ಸೋಮವಾರ, ಸೆಪ್ಟೆಂಬರ್ 23, 2019
24 °C
ವೀರಣ್ಣ ಮಡಿವಾಳರ ಅವರಿಗೆ ಶಿಕ್ಷಕರ ಸಾಥ್

ಫೇಸ್‌ಬುಕ್‌ ಬಳಸಿ ಸಂತ್ರಸ್ತರಿಗೆ ನೆರವಾದ ಕವಿ ವೀರಣ್ಣ ಮಡಿವಾಳರ

Published:
Updated:
Prajavani

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕು ನಿಡಗುಂಡಿ ಅಂಬೇಡ್ಕರ್‌ ನಗರ ಸರ್ಕಾರಿ ಶಾಲೆ ಶಿಕ್ಷಕ ಹಾಗೂ ಕವಿ ವೀರಣ್ಣ ಮಡಿವಾಳರ ಅವರು ‘ಫೇಸ್‌ಬುಕ್‌’ ಬಳಸಿಕೊಂಡು ಸ್ನೇಹಿತರು, ಸಮಾನ ಮನಸ್ಕ ಶಿಕ್ಷಕರು, ಬರಹಗಾರರು ಹಾಗೂ ಶಿಕ್ಷಣ ಸಂಸ್ಥೆಗಳಿಂದ ಹಣ ಸಂಗ್ರಹಿಸಿ ಪ್ರವಾಹ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. 

ಕೃ‌ಷ್ಣಾ ನದಿ ಪ್ರವಾಹದಿಂದ ನೊಂದವರಿಗೆ ಸಹಾಯ ಮಾಡುವ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಪ್ರವಾಹದಿಂದಾದ ಹಾನಿಯ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದನ್ನು ನೋಡಿದ ಬಹಳ‌ಷ್ಟು ಮಂದಿ ವೀರಣ್ಣ ಅವರ ಖಾತೆಗೆ ಹಣ ಹಾಕಿದ್ದಾರೆ. ಭಾನುವಾರದವರೆಗೆ ₹ 2 ಲಕ್ಷಕ್ಕೂ ಹೆಚ್ಚಿನ ಹಣ ಸಂಗ್ರಹವಾಗಿದೆ.‌‌‌ ಹಾಗೆಯೇ ಖರ್ಚು ವೆಚ್ಚದ ವಿವರವನ್ನೂ ಸಾರ್ವಜನಿಕರೊಂದಿಗೆ ಫೇಸ್‌ಬುಕ್‌ನಲ್ಲಿಯೇ ನೀಡುತ್ತಿದ್ದಾರೆ.  

ರಾಯಬಾಗ ತಾಲ್ಲೂಕಿನ ಶಿಕ್ಷಕರಾದ ಮೋಹನ್‌ರಾಜ್‌ ಮಾನೆ, ಭೂಪಾಲ್ ಮಾನೆ, ಅಮಿತ್ ಹಸುರೆ, ಬಿ.ಎಸ್. ಮತ್ತೂರ್, ಪ್ರಕಾಶ ಪುರ್ವೆ ಅವರ ತಂಡ ಸಮಯ ಮತ್ತು ಶ್ರಮದಾನ ಮಾಡಿದೆ. ಅವರಿಗೆ ಬಿಇಒ, ಸಮನ್ವಯಾಧಿಕಾರಿಯಾಗಿ ಮಾರ್ಗದರ್ಶನ ಮಾಡಿದ್ದಾರೆ. 

ಹಲವು ಗ್ರಾಮಗಳಲ್ಲಿ:

ರಾಯಬಾಗ ತಾಲ್ಲೂಕಿನ ನಸಲಾಪುರ, ಯಡ್ರಾವಿ, ದಿಗ್ಗೇವಾಡಿ, ಜಲಾಲಪುರದ ಮೂರು ಪರಿಹಾರ ಕೇಂದ್ರಗಳು, ಬಿರಡಿ, ನಿಶಾನ್‌ದಾರ್ ತೋಟ, ಹಳ್ಳದಹರಿ ತೋಟ, ಉಬ್ಬರವಾಡಿ, ಚಿಂಚಲಿಯ ಪಂಪ್‌ತೋಟ, ಚಿಂಚಲಿಯ ಗರೀಬಿ ಕಾಲೊನಿ, ಕುಡಚಿಯ ನಾಲ್ಕು ಪರಿಹಾರ ಕೇಂದ್ರ, ಹಾಲಶಿರಗೂರ, ಸದಾಶಿವನಗರ, ಯಲ್ಪಾರಟ್ಟಿ, ಅಥಣಿ ತಾಲ್ಲೂಕಿನ ಚಿಕ್ಕೊಡ, ಕೋಳಿಗುಡ್ಡ, ಸಿದ್ದಾಪುರ ತೋಟ, ನಂದಿಕುರಳಿ, ಲಕ್ಷ್ಮಿನಗರ ಮೊದಲಾದ ಕಡೆಗಳಲ್ಲಿ ಟ್ರಾಕ್ಟರ್‌ನಲ್ಲಿ ಸುತ್ತಿ ಅಗತ್ಯ ಸಾಮಗ್ರಿಗಳನ್ನು ಹಂಚಿದ್ದಾರೆ.

‘ಮನುಷ್ಯತ್ವಕ್ಕಾಗಿ ಈ ಕೆಲಸ ಮಾಡುತ್ತಿದ್ದೇವೆ. ಸಮಾನ ಮನಸ್ಕರು ಕೈಜೋಡಿಸಿದರು. ಸಂಕಷ್ಟದಲ್ಲಿದ್ದವರಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸಿದ ಸಮಾಧಾನ ನಮ್ಮದು’ ಎಂದು ವೀರಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಬಹಳ ಮಂದಿ:

‘ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ₹ 3,500, ಚನ್ನಪಟ್ಟಣದ ಪಿಡಿಒ ಯತೀಶ್‌ಚಂದ್ರ ₹ 15 ಸಾವಿರ, ಬೆಂಗಳೂರಿನ ಅಶೋಕ ಶಿಶುವಿಹಾರದವರು ₹ 50 ಸಾವಿರ, ಹಾಸನದ ವಿಜಯ್ ಶಾಲೆಯ ತಾರಾಸ್ವಾಮಿ ₹ 25 ಸಾವಿರ, ಚಿತ್ರದುರ್ಗ ಎನ್. ಮಹದೇವಪುರ ಇಂದಿರಾಗಾಂಧಿ ವಸತಿ ಶಾಲೆಯವರು ₹13,332, ಹಾಸನದ ಡಾ.ಸಾವಿತ್ರಿ ₹10ಸಾವಿರ, ಯತೀಶ್ ಚಂದ್ರ ₹15ಸಾವಿರ–ಹೀಗೆ ಬಹಳಷ್ಟು ಮಂದಿ ಹಣ ಕೊಟ್ಟಿದ್ದಾರೆ. ಕೆಲವರು ಹೆಸರು ಹೇಳಿಕೊಳ್ಳಲು ಇಷ್ಟ ಪಟ್ಟಿಲ್ಲ’ ಎಂದು ಮಾಹಿತಿ ನೀಡಿದರು.

‘ಈವರೆಗೆ ₹ 1.10 ಲಕ್ಷ ವೆಚ್ಚವಾಗಿದೆ. ಉಳಿದ ಹಣವನ್ನು, ನೆರೆಯಿಂದಾಗಿ ಪಠ್ಯ–ಲೇಖನ ಸಾಮಗ್ರಿಗಳನ್ನು ಕಳೆದುಕೊಂಡ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕಿಟ್‌ ಕೊಡಿಸಲು ಬಳಸಲಿದ್ದೇವೆ. ಉಳಿದಲ್ಲಿ, ನಿರಾಶ್ರಿತರಿಗೆ ಹಾಸಿಗೆ, ಬಟ್ಟೆ, ಪಾತ್ರೆಗಳನ್ನು ಕೊಡಿಸುತ್ತೇವೆ’ ಎಂದು ತಿಳಿಸಿದರು.

****

'ಮುಳುಗಿದ ಮನೆಗಳೊಂದಿಗೆ ಜನರ ಕನಸುಗಳು ಚಲ್ಲಾಪಿಲ್ಲಿಯಾಗಿವೆ. ಆಸೆ–ಆಕಾಂಕ್ಷೆಗಳು ಕಮರಿ ಹೋಗಿವೆ. ಹೀಗಾಗಿ, ಸಾಧ್ಯವಾದುದನ್ನು ಮಾಡಲು ಎಲ್ಲರೂ ಮುಂದೆ ಬರಬೇಕು.

-ವೀರಣ್ಣ ಮಡಿವಾಳರ
ಶಿಕ್ಷಕ

Post Comments (+)