ಮಂಗಳವಾರ, ಜನವರಿ 28, 2020
21 °C
ಹೃದ್ರೋಗ ತಜ್ಞ, ಏಮ್ಸ್‌ ನಿರ್ದೇಶಕರ ಸಲಹೆ

‘ಹೊಟ್ಟೆ ಕಿಚ್ಚು ಬಿಡಿ, ಒತ್ತಡದಿಂದ ಮುಕ್ತರಾಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಬೇರೊಬ್ಬರ ಬಗ್ಗೆ ಅನಗತ್ಯವಾಗಿ ‘ವಿಷ’ ಕಾರುವ, ಮನಸ್ಸಿನೊಳಗೇ ಅಸೂಯೆ ಬೆಳಸಿಕೊಳ್ಳುವ ವ್ಯಕ್ತಿಗಳಲ್ಲಿ ಒಂದು ಬಗೆಯ ಒತ್ತಡ ಸೃಷ್ಟಿ ಆಗುತ್ತದೆ. ಇದಕ್ಕೆ ‘ಟಾಕ್ಸಿಕ್‌ ಸ್ಟ್ರೆಸ್‌’ ಎನ್ನಲಾಗುತ್ತದೆ.

ತಮ್ಮಷ್ಟಕ್ಕೆ ತಾವೇ ಈ ಒತ್ತಡ ಸೃಷ್ಟಿಸಿಕೊಳ್ಳುವ ಮೂಲಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದ್ರೋಗಕ್ಕೆ ದಿಡ್ಡಿ ಬಾಗಿಲು ತೆರೆಯುತ್ತಾರೆ. ಇಂತಹ ವ್ಯಕ್ತಿಗಳ ಜೀನ್‌ ಕೂಡ ಬದಲಾಗುತ್ತದೆ. ಆರೋಗ್ಯವಂತ ಮಿದುಳು ಕೂಡ ವಿರೂಪಗೊಳ್ಳುತ್ತದೆ ಎನ್ನುತ್ತಾರೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹೃಷಿಕೇಶ) ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ.ಇಂದ್ರನಿಲ್‌ ಬಸು ರೇ.

‘ಇನ್ನೊಬ್ಬನಿಗೆ ತಮಗಿಂತ ಹೆಚ್ಚು ಸಂಬಳ ಬಂದರೆ, ಉತ್ತಮ ಹುದ್ದೆಯಲ್ಲಿದ್ದರೆ ಅನಗತ್ಯವಾಗಿ ಒತ್ತಡ ಆರಂಭವಾಗುತ್ತದೆ. ಇಂತಹ ಮನೋವೃತ್ತಿ ಎಲ್ಲರಲ್ಲೂ ಇರುತ್ತದೆ. ಆದರೆ, ಬೇರೆ ಬೇರೆ ಪ್ರಮಾಣದಲ್ಲಿರುತ್ತದೆ. ಇದರಿಂದ ಮನಸ್ಸಿನೊಳಗೇ ಉರಿ ಆರಂಭವಾಗುತ್ತದೆ, ಕ್ರಮೇಣ ವಿವಿಧ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ’ ಎಂದರು.

ಮನೋ ಒತ್ತಡದಿಂದ 2025ರ ವೇಳೆಗೆ ಭಾರತದಲ್ಲಿ ಹೃದಯದ ಕಾಯಿಲೆ ಶೇ 20ರಷ್ಟು ಹೆಚ್ಚಳವಾಗುತ್ತದೆ. ಅಮೆರಿಕದ ಹಾದಿಯಲ್ಲೇ ಭಾರತ ಸಾಗುತ್ತಿದೆ. ಇದರಿಂದ ದೇಶದ ಮೇಲೆ ಆರ್ಥಿಕವಾಗಿ ಆಗುವ ಹೊರೆ ತಡೆಯುವುದು ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು. ಒಂದು ಸಣ್ಣ ಹೃದಯ ಸಮಸ್ಯೆಗೆ 5 ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿದರೆ ಕನಿಷ್ಠ ₹1.60 ಲಕ್ಷ ಖರ್ಚು ಬರುತ್ತದೆ ಎಂದು ಹೇಳಿದರು.

ಟಿಬೆಟ್‌ ಬೌದ್ಧ ಸನ್ಯಾಸಿಗಳು, ಯೋಗಿಗಳು, ಋಷಿಗಳು ಧ್ಯಾನದಿಂದ ರಕ್ತದ ಒತ್ತಡ, ಹೃದಯದ ಬಡಿತವನ್ನು ತಮಗೆ ಬೇಕಾದ ರೀತಿಯಲ್ಲಿ ನಿಯಂತ್ರಿಸಿಕೊಳ್ಳಬಲ್ಲರು. ಈ ಮೂಲಕ ನರ ಮಂಡಲದ ಮೇಲೆ ಸ್ವಯಂ ನಿಯಂತ್ರಣ ಸಾಧಿಸುವುದನ್ನು ಅಮೆರಿಕದ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಅಮೆರಿಕ ದೇಶದ ಎಲ್ಲ ಪ್ರಮುಖ ಕ್ಯಾನ್ಸರ್‌ ಆಸ್ಪತ್ರೆಗಳೂ ಯೋಗ ಮತ್ತು ಧ್ಯಾನ ವಿಭಾಗಗಳನ್ನು ಹೊಂದಿವೆ. ಆದರೆ, ಭಾರತದಲ್ಲಿ ಯೋಗ– ಧ್ಯಾನ ವ್ಯವಸ್ಥೆಯನ್ನು ಹೊಂದಿರುವ ಆಸ್ಪತ್ರೆ ತೀರಾ ವಿರಳ ಎಂಬುದು ನಾಚಿಕೆಯ ಸಂಗತಿ ಎಂದರು.

ಯೋಗ ಮತ್ತು ಧ್ಯಾನದ ಬಗ್ಗೆ ಭಾರತೀಯ ವಿಜ್ಞಾನಿಗಳು ತಾತ್ಸಾರ ಮನೋಭಾವ ಬಿಡಬೇಕು. ಯೋಗವನ್ನು ತೆರೆದ ಮನಸ್ಸಿನಿಂದ ನೋಡಬೇಕು. ಯೋಗಕ್ಕೂ ಧರ್ಮಕ್ಕೂ ಸಂಬಂಧವಿಲ್ಲ. ಅದು ಧರ್ಮಕ್ಕೆ ಹೊರತಾಗಿದ್ದು, ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಇಂದ್ರನಿಲ್‌ ಸಲಹೆ ನೀಡಿದರು.

ಧ್ಯಾನದಿಂದ ಮಿದುಳು ಸಕಾರಾತ್ಮಕವಾಗಿ ಬದಲಾವಣೆ ಆಗುತ್ತದೆ. ಇದಕ್ಕೆ ನ್ಯೂರೊ ಪ್ಲಾಸ್ಟಿಸಿಟಿ ಎನ್ನಲಾಗುತ್ತದೆ ಎಂದು ಅವರು ವಿವರಿಸಿದರು.

‘ಓಂ’ಕಾರದಿಂದ ಮಿದುಳಿನಲ್ಲಿ ಬದಲಾವಣೆ!

ನಿರಂತರವಾಗಿ ‘ಓಂ’ಕಾರ ಉಚ್ಚರಿಸುವುದರಿಂದ ಮಾನವರ ಮಿದುಳಿನಲ್ಲಿ ಬದಲಾವಣೆ ಆಗುವುದನ್ನು ಪತ್ತೆ ಮಾಡಲಾಗಿದೆ. ಈ ಸಂಶೋಧನೆ ವಿಶ್ವದ ಪ್ರಖ್ಯಾತ ನಿಯತಕಾಲಿಕೆ ‘ಟೈಮ್‌’ನಲ್ಲೂ ಪ್ರಕಟವಾಗಿದೆ ಎಂದು ನಿಮ್ಹಾನ್ಸ್‌ ನಿರ್ದೇಶಕ ಡಾ.ಗಂಗಾಧರ ಅವರು ಹೇಳಿದರು.

ಓಂಕಾರದ ಕಂಪನವೇ ಇದಕ್ಕೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು. ಸ್ಕಿಜೋಫ್ರೆನಿಯಾ ಮತ್ತು ಆಟಿಸಂ ರೋಗಿಗಳೂ ಧ್ಯಾನದ ಅಭ್ಯಾಸ ಮಾಡುವುದರಿಂದ ಸಕಾರಾತ್ಮಕ ಪರಿಣಾಮ ಆಗಿದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು