ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರತಮ್ಯ ಮೆಟ್ಟಿ ನಿಲ್ಲಬೇಕಿದೆ...

ಕನ್ನಡದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಡಿ.ರೂಪಾ ಅಭಿಮತ
Last Updated 18 ಫೆಬ್ರುವರಿ 2019, 11:15 IST
ಅಕ್ಷರ ಗಾತ್ರ

* ನಿಮ್ಮ ದೃಷ್ಟಿಯಲ್ಲಿ ಮಹಿಳಾ ಸಬಲೀಕರಣ ಎಂದರೇನು?
ಸಬಲೀಕರಣ ಎಂಬುದು ಸ್ತ್ರೀ–ಪುರುಷರಿಬ್ಬರಿಗೂ ಬದುಕಲು ಬೇಕಿರುವ ಶಕ್ತಿ. ದೇಶದ ಇತಿಹಾಸ ಎಂದಿಗೂ ಮಹಿಳೆಯರ ಸಬಲೀಕರಣವನ್ನು ಬಯಸಲಿಲ್ಲ. ಈ ಕ್ಷಣಕ್ಕೂ ಆಕೆಗೆ ನ್ಯಾಯಸಮ್ಮತ ಸಮಾನತೆ ಸಿಕ್ಕಿಲ್ಲ. ಮೀಸಲಾತಿ ಎಂಬುದು ಮಹಿಳೆಯನ್ನು ಒಂದಿಷ್ಟು ಗಟ್ಟಿಗೊಳಿಸಿರಬಹುದು ಅಷ್ಟೆ. ಹಾಗೆಂದ ಮಾತ್ರಕ್ಕೆ ಆಕೆ ಪೂರ್ಣ ಸ್ವತಂತ್ರಳಲ್ಲ. ತಮ್ಮ ಜೀವನದ ಬಗ್ಗೆ ಪೂರ್ಣ ಜ್ಞಾನ ಹೊಂದುವುದು, ಸ್ವಂತ ನಿರ್ಣಯಗಳನ್ನು ತೆಗೆದುಕೊಳ್ಳುವುದು, ಅಧಿಕಾರ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಅವಕಾಶ ಹೊಂದುವುದು. ಯಾರ ಅಪ್ಪಣೆಯೂ ಇಲ್ಲದೆ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವುದೇ ಸಬಲೀಕರಣ.

* ಪೊಲೀಸ್ ಇಲಾಖೆಯಲ್ಲಿ ಸಬಲೀಕರಣ ಸಾಕಾರವಾಗುತ್ತಿದೆಯೇ?
ಪೊಲೀಸ್ ಸೇರಿದಂತೆ ಇನ್ನಿತರೆ ಪುರುಷ ಪ್ರಧಾನ ಇಲಾಖೆಗಳಲ್ಲಿ ತಾರತಮ್ಯವಿರುವುದು ಮಾಮೂಲಿ. ಅಂಥ ಪರಿಸ್ಥಿತಿಯನ್ನು ನಾನೂ ಎದುರಿಸಿದ್ದೇನೆ. ಐಪಿಎಸ್‌ ತರಬೇತಿಗೆ ನ್ಯಾಷನಲ್ ಪೊಲೀಸ್ ಅಕಾಡೆಮಿಗೆ ಹೋದಾಗ, ‘ನೀವು ಮಹಿಳೆಯರು ಐಪಿಎಸ್ ಏಕೆ ತಗೋತೀರಾ’ ಎಂದು ನನ್ನ ಬ್ಯಾಚ್‌ಮೇಟ್‌ಗಳು ಕೇಳುತ್ತಿದ್ದರು. ‘ನಾನೊಬ್ಬ ಅಧಿಕಾರಿ. ಆ ನಂತರ ಮಹಿಳೆ’ ಎಂದೇ ಹೇಳಿದ್ದೆ. ಅಂದು ಮಾತನಾಡಿದ್ದವರಿಗೆ ಈಗ ಉತ್ತರ ಸಿಕ್ಕಿರಬಹುದು.

* ಮಹಿಳೆ ಉನ್ನತ ಹುದ್ದೆಗೆ ಏರಿದಾಗ ಎದುರಿಸಬೇಕಾದ ಸವಾಲುಗಳಾವುವು?
ಪೊಲೀಸ್ ಇಲಾಖೆಯಲ್ಲಿ ಮಹಿಳೆಗೆ ಪೋಸ್ಟಿಂಗ್ ನೀಡುವಾಗ ನೂರಾರು ಯೋಚನೆಗಳು ಓಡಾಡುತ್ತವೆ. ಕಠಿಣ ಪರಿಸ್ಥಿತಿಗಳನ್ನು ಮಹಿಳೆ ಹೇಗೆ ನಿಭಾಯಿಸಬಲ್ಲಳು ಎಂಬ ಯಕ್ಷಪ್ರಶ್ನೆ ಸರ್ಕಾರಕ್ಕೆ. ಅದೇ ಕಾರಣಕ್ಕೆ ಬೆಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ ಇನ್ನೂ ಕೆಲ ಆಯಕಟ್ಟಿನ ಸ್ಥಳಗಳಿಗೆ ಈವರೆಗೂ ಮಹಿಳಾ ಅಧಿಕಾರಿಯ ನೇಮಕವಾಗಿಲ್ಲ. ಈ ವಿಚಾರದಲ್ಲಿ ಬಹಳಷ್ಟು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತವೆ.

ಮಹಿಳಾ ಅಧಿಕಾರಿಯ ಕೈಕೆಳಗೆ ಕೆಲಸ ಮಾಡಲು ಕೆಳಹಂತದ ಪುರುಷ ಸಿಬ್ಬಂದಿಗೆ ಇರಿಸು ಮುರಿಸು. ‘ಮೇಡಂ.. ಮೇಡಂ..’ ಎಂದು ಕರೆಯಲು ಅವರಿಗೆ ಮುಜುಗರ. ಮಹಿಳಾ ಅಧಿಕಾರಿಯ ಆದೇಶಗಳನ್ನು ಒಲ್ಲದ ಮನಸ್ಸಿನಿಂದಲೇ ಪಾಲಿಸುವ ಅನಿವಾರ್ಯತೆ ಅವರಿಗೆ. ಇಂಥ ಮನಸ್ಥಿತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಬಾರದು.

* ಕೆಲಸದ ಸ್ಥಳದಲ್ಲಿ ಯಾವ ರೀತಿ ತಾರತಮ್ಯ ಇರುತ್ತದೆ?
ಹೆಣ್ಣುಮಗು ಹುಟ್ಟುವ ಮೊದಲೇ ಅದರ ಬಗ್ಗೆ ಕೀಳುಭಾವನೆ ಹೊಂದಿರುತ್ತಾರೆ. ನಂತರ ಮಗುವಿನ ಲಾಲನೆ, ಪೋಷಣೆ, ಆರೋಗ್ಯ, ಶಿಕ್ಷಣ... ಎಲ್ಲ ವಿಚಾರಗಳಲ್ಲೂ ಕಡೆಗಣಿಸುತ್ತಾ ಹೋಗುತ್ತಾರೆ. ಹೀಗೆ, ಪ್ರತಿ ಹಂತದಲ್ಲೂ ನಿರ್ಲಕ್ಷ್ಯಕ್ಕೆ ಒಳಗಾಗುವ ಮಹಿಳೆಗೆ ಕೆಲಸದ ಸ್ಥಳಗಳಲ್ಲೂ ಸಮಾನತೆ ಸಿಗುವುದಿಲ್ಲ. ಆಕೆಯ ದುಡಿಮೆಯನ್ನು ಅಗೌರವದಿಂದ ಕಾಣುತ್ತಾರೆ.

ಕೆಲಸದ ವೇಳೆ ಮಹಿಳೆಯಿಂದ ಲೋಪವಾದರೆ, ‘ನೋಡಿ ಆಕೆಗೆ ಹ್ಯಾಂಡಲ್ ಮಾಡೋಕೆ ಬರಲ್ಲ’ ಎನ್ನುತ್ತಾರೆ. ಅದೇ ಸ್ಥಾನದಲ್ಲಿ ಪುರುಷ ಇದ್ದರೆ, ‘ಪಾಪ, ಪರಿಸ್ಥಿತಿ ಸರಿ ಇಲ್ಲ’ ಎನ್ನುತ್ತಾರೆ. ಪರೋಕ್ಷವಾಗಿ, ಮಹಿಳೆ ಕೆಲಸ ಮಾಡಲು ಸಮರ್ಥಳಲ್ಲ ಎನ್ನುತ್ತಾರೆ. ಈ ಪರಿಸ್ಥಿತಿ ಬದಲಾಗಬೇಕು.

* ಇಲಾಖೆಯಲ್ಲಿ ಮಹಿಳಾಬಲ ಹೇಗಿದೆ?
ಪೊಲೀಸ್ ಇಲಾಖೆಯನ್ನು ಸೇರುವ ಮಹಿಳೆಯರ ಸಂಖ್ಯೆ ತೀರಾ ಕಡಿಮೆ ಇದೆ. ‘ಪೊಲೀಸ್’ ಎಂಬ ಪದವೇ ದರ್ಪ, ಪೌರುಷ, ಪುರುಷ ಎಂಬುದನ್ನು ಧ್ವನಿಸುತ್ತದೆ. ಹೀಗಾಗಿ, ಈ ಕ್ಷೇತ್ರದಿಂದ ಮಹಿಳೆಯರು ದೂರ ಉಳಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಐಪಿಎಸ್ ಹಾಗೂ ಐಎಎಸ್‌ ಕಡೆ ಮಹಿಳೆಯರು ಒಲವು ತೋರುತ್ತಿದ್ದಾರೆ. ಆ ಸಂಖ್ಯೆ ಇನ್ನೂ ಹೆಚ್ಚಾಗಬೇಕು.

ಮಹಿಳಾ ಸಿಬ್ಬಂದಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶವೇ ಸಿಗುವುದಿಲ್ಲ. ಧೈರ್ಯವಂತ ಮಹಿಳಾ ಸಿಬ್ಬಂದಿ ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅವರೇ ಅಕ್ರಮ ಅಡ್ಡೆಗಳಿಗೆ ನುಗ್ಗಿ, ರೌಡಿಗಳ ಹೆಡೆಮುರಿ ಕಟ್ಟಿರುವ ನಿದರ್ಶನಗಳೂ ಇವೆ. ಮಹಿಳೆಯರು ಇನ್ನಾದರೂ ನಾಲ್ಕು ಗೋಡೆಗಳಿಂದ ಆಚೆ ಬಂದು, ವಾಸ್ತವ ಸಮಾಜವನ್ನು ಕಾಣಲಿ ಎಂಬುದೇ ನನ್ನ ಆಶಯ.

ಅಪ್ಪನ ಕನಸು
‘ಮಗಳು ಐಪಿಎಸ್‌ ಆಗಬೇಕು’ ಎಂಬ ಅಪ್ಪನ ಕನಸನ್ನು ನನಸು ಮಾಡಿದವರು ಡಿ. ರೂಪಾ. ಖಾಕಿ ತೊಟ್ಟು ಪುರುಷ ಅಧಿಕಾರಿಗಳಿಗೆ ಸರಿಸಮನಾಗಿ ನಿಂತ ಅವರು, ಕನ್ನಡದ ಮೊದಲ ಮಹಿಳಾ ಐಪಿಎಸ್ (ಕರ್ನಾಟಕ ಕೇಡರ್) ಅಧಿಕಾರಿ ಅವರು. ದಾವಣಗೆರೆ ಜಿಲ್ಲೆಯ ರೂಪಾ, ಕೇಂದ್ರ ಸೇವೆಯಲ್ಲಿದ್ದ ಜೆ.ಎಚ್. ದಿವಾಕರ್ ಮತ್ತು ಹೇಮಾವತಿ ದಂಪತಿಯ ಹಿರಿಯ ಪುತ್ರಿ.

ಎಸ್ಪಿ/ಡಿಸಿಪಿ, ಸೈಬರ್ ಕ್ರೈಂ ಹಾಗೂ ಬಂದಿಖಾನೆ ಇಲಾಖೆ ಡಿಐಜಿ, ಸಕಾಲ ಮಿಷನ್ ಮುಖ್ಯಸ್ಥೆ, ಸೇರಿದಂತೆ ಗುರುತರ ಹುದ್ದೆಗಳನ್ನು ನಿಭಾಯಿಸಿರುವ ಅವರು, ಈಗಲೂ ಅದೇ ವರ್ಚಸ್ಸಿನಲ್ಲಿ ಗೃಹರಕ್ಷಕ ದಳದ ಐಜಿಪಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಬಹಿರಂಗವಾಗಿ ಹೇಳಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಅವರು, ಒಂದರ್ಥದಲ್ಲಿ ಕಾರಾಗೃಹಗಳ ಸುಧಾರಣೆಗೆ ಕಾರಣೀಕೃತರೂ ಹೌದು. ಮಹಿಳೆಯರು‌ ನಿಜಾರ್ಥದಲ್ಲಿ ಮುಖ್ಯವಾಹಿನಿಗೆ‌ ಬಂದಾಗ ಮಾತ್ರ ಮಹಿಳಾ‌ ದಿನಾಚರಣೆ ಅರ್ಥಪೂರ್ಣ ಎಂಬುದು ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT