ಮಂಗಳವಾರ, ಮೇ 18, 2021
28 °C
ಮೂರನೇ ವಿಶ್ವಯುದ್ಧವಾದರೆ ಅದು ನೀರಿಗಾಗಿ: ಜಲತಜ್ಞ ರಾಜೇಂದ್ರಸಿಂಗ್

‘ಸಾಂಪ್ರದಾಯಿಕ ವಿಧಾನವೇ ಜಲಸಂರಕ್ಷಣೆಗೆ ಸೂಕ್ತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆಧುನಿಕ ಎಂಜಿನಿಯರಿಂಗ್‌ ವಿಧಾನಗಳಿಗಿಂತ ನಮ್ಮ ಹಿರಿಯರು ಬಳಸುತ್ತಿದ್ದ ಸಾಂಪ್ರದಾಯಿಕ ವಿಧಾನಗಳೇ ಜಲಸಂರಕ್ಷಣೆಗೆ ಸೂಕ್ತ’ ಎಂದು ಜಲತಜ್ಞ ರಾಜೇಂದ್ರಸಿಂಗ್ ಹೇಳಿದರು. 

 ಹೆನ್ರಿ ವೊಕೆನ್‌ ಸ್ಮರಣಾರ್ಥ ನಗರದ ಇಂಡಿಯನ್‌ ಸೋಷಿಯಲ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದ 365 ಜಿಲ್ಲೆಗಳಲ್ಲಿ ಬರಪರಿಸ್ಥಿತಿ ಇದ್ದರೆ, 190 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಇದೆ. ಸಮುದಾಯ ಸಹಭಾಗಿತ್ವದ ಜಲ ನಿರ್ವಹಣೆ ವ್ಯವಸ್ಥೆಯಿಂದ ಮಾತ್ರವೇ ಇದನ್ನು ಎದುರಿಸಬಹುದು’ ಎಂದರು. 

‘ಯಾವುದೇ ಕಾಂಕ್ರೀಟ್‌ ಬಳಸದೆ, ಪ್ಲಾಸ್ಟಿಕ್‌ ಪೈಪ್‌ಗಳನ್ನು ಅಳವಡಿಸದೆ ನೈಸರ್ಗಿಕವಾಗಿ ಕೆರೆಗಳನ್ನು ಕಟ್ಟುತ್ತಿದ್ದರು. ಯಾವುದೇ ಎಂಜಿನಿಯರ್‌ಗಳೂ ಈ ಕಾರ್ಯಕ್ಕೆ ಬೇಕಾಗಿರಲಿಲ್ಲ. ಅದರ ಲ್ಲಿಯೂ, ಗುತ್ತಿಗೆದಾರರು ಕೂಡಾ ಅಗತ್ಯವಿರಲಿಲ್ಲ’ ಎಂದರು. 

‘ದೇಶದಲ್ಲಿ ಅಂತರ್ಜಲ ಪ್ರಮಾಣ ಶೇ 72ರಷ್ಟು ಬರಿದಾಗಿದೆ. ಜಗತ್ತಿನಲ್ಲಿಯೂ ಇದೇ ಪರಿಸ್ಥಿತಿ ಇದೆ. ಮೂರನೇ ವಿಶ್ವಯುದ್ಧವೇನಾದರೂ ಸಂಭವಿಸಿದರೆ ಅದಕ್ಕೆ ಕಾರಣ ನೀರೇ ಆಗಿರುತ್ತದೆ. ಹೀಗಾಗಿ, ಭೂಜಲ ವಿಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಬೇಕಾದ ಅವಶ್ಯಕತೆ ಇದೆ’ ಎಂದು ಅವರು ಹೇಳಿದರು.

‘ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಿವೆ. ಔಷಧ, ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸಂಶೋಧನೆಗಳು ನಡೆಯುತ್ತಿವೆ. ಆದರೆ, ಭವಿಷ್ಯದಲ್ಲಿ ಇದೆಲ್ಲಕ್ಕಿಂತ ಅಗತ್ಯವಾಗಿ ಬೇಕಾಗಿರುವುದು ನೀರು. ಉನ್ನತ ಶಿಕ್ಷಣ, ಔಷಧ ಕೊಡಲು ಸರ್ಕಾರ ಮುಂದೆ ಬಂದರೂ, ಮೊದಲು ನೀರು ಕೊಡಿ ಎಂದು ಜನ ಕೇಳುವಂತಾಗುತ್ತದೆ’ಎಂದರು. 

ಇಂಡಿಯನ್‌ ಸೋಷಿಯಲ್‌ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಜೋಸೆಫ್‌ ಕ್ಸೇವಿಯರ್, ಪರಿಸರವಾದಿ ಭಾರ್ಗವಿ ರಾವ್ ಹಾಜರಿದ್ದರು.

‘ನದಿಗಳನ್ನು ನಾಲೆ ಮಾಡಿದ್ದೀರಿ’

‘ನಮ್ಮ ರಾಜ್ಯದಲ್ಲಿ (ರಾಜಸ್ಥಾನ) ನಾವು ನಾಲೆಗಳನ್ನು ನದಿಗಳನ್ನಾಗಿ ಪರಿವರ್ತಿಸುತ್ತಿದ್ದೇವೆ. ಆದರೆ, ನಿಮ್ಮ ಊರಿನಲ್ಲಿ ನೀವು ಅರ್ಕಾವತಿ, ಕುಮದ್ವತಿಯಂತಹ ನದಿಗಳನ್ನು ನಾಲಾಗಳನ್ನಾಗಿ ಮಾಡಿದ್ದೀರಿ’ ಎಂದು ರಾಜೇಂದ್ರಸಿಂಗ್ ಹೇಳಿದರು. 

‘ನಿಮ್ಮಲ್ಲಿ ಎಂಟು ವರ್ಷದ ಮರ, 32 ವರ್ಷದ ಮರದಂತೆ ಕಾಣುತ್ತದೆ. ಅದೇ ನಮ್ಮಲ್ಲಿ, 32 ವರ್ಷದ ಮರ ಎಂಟು ವರ್ಷದ ಮರದಂತೆ ಕಾಣುತ್ತದೆ. ಅಂದರೆ, ನಮ್ಮ ರಾಜ್ಯದಲ್ಲಿ ನೀರಿನ ಲಭ್ಯತೆ ಅಷ್ಟೊಂದು ಕಡಿಮೆ ಇದೆ. ಅಂಥದ್ದರಲ್ಲಿಯೂ ನಾವು ನೈಸರ್ಗಿಕವಾಗಿ ಜಲಮೂಲಗಳ ಪುನರುಜ್ಜೀವನ ಕಾರ್ಯ ಮಾಡುತ್ತಿದ್ದೇವೆ. ಕೃತಕವಾಗಿ ಮರುಪೂರಣ ಕಾರ್ಯ ಕೈಗೊಳ್ಳದೆ, ನೈಸರ್ಗಿಕವಾಗಿ ಜಲಮೂಲಗಳನ್ನು ರಕ್ಷಿಸುವ ಕೆಲಸವಾಗಬೇಕು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು