ಅದನ್ನು ಹೇಳಿಕೊಳ್ಳುತ್ತಾರೆ. ಅದರಲ್ಲಿ ತಪ್ಪು ಏನಿದೆ’ ಎಂದುಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT