ಬುಧವಾರ, ಜುಲೈ 28, 2021
21 °C
ಶಾಶ್ವತ ವರ್ಗಾವಣೆ ಮೂಲಕ ಎಂಜಿನಿಯರ್‌ಗಳ ನೇಮಕಾತಿ

ಜಲಸಂಪನ್ಮೂಲ ಇಲಾಖೆ: ಅಭಿಪ್ರಾಯ ನೀಡಲು ಜುಲೈ 4 ರವರೆಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯು ಶಾಶ್ವತ ವರ್ಗಾವಣೆ ಮೂಲಕ ಎಂಜಿನಿಯರ್‌ಗಳ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ಈ ಬಗ್ಗೆ ಆಸಕ್ತಿ ಹೊಂದಿರುವ ಕಿರಿಯ ಎಂಜಿನಿಯರ್‌ಗಳು ಹಾಗೂ ಸಹಾಯಕ ಎಂಜಿನಿಯರ್‌ಗಳು (ಬ್ಯಾಕ್‌ಲಾಗ್‌ ಅಡಿ ನೇಮಕಗೊಂಡವರು) ಅಭಿಪ್ರಾಯ ತಿಳಿಸುವುದಕ್ಕೆ ಅವಕಾಶ ಕಲ್ಪಿಸಿದೆ.

2004ರ ಜ.20ರವರೆಗಿನ ಜಲಸಂಪನ್ಮೂಲ ಇಲಾಖೆಯ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಗಣನೆಗೆ ತೆಗೆದುಕೊಂಡು ನೇಮಕ ಮಾಡುತ್ತಿರುವುದರಿಂದ 2004ರ ಜ 31ರವರೆಗೆ ಬ್ಯಾಕ್‌ಲಾಗ್‌ ಅಡಿ ನೇಮಕಗೊಂಡ ಕಿರಿಯ ಎಂಜಿನಿಯರ್‌ ಅಥವಾ ಸಹಾಯಕ ಎಂಜಿನಿಯರ್‌ಗಳು ತಮ್ಮ ಅಭಿಮತ ವ್ಯಕ್ತಪಡಿಸಲು ಇಲಾಖೆ ಒಂದು ಬಾರಿ ಮಾತ್ರ ಅವಕಾಶ ಕಲ್ಪಿಸಲಿದೆ. ಅಂತಹವರು ಆನ್‌ಲೈನ್‌ನಲ್ಲಿ ನಮೂನೆ 1ರಲ್ಲಿ ವಿವರ ಸಲ್ಲಿಸಲು ಬರುವ ಜುಲೈ 4ರವರೆಗೆ ಅವಕಾಶ ನೀಡಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರತ್ಯೇಕ ಅಪ್ಲಿಕೇಷನ್‌ ತಯಾರಿಸಲಾಗಿದೆ.

ಇಲಾಖೆಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆಯ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಅಥವಾ ನೌಕರರು ಶಾಶ್ವತ ವರ್ಗಾವಣೆ ಮೂಲಕ ನೇಮಕಗೊಳ್ಳಲು ಅವಕಾಶ ಕಲ್ಪಿಸಿ 2019ರ ನ.25ರಂದು ಜಲಸಂಪನ್ಮೂಲ ಇಲಾಖೆ ಆದೇಶ ಮಾಡಿತ್ತು. ಆದರೆ, ಈ ಆದೇಶದಲ್ಲಿ ಬ್ಯಾಕ್‌ಲಾಗ್‌ ಅಡಿ ನೇಮಕಗೊಂಡ ಎಂಜಿನಿಯರ್‌ಗಳು ತಮ್ಮ ಅಭಿಪ್ರಾಯ ನೀಡಲು ಅವಕಾಶ ನೀಡಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿತ್ತು.

ಈ ಲೋಪ ಸರಿಪಡಿಸುವಂತೆ ಕೋರಿ ಬಗ್ಗೆ  ಕೆಲವು ಸಹಾಯಕ ಎಂಜಿನಿಯರ್‌ಗಳು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಮೊರೆ ಹೋಗಿದ್ದರು. ಶಾಶ್ವತ ವರ್ಗಾವಣೆ ಅಡಿ ನೇಮಕ ಮಾಡಿಕೊಳ್ಳುವಾಗ ಬ್ಯಾಕ್‌ಲಾಗ್‌ ಅಡಿ ನೇಮಕಗೊಂಡ ಎಂಜಿನಿಯರ್‌ಗಳಿಗೂ ಅಭಿಪ್ರಾಯ ನೀಡಲು ಒಂದು ಬಾರಿ ಅವಕಾಶ ನೀಡಬಹುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2020ರ ಮಾರ್ಚ್‌ 7ರಂದು ನಡೆದ ತಜ್ಞರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು