ಕಾಸರಗೋಡು ಕನ್ನಡ ಶಾಲೆಗಳ ರಕ್ಷಣೆಗೆ ವಾಟಾಳ್‌ ಮನವಿ

7
kasargod-vatal

ಕಾಸರಗೋಡು ಕನ್ನಡ ಶಾಲೆಗಳ ರಕ್ಷಣೆಗೆ ವಾಟಾಳ್‌ ಮನವಿ

Published:
Updated:

ಬೆಂಗಳೂರು: ‘ಕಾಸರಗೋಡಿನ ಕನ್ನಡ ಶಾಲೆಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಕೂಡಲೇ ಮುಂದಾಗಬೇಕು’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದ ನಿಯೋಗವು ಉಪ ಮುಖ್ಯಮಂತ್ರಿ ಜಿ‌.ಪರಮೇಶ್ವರ ಅವರಿಗೆ ಮನವಿ ಮಾಡಿದೆ.

ವಿಧಾನ ಸೌಧದಲ್ಲಿ ಶನಿವಾರ ಪರಮೇಶ್ವರ ಅವರನ್ನು ಭೇಟಿ ಮಾಡಿದ ವಾಟಾಳ್ ನಾಗರಾಜ್ ಮತ್ತು ಸಾ.ರಾ.ಗೋವಿಂದು, ‘ಕಾಸರಗೋಡಿನ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ತರಗತಿಗಳಿಗೆ ಮಲೆಯಾಳಿ ಅಧ್ಯಾಪಕರನ್ನು ನೇಮಕ ಮಾಡುವ ಮೂಲಕ ಅನ್ಯಾಯ ಎಸಗಲಾಗುತ್ತಿದೆ. ಈ ರೀತಿಯ ಭಾಷಾ ಹೇರಿಕೆ ಮಾಡದಂತೆ ರಾಜ್ಯ ಸರ್ಕಾರವು ಕೇರಳ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಲಿಖಿತ ಮನವಿ ಸಲ್ಲಿಸಿದರು.

‘ಕೇರಳದಲ್ಲಿ ಶಿಕ್ಷಣದಲ್ಲಿ ಮಲೆಯಾಳಂ ಭಾಷೆಯನ್ನು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಅನ್ಯ ಭಾಷಿಕರ ಮೇಲೆ ಮಲೆಯಾಳಂ ಭಾಷೆ ಹೇರಲಾಗುತ್ತಿದೆ. ಕನ್ನಡ ಶಾಲೆಗಳಲ್ಲಿ ಕನ್ನಡ‌‌ ಬಾರದ ಮಲೆಯಾಳಂ ಶಿಕ್ಷಕರನ್ನು ನೇಮಿಸಲಾಗುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪರಮೇಶ್ವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ‘ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಮಲೆಯಾಳಂ ಭಾಷಾ ಹೇರಿಕೆಯಿಂದ ಕನ್ನಡ ಶಾಲೆಗಳಿಗೆ ಕುತ್ತು ಉಂಟಾಗಿದೆ. ಈ ದಿಸೆಯಲ್ಲಿ ನವೆಂಬರ್ 25ರ ಬಳಿಕ ಕಾಸರಗೋಡಿನಿಂದ ಬೆಂಗಳೂರಿಗೆ ಜಾಥಾ ನಡೆಸಲಿದ್ದೇವೆ’ ಎಂದು ತಿಳಿಸಿದರು.

ಪ್ರವೇಶ ವಂಚಿತ ಕನ್ನಡ ವಿದ್ಯಾರ್ಥಿಗಳು: ‘ಕಾಸರಗೋಡಿನಲ್ಲಿ ದ್ವಿಭಾಷೆ ಬಳಕೆಗೆ ಶಾಸನಾತ್ಮಕ‌ ಮಾನ್ಯತೆ ಇದೆ. ಆದರೂ, ಕೇರಳ‌ ಸರ್ಕಾರ ಅದನ್ನು ಅನುಷ್ಠಾನ ಗೊಳಿಸುತ್ತಿಲ್ಲ ಎಂದು ‘ಕಾಸರಗೋಡು ಕನ್ನಡ ಹೋರಾಟ ಸಮಿತಿ‘ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಕಾಸರಗೋಡು ಅಸಮಾಧಾನ ವ್ಯಕ್ತಪಡಿಸಿದರು.

‘10ನೇ ತರಗತಿವರೆಗೆ ಗಡಿನಾಡು ಪ್ರದೇಶಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಶೈಕ್ಷಣಿಕ ಸೀಟುಗಳನ್ನು ಪಡೆಯುವ ಅವಕಾಶ ಇದೆ. ಆದರೆ, ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಮಲೆಯಾಳಿ ವಿದ್ಯಾರ್ಥಿಗಳು ಕನ್ನಡ ಬಲ್ಲವರೆಂದು ದಾಖಲಾತಿ ಪಡೆಯುತ್ತಿದ್ದಾರೆ. ಇದರಿಂದ ಅರ್ಹ ಕನ್ನಡ ವಿದ್ಯಾರ್ಥಿಗಳು‌ ವೃತ್ತಿಪರ ಶಿಕ್ಷಣದ ಕೋರ್ಸ್‌ಗಳ ಪ್ರವೇಶದಿಂದ ವಂಚಿತರಾಗಿದ್ದಾರೆ‘ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !