ಕಣದಲ್ಲಿ ಪತ್ನಿ, ಸೊಸೆ, ಮಕ್ಕಳ ಪ್ರಚಾರ

ಶನಿವಾರ, ಏಪ್ರಿಲ್ 20, 2019
31 °C
ಚಿಕ್ಕೋಡಿ: ಶಶಿಕಲಾ ಹಾಗೂ ಪುತ್ರರು, ಗಣೇಶ ಹುಕ್ಕೇರಿ ಮತಯಾಚನೆ

ಕಣದಲ್ಲಿ ಪತ್ನಿ, ಸೊಸೆ, ಮಕ್ಕಳ ಪ್ರಚಾರ

Published:
Updated:

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಪರವಾಗಿ, ಕುಟುಂಬದವರು ಕೂಡ ಬಿರುಬಿಸಿಲನ್ನೂ ಲೆಕ್ಕಿಸದೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಮತದಾರರ ಮನವೊಲಿಕೆಗೆ ಶ್ರಮಿಸುತ್ತಿದ್ದಾರೆ.

ಅಲ್ಲಿನ ಹಾಲಿ ಸಂಸದ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಪುತ್ರ, ಚಿಕ್ಕೋಡಿ–ಸದಲಗಾ ಕ್ಷೇತ್ರದ ಶಾಸಕರೂ ಆಗಿರುವ ಗಣೇಶ ಹುಕ್ಕೇರಿ ತಮ್ಮ ಕ್ಷೇತ್ರ ವ್ಯಾಪ್ತಿಗಷ್ಟೇ ಸೀಮಿತವಾಗದೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಹಳ್ಳಿಗಳಿಗೆ ಭೇಟಿ ಕೊಡುತ್ತಿದ್ದಾರೆ.

ಮಠ–ಮಂದಿರಗಳಿಗೆ ತೆರಳಿ ಧಾರ್ಮಿಕ ಮುಖಂಡರ ಆಶೀರ್ವಾದ ಪಡೆಯುತ್ತಿದ್ದಾರೆ. ಈ ಮೂಲಕ ವಿವಿಧ ವರ್ಗದವರ ಮತಗಳನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ. ನಿತ್ಯ ಹಲವು ಹಳ್ಳಿಗಳನ್ನು ಸುತ್ತುತ್ತಿದ್ದಾರೆ. ತಂದೆಯನ್ನು ಮತ್ತೊಮ್ಮೆ ಲೋಕಸಭೆಗೆ ಕಳುಹಿಸಬೇಕೆಂದು ಬೆವರು ಹರಿಸುತ್ತಿದ್ದಾರೆ. ಯುವಕರಾದ ಅವರು ಮುಖ್ಯವಾಗಿ ಯುವಜನರನ್ನು ಗುರಿಯಾಗಿಸಿಕೊಂಡು ಪ್ರಚಾರಕ್ಕಿಳಿದಿದ್ದಾರೆ; ಹಿರಿಯರನ್ನು ಕೂಡ ಕಡೆಗಣಿಸುತ್ತಿಲ್ಲ. ಅವರಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಾಥ್ ನೀಡುತ್ತಿದ್ದಾರೆ. ನೀರು, ಮಜ್ಜಿಗೆ, ಎಳನೀರು ಕೊಟ್ಟು, ಕೆಲವೆಡೆ ಊಟ ಬಡಿಸಿ ಆತಿಥ್ಯ ತೋರುತ್ತಿದ್ದಾರೆ.

ಹುಕ್ಕೇರಿ ಪುತ್ರಿಯರಾದ ಸವಿತಾ ಹಾಗೂ ಪೂರ್ಣಿಮಾ, ಸೊಸೆ ಸ್ವಪ್ನಾಲಿ ಸಹ ಪ್ರಚಾರ ಮಾಡುತ್ತಿದ್ದಾರೆ.

ಕುಟುಂಬವೇ ಅಖಾಡಕ್ಕೆ: ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರವಾಗಿಯೂ ಇಡೀ ಕುಟುಂಬ ಅಖಾಡಕ್ಕಿಳಿದಿದೆ. ಪತ್ನಿ, ನಿಪ್ಪಾಣಿಯ ಶಾಸಕಿ ಶಶಿಕಲಾ ಜೊಲ್ಲೆ, ಪುತ್ರರಾದ ಜ್ಯೋತಿಪ್ರಸಾದ ಹಾಗೂ ಬಸವ‍ಪ್ರಸಾದ ಪ್ರತ್ಯೇಕವಾಗಿ ಓಡಾಡುತ್ತಿದ್ದಾರೆ. ಶಶಿಕಲಾ ತಮ್ಮ ಕ್ಷೇತ್ರದೊಂದಿಗೆ ಇತರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಪತಿಯನ್ನು ಈ ಬಾರಿ ಗೆಲ್ಲಿಸಿಕೊಳ್ಳಬೇಕೆಂದು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಪತಿಗೂ ಮುನ್ನವೇ ಕ್ಷೇತ್ರದತ್ತ ಹೊರಡುತ್ತಿದ್ದಾರೆ. ಅಪ್ಪ–ಅಮ್ಮನಿಗೆ ಇಬ್ಬರು ಪುತ್ರರೂ ಹೆಗಲು ಕೊಡುತ್ತಿದ್ದಾರೆ.

ನಿತ್ಯವೂ ಅಭ್ಯರ್ಥಿಗಳು ಹಾಗೂ ಕುಟುಂಬದವರು ಪ್ರತ್ಯೇಕ ವೇಳಾಪ‍ಟ್ಟಿ ಸಿದ್ಧಪಡಿಸಿಕೊಂಡು ಬೆಳಿಗ್ಗೆಯಿಂದ ಬಹುತೇಕ ರಾತ್ರಿವರೆಗೂ ಕ್ಷೇತ್ರ ಸಂಚಾರ ಮಾಡುತ್ತಿದ್ದಾರೆ. ಅಲ್ಲಿ ಸದ್ಯದ ಮಟ್ಟಿಗೆ ಕುಟುಂಬದವರೇ ‘ಸ್ಟಾರ್‌ ಪ್ರಚಾರಕ’ರಂತಾಗಿದ್ದಾರೆ. ಹಳ್ಳಿ–ಹಳ್ಳಿಗಳಲ್ಲಿ ಜನರನ್ನು ಸಂಪರ್ಕಿಸಿ ಮತ ಯಾಚಿಸುತ್ತಿದ್ದಾರೆ. ಕುಟುಂಬದ ಎಲ್ಲರ ಮತಗಳನ್ನೂ ತಮ್ಮ ಅಭ್ಯರ್ಥಿಗೆ ‘ದಾನ’ ಕೇಳುತ್ತಿದ್ದಾರೆ. ಅವರನ್ನು ನೋಡಲು ಜನರು ಸೇರುತ್ತಿರುವುದು ವಿಶೇಷ.

ಸ್ವಾಗತ, ಸುತ್ತಾಟ: ಮತ ಕೇಳಲು ಬರುವ ಅವರಿಗೆ ಆಯಾ ಪಕ್ಷದ ಅಭ್ಯರ್ಥಿಗಳ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಆತ್ಮೀಯ ಸ್ವಾಗತ ನೀಡುತ್ತಿದ್ದಾರೆ. ಊರು ಸುತ್ತಾಡಿಸಿ, ವಕಾಲತ್ತು ವಹಿಸುತ್ತಿದ್ದಾರೆ. ಕೆಲವು ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಕುಟುಂಬದವರು ಜಂಟಿಯಾಗಿಯೇ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಕ್ಷೇತ್ರದಾದ್ಯಂತ ತಂದೆ ಪರವಾಗಿ ಒಲವಿದೆ. ಅವರು ಈವರೆಗೆ ಮಾಡಿರುವ ಅಭಿವೃದ್ಧಿ ನೆರವಾಗಲಿದೆ. 40 ವರ್ಷಗಳಿಂದಲೂ ಜನಸೇವೆ ಮಾಡಿದ್ದಾರೆ. ಇದನ್ನು ಮತದಾರರು ನೆನೆಯುತ್ತಿದ್ದಾರೆ. ದಿನಕ್ಕೆ 18ರಿಂದ 20 ಹಳ್ಳಿಗಳಿಗೆ ಭೇಟಿ ನೀಡಿ ತಂದೆ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಬೆಳಿಗ್ಗೆ ಮನೆ ಬಿಟ್ಟರೆ ಎಷ್ಟು ಹೊತ್ತಿಗೆ ವಾಪಸಾಗುತ್ತೇನೆ ಎನ್ನುವುದನ್ನು ಹೇಳಲಾಗದು. ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈ ಬಾರಿಯೂ ಅವರು ಆಯ್ಕೆಯಾಗುವ ವಿಶ್ವಾಸವಿದೆ’ ಎಂದು ಗಣೇಶ ಹುಕ್ಕೇರಿ ಪ್ರತಿಕ್ರಿಯಿಸಿದರು.

‘ದಿನವೂ 10ರಿಂದ 12 ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಈ ಬಾರಿಯ ಚುನಾವಣೆ ಏಕೆ ಮಹತ್ವದ್ದಾಗಿದೆ, ನರೇಂದ್ರ ಮೋದಿ ಮತ್ತೊಮ್ಮೆ ಏಕೆ ಪ್ರಧಾನಿಯಾಗಬೇಕು ಎನ್ನುವುದನ್ನು ತಿಳಿಸುತ್ತಿದ್ದೇನೆ. ಜೊತೆಗೆ, ನಾನು ಹಾಗೂ ಪತಿ ಅಣ್ಣಾಸಾಹೇಬ ಅವರು ಮಾಡಿರುವ ಕೆಲಸಗಳನ್ನು ಕೂಡ ತಿಳಿಸಿ, ಬೆಂಬಲ ಕೋರುತ್ತಿದ್ದೇನೆ. ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ’ ಎಂದು ಶಶಿಕಲಾ ಜೊಲ್ಲೆ ಹೇಳಿದರು.

ಕ್ಷೇತ್ರದಲ್ಲಿ ನಿಪ್ಪಾಣಿ, ಅಥಣಿ ತಾಲ್ಲೂಕು ಸೇರಿದಂತೆ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಅವರ ಮನವೊಲಿಕೆಗಾಗಿ ಅಭ್ಯರ್ಥಿಗಳು, ಕುಟುಂಬದವರು ಮರಾಠಿ ಭಾಷೆಯ ಅಸ್ತ್ರವನ್ನೂ ಪ್ರಯೋಗಿಸುತ್ತಿರುವುದು ಕಂಡುಬಂದಿದೆ. ಬೆಂಬಲಿಗರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸದಲ್ಲೂ ತೊಡಗಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !