ಮೈತ್ರಿ ಸರ್ಕಾರದಲ್ಲಿ ನಿರ್ಲಕ್ಷ್ಯ: ತನ್ವೀರ್‌ ಗರಂ

7

ಮೈತ್ರಿ ಸರ್ಕಾರದಲ್ಲಿ ನಿರ್ಲಕ್ಷ್ಯ: ತನ್ವೀರ್‌ ಗರಂ

Published:
Updated:

ಮೈಸೂರು: ‘ಸ್ಥಳೀಯವಾಗಿ ನಡೆಯುತ್ತಿರುವ ಕೆಲ ವಿಚಾರಗಳಲ್ಲಿ ವೈಮನಸ್ಯ ಇರುವುದು ನಿಜ. ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇನೆ’ ಎಂದು ಶಾಸಕ ತನ್ವೀರ್‌ ಸೇಠ್‌ ಇಲ್ಲಿ ಮಂಗಳವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಕೆಲ ವಿಚಾರಗಳು ಸರಿಯಾದ ವಿಧಾನದಲ್ಲಿ ನಡೆಯುತ್ತಿಲ್ಲ. ಮೈತ್ರಿ ಸರ್ಕಾರದ ಧರ್ಮ, ಗಟ್ಟಿ ಸಂಬಂಧ ಸ್ಥಳೀಯವಾಗಿಯೂ ಕಾಣಬೇಕು. ಆದರೆ, ಇಲ್ಲಿ ಎಲ್ಲೋ ಗೊಂದಲವಿದೆ. ಅದನ್ನು ಸಂಬಂಧಪಟ್ಟವರಿಗೆ ಮನದಟ್ಟು ಮಾಡಿದ್ದೇನೆ. ಎಷ್ಟೇ ವೈಮನಸ್ಯವಿದ್ದರೂ ದಸರಾ ಮಹೋತ್ಸಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ’ ಎಂದರು.

‘ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಕೆಲ ವಿಚಾರದಲ್ಲಿ ಇತಿಮಿತಿಯಲ್ಲಿ ನಡೆದುಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಹಿರಿಯರು, ಅನುಭವಿಗಳು. ಅವರ ಕೆಲಸ ಕಾರ್ಯಗಳಲ್ಲಿ ತಲೆಹಾಕುವುದು ಸರಿಯಲ್ಲ’ ಎಂದು ಹೇಳಿದರು.

‘ಸಚಿವರು ತಮಗೆ ವಹಿಸಿರುವ ಖಾತೆಯಲ್ಲಿ ಕೆಲಸ ಮಾಡಿದರೆ ಸಾಕು. ಪ್ರವಾಹದಿಂದ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಅನಾಹುತ ಉಂಟಾಗಿದೆ. ಅಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

‘ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಯಾರ‍್ಯಾರ ಹಿತಾಸಕ್ತಿ ಏನು ಎಂಬುದನ್ನು ನಾನು ಇಲ್ಲಿ ಮಾತನಾಡುವುದಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು’ ಎಂದು ನುಡಿದರು.

ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿ, ‘ನಾನು ಹಾಗೂ ಮಹೇಶ್‌ ಸಹೋದರರಂತೆ ಕೆಲಸ ಮಾಡುತ್ತಿದ್ದೇವೆ. ಯಾವುದೇ ಭಿನ್ನಾಭಿಪ್ರಾಯ, ಗೊಂದಲ, ವಿರಸ ಇಲ್ಲ. ಎಚ್‌.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !