ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಸ್ಮಾರ್ಟ್‌ ತರಗತಿಗೆ ಸೌರಶಕ್ತಿ ಬಳಕೆ

ಗುಬ್ಬಿ ತಾಲ್ಲೂಕಿನ 72 ಶಾಲೆಗಳಿಗೆ ಎಚ್ಎಎಲ್‌ನಿಂದ ಸೌಲಭ್ಯ
Last Updated 18 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನ 72 ಸರ್ಕಾರಿ ಶಾಲೆಗಳಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸೌರವಿದ್ಯುತ್ ಸಂಪರ್ಕ ಕಲ್ಪಿಸಿದೆ. ಈ ನಿರಂತರ ಸೌರವಿದ್ಯುತ್ ಸೌಲಭ್ಯ ಶಾಲೆಗಳಲ್ಲಿ ಆಧುನಿಕ ಬೋಧನಾ ಉಪಕರಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯವಾಗಿದೆ.

ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಎಚ್‌ಎಎಲ್ ಘಟಕ ತಲೆ ಎತ್ತುತ್ತಿದೆ. ಈ ಪ್ರಯುಕ್ತ 24 ಪ್ರೌಢಶಾಲೆಗಳು ಮತ್ತು 48 ಪ್ರಾಥಮಿಕ ಶಾಲೆಗಳು ಸೌಲಭ್ಯ ಪಡೆದಿವೆ.

ಪ್ರತಿ ಶಾಲೆಗೆ ₹ 7.5 ಲಕ್ಷ ವೆಚ್ಚದಲ್ಲಿ 7 ಕಿಲೋವಾಟ್ ಸಾಮರ್ಥ್ಯದ 14 ಬ್ಯಾಟರಿ, ಸೌರಶಕ್ತಿ ಹಲಗೆ ಅಳವಡಿಸಲಾಗಿದೆ. ಒಂದು ಶಾಲೆಯಲ್ಲಿ ಅಳವಡಿಸಿರುವ ಸೌರವಿದ್ಯುತ್‌ನಿಂದ ಕಂಪ್ಯೂಟರ್, ಜೆರಾಕ್ಸ್, ಇಡೀ ಶಾಲೆಗೆ ಅಗತ್ಯವಿರುವ ವಿದ್ಯುತ್, ಸ್ವಯಂ ಚಾಲಿತ ಬೆಲ್, ಪ್ಯಾನ್, ಪ್ರೊಜೆಕ್ಟರ್, ಗ್ರೈಂಡರ್‌, ಸ್ಮಾರ್ಟ್‌ಕ್ಲಾಸ್ ನಡೆಸಬಹುದು.

20 ಸೌರಶಕ್ತಿ: ಕಾಡಶೆಟ್ಟಿಹಳ್ಳಿ ಶಾಲೆಯ 20 ಕೊಠಡಿಗಳಿಗೂ ಸೌರವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಎಚ್ಎಎಲ್ ಸೌರವಿದ್ಯುತ್ ಒದಗಿಸಿದರೆ, ಉಳಿದ ಸಂಪರ್ಕ ವ್ಯವಸ್ಥೆಯನ್ನು ದಾನಿಗಳ ನೆರವು ಹಾಗೂ ಎಸ್‌ಡಿಎಂಸಿ ಮಾಡಿಕೊಂಡಿದೆ. ಇಲ್ಲಿನ ವಿಜ್ಞಾನ ಪ್ರಯೋಗಾಲಯ, ಸಭಾಂಗಣಕ್ಕೂ ಸೌರವಿದ್ಯುತ್ ಬಳಕೆ ಆಗುತ್ತಿದೆ. ಈ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್‌ ನಡೆಸುವಾಗ ಎಲ್‌ಇಡಿ ಪರದೆಗೆ ಸೌರವಿದ್ಯುತ್ ನೆಚ್ಚಿಕೊಳ್ಳಲಾಗಿದೆ.’ಈಗ ಸದಾ ಸೌರಶಕ್ತಿ ಇರುವುದರಿಂದ ಸ್ಮಾರ್ಟ್‌ಕ್ಲಾಸ್‌ಗೆ ಅನುಕೂಲವಾಗಿದೆ. ಇನ್ನು ಶಾಲೆಗಳಲ್ಲಿ ದಾಖಲಾತಿ ಸಹ ಹೆಚ್ಚಿಸಬಹುದು’ ಎನ್ನುವರು ಸಿ.ಎಸ್‌.ಪುರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬಿ.ವಿ.ಗುಂಡಪ್ಪ.

ಪರಿಸರಸ್ನೇಹಿ ಶೌಚಾಲಯ: ಸೌರ ವಿದ್ಯುತ್ ಅಲ್ಲದೆ ತಾಲ್ಲೂಕಿನ ಹದಿಮೂರು ಕಡೆ ಹೈಟೆಕ್ ಶೌಚಾಲಯಗಳನ್ನು ಎಚ್‌ಎಎಲ್ ನಿರ್ಮಿಸಿದೆ. ಇದಕ್ಕೆ ಒಟ್ಟು ₹ 2 ಕೋಟಿ ವ್ಯಯಿಸಿದೆ.

ಗುಬ್ಬಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ವಿಭಾಗಕ್ಕೆ ₹ 1.23 ಕೋಟಿ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಉಳಿದಂತೆ ಬಿಆರ್‌ಸಿ ಕಚೇರಿ, ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ಮಡೇನಹಳ್ಳಿ, ನಿಟ್ಟೂರು, ತ್ಯಾಗಟೂರು ಶಾಲೆಗಳಲ್ಲಿ ತಲಾ ₹ 7 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ತಲೆ ಎತ್ತಿದೆ. ಶೌಚಾಲಯದ ಗುಂಡಿಯಲ್ಲಿ ತ್ಯಾಜ್ಯ ತುಂಬಿದರೆ ಭೂಮಿಯಲ್ಲಿಯೇ ಇಂಗುವ ತಂತ್ರಜ್ಞಾನ ಅಳವಡಿಸಲಾಗಿದೆ.

ನಿರ್ವಹಣೆಗೆ ಯೋಜನೆ ರೂಪಿಸಿಕೊಳ್ಳಿ

‘ಶೌಚಾಲಯಗಳಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಇದೆ. ಈ ಮಾದರಿಯ ಶೌಚಾಲಯಗಳು ಗುಬ್ಬಿ ತಾಲ್ಲೂಕಿನಲ್ಲೇ ಮೊದಲು ನಿರ್ಮಾಣವಾಗಿವೆ. ಇವುಗಳ ನಿರ್ವಹಣೆಗೆ ಪ್ರತಿ ಶಾಲೆಯವರು ಯೋಜನೆ ರೂಪಿಸಿಕೊಳ್ಳಬೇಕು’ ಎಂದು ಅಕ್ಷರ ದಾಸೋಹ ಅಧಿಕಾರಿ ಯೋಗಾನಂದ್ ಕುಮಾರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT