ರಸ್ತೆ ಅಗೆಯಲು ಪರವಾನಗಿ ಕಡ್ಡಾಯ: ಜಲಮಂಡಳಿ

7

ರಸ್ತೆ ಅಗೆಯಲು ಪರವಾನಗಿ ಕಡ್ಡಾಯ: ಜಲಮಂಡಳಿ

Published:
Updated:

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ನಿವಾಸಿಗಳು ಇನ್ನು ಮುಂದೆ ಮನೆಗಳಿಗೆ ನೀರು ಹಾಗೂ ಒಳಚರಂಡಿ ಸಂಪರ್ಕ ಪಡೆಯುವಾಗ ರಸ್ತೆಗಳನ್ನು ಅಗೆಯಬೇಕಾದರೆ ಬಿಬಿಎಂಪಿಯಿಂದ ಅನುಮತಿ ಪಡೆಯುವುದು ಕಡ್ಡಾಯ’ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬೆಂಗಳೂರು ಜಲಮಂಡಳಿ) ಜಲಮಂಡಳಿ ಹೈಕೋರ್ಟ್‌ಗೆ ತಿಳಿಸಿದೆ.

ನಗರ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿ ಭರ್ತಿ ಮಾಡಲು ಕೋರಿ ಕೋರಮಂಗಲದ ವಿಜಯನ್‌ ಮೆನನ್‌ ಸೇರಿ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ಎಸ್‌.ಜಿ.ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಜಲಮಂಡಳಿ ಪರ ವಕೀಲರು ನ್ಯಾಯಪೀಠಕ್ಕೆ ವಸ್ತು ಸ್ಥಿತಿ ವರದಿ ಸಲ್ಲಿಸಿ, ‘ಪಾಲಿಕೆ ಅನುಮತಿ ನೀಡಿದರೆ ಮಾತ್ರ ಜಲಮಂಡಳಿ ನಲ್ಲಿ ನೀರು ಸಂಪರ್ಕ ಪ್ರಕ್ರಿಯೆಗೆ ಅನುಮೋದನೆ ನೀಡಲಿದೆ. ತದನಂತರ ಬಿಬಿಎಂಪಿ ಅಗೆದ ರಸ್ತೆಯನ್ನು ಸರಿಪಡಿಸಲಿದೆ’ ಎಂದು ತಿಳಿಸಿದೆ.

‘ಜಲಮಂಡಳಿ ವತಿಯಿಂದಲೇ ನೀರು ಹಾಗೂ ಒಳಚರಂಡಿ ಪೈಪ್‌ಲೈನ್‌ಗಳನ್ನು ಬದಲಿಸುವಾಗ ರಸ್ತೆಗಳನ್ನು ಅಗೆಯಬೇಕಾದ ಸಂದರ್ಭ ಬಂದರೆ ಆಗ ಬಿಬಿಎಂಪಿಗೆ ಮಾಹಿತಿ ನೀಡಲಾಗುತ್ತದೆ. ನಂತರ ಕಾಮಗಾರಿ ಮುಗಿದ ಬಳಿಕ ಆ ರಸ್ತೆಯನ್ನು ಸರಿಪಡಿಸಲಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಜಲಮಂಡಳಿಯೇ ಭರಿಸಲಿದೆ’ ಎಂದು ವಿವರಿಸಿದೆ.

‘ತಗ್ಗು ಪ್ರದೇಶದಲ್ಲಿರುವ ಒಳಚರಂಡಿಗಳನ್ನು ರಸ್ತೆ ಮಟ್ಟಕ್ಕೆ ಎತ್ತರಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ರಸ್ತೆಗಳ ನಿರ್ವಹಣೆ ಹಾಗೂ ಗುಂಡಿಗಳ ಸಮಸ್ಯೆ ಬಗೆಹರಿಸಲು ಪಾಲಿಕೆಗೆ ಜಲಮಂಡಳಿ ಅಗತ್ಯ ಸಹಕಾರ ನೀಡಲಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜಂಟಿ ಸಭೆ: ‘ಬಿಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ನಿಗಮ), ಬಿಎಸ್‌ಎನ್‌ಎಲ್‌ (ಭಾರತ ಸಂಚಾರ ನಿಗಮ ಲಿಮಿಟೆಡ್‌) ಪೊಲೀಸ್‌ ಅಧಿಕಾರಿಗಳು (ಸಂಚಾರ ನಿರ್ವಹಣೆ), ಮೆಟ್ರೊ, ಭಾರತೀಯ ಅನಿಲ ಪ್ರಾಧಿಕಾರ ಕಂಪನಿ ಅಧಿಕಾರಿಗಳ ಜೊತೆ ಜಂಟಿ ಸಭೆ ನಡೆಸಲಾಗಿದೆ. ತಂತಮ್ಮ ವಿಭಾಗಗಳ ಕಾರ್ಯ ನಿರ್ವಹಣೆಯಲ್ಲಿ ರಸ್ತೆಗಳು ಹಾಳಾಗದಂತೆ ಜಾಗ್ರತೆ ವಹಿಸಲು ಸೂಚಿಸಲಾಗಿದೆ’ ಎಂದೂ ತಿಳಿಸಲಾಗಿದೆ.

ಆಕ್ಷೇಪ: ಅರ್ಜಿದಾರರ ಪರ ವಕೀಲೆ ಎಸ್‌.ಆರ್.ಅನೂರಾಧ ಅವರು, ‘ನಗರದ ಅನೇಕ ಕಡೆ ಇನ್ನೂ ಗುಂಡಿಗಳನ್ನು ಮುಚ್ಚಿಲ್ಲ’ ಎಂದು ಆಕ್ಷೇಪಿಸಿದರು.

ಇದಕ್ಕೆ ಬಿಬಿಎಂಪಿಯನ್ನು ಕೆಣಕಿದ ನ್ಯಾಯಪೀಠ, ‘ರಸ್ತೆ ಗುಂಡಿಗಳನ್ನು ಸಂಪೂರ್ಣ ಮುಚ್ಚಿದ್ದೇವೆ ಎಂದು ನಿಮ್ಮ ಹೃದಯ ಮುಟ್ಟಿ ಹೇಳಿ ನೋಡೋಣ’ ಎಂದು ಕೇಳಿತು.

ಇದಕ್ಕೆ ಉತ್ತರಿಸಿದ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ, ‘ಸಂಪೂರ್ಣ ಮುಚ್ಚಿದ್ದೇವೆ ಎಂದು ಹೇಳುವುದಿಲ್ಲ. ಆದರೆ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದರು.

ಕೋರ್ಟ್‌ ನೇಮಿಸಿರುವ ಆಯೋಗವು ಮಲ್ಲೇಶ್ವರ ಪ್ರದೇಶದಲ್ಲಿ ನಡೆಸಿರುವ ಕಾಮಗಾರಿ ಪರಿಶೀಲನೆಗೆ ಸಂಬಂಧಿಸಿದ ವರದಿಗೆ ಪ್ರತ್ಯುತ್ತರ ಸಲ್ಲಿಸಿದರು.

ಬಿಬಿಎಂಪಿ ವತಿಯಿಂದ, ‘ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್’ ಆರಂಭಿಸಿದ್ದೇವೆ. ಎರಡು ‘ಹಾಟ್ ಮಿಕ್ಸ್ ಪ್ಲಾಂಟ್’ ಆರಂಭಿಸಲು ಟೆಂಡರ್ ಕರೆದಿದ್ದೇವೆ. ಐದು ವರ್ಷಗಳ ಕಾಲ ಬಿಬಿಎಂಪಿಯೇ ರಸ್ತೆ ಗುಂಡಿ ಭರ್ತಿ ಮಾಡುವ ಕಾರ್ಯ ನಿರ್ವಹಿಸಲಿದೆ ಎಂದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ದಸರಾ ಹಬ್ಬದ ವೇಳೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಇರುತ್ತದೆ. ಯಾವುದೇ ನೆಪ ಹೇಳದೇ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿ’ ಎಂದು ತಾಕೀತು ಮಾಡಿತು.

‘ಬಿಬಿಎಂಪಿ ಆ್ಯಪ್‌ನಲ್ಲಿ ದಾಖಲಾಗುವ ದೂರುಗಳಿಗೆ ತಕ್ಷಣ ಸ್ಪಂದಿಸಿ, ರಸ್ತೆಗಳ ಸ್ಥಿತಿಗತಿಯ ಫೋಟೊಗಳನ್ನು ಅಪ್‌ಲೋಡ್ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ’ ಎಂದೂ ಸಲಹೆ ನೀಡಿತು.

ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !